ನವದೆಹಲಿ, ಅ. 8: ಮುಖ್ಯ ಚುನಾವಣೆ ಆಯುಕ್ತ (Chief Election Commissioner) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ 'ಇಂಡಿಯಾ' ಒಕ್ಕೂಟ ದೆಹಲಿಯಲ್ಲಿ ನಡೆಸುತ್ತಿರುವ ಬೃಹತ್ ಪ್ರತಿಭಟನೆ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟ ಉಗ್ರರೂಪ ತಾಳುತ್ತಿರುವ ಹಿನ್ನೆಲೆಯಲ್ಲಿ ವಿಪಕ್ಷಗಳ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತಿತರರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನೀಡಿರುವ ಮಾಹಿತಿ ಪ್ರಕಾರ, 'ಇಂಡಿಯಾ' ಒಕ್ಕೂಟದ ನಾಯಕರು ಅಕ್ಟೋಬರ್ 7, 8 ಅಥವಾ 9ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿಗೆ ಸಮಯ ಕೋರಿ ಪತ್ರ ಬರೆದಿದ್ದಾರೆ. ರಾಷ್ಟ್ರಪತಿ ಭವನದ ಸೂಚನೆಯಂತೆ, ಭೇಟಿಯಾಗಲಿರುವ ಪ್ರಮುಖ ನಾಯಕರ ಪಟ್ಟಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ದೆಹಲಿಗೆ ಆಗಮಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮಾತನಾಡಿ, ʼʼಇಂಡಿಯಾʼ ಒಕ್ಕೂಟಕ್ಕೆ ರಾಷ್ಟ್ರಪತಿಯಿಂದ ಅನುಮತಿ ಸಿಕ್ಕರೆ ನಾನು ಕೂಡ ನಿಯೋಗದೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದೇನೆʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ನಾಯಕರಿಂದ ದೆಹಲಿಯಲ್ಲಿ ನಡೆದ ಪ್ರತಿಭಟನೆ:
3ನೇ ದಿನ ರಾಜ್‌ಘಾಟ್ ಕಡೆಗೆ ಪ್ರತಿಭಟನಾ ಮೆರವಣಿಗೆ
ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದ ಎರಡನೇ ಮಧ್ಯಾಹ್ನದ ಉಪಹಾರ ಸಭೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ನಾಯಕರು ಹಾಗೂ ಇತರ ಸಂಸದರು ಭಾಗವಹಿಸಿದರು. ಸಭೆಯ ನಂತರ ನಾಯಕರು ಗಾಂಧಿ ಸ್ಮಾರಕ, ರಾಜ್‌ಘಾಟ್ ಕಡೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲು ಮೆರವಣಿಗೆಯಲ್ಲಿ ತೆರಳಿದರು. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ʼʼನಮ್ಮ ಹಿರಿಯ ನಾಯಕರು ಹೋರಾಡಿ ತಂದಿದ್ದ ಪ್ರಜಾಪ್ರಭುತ್ವ ಮತ್ತು ಮತದಾನದ ಹಕ್ಕನ್ನು ಮೋದಿ ಸರ್ಕಾರ ಕಸಿದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರಕ್ಕೆ ಮತ್ತು ಪ್ರಧಾನಿ ಮೋದಿ ಅವರಿಗೆ ಸದ್ಬುದ್ಧಿ ಬರಲಿ ಎಂದು ನಾವು ಗಾಂಧಿ ಸ್ಮಾರಕದಲ್ಲಿ ಕುಳಿತು ಪ್ರಾರ್ಥಿಸಲಿದ್ದೇವೆ. ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಈ ಹೋರಾಟ ನಿಲ್ಲುವುದಿಲ್ಲʼʼ ಎಂದು ಘೋಷಿಸಿದ್ದಾರೆ.
CEC ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ವೇಳೆ ಹೈಡ್ರಾಮಾ; ರಾಹುಲ್, ಪ್ರಿಯಾಂಕಾ ಸೇರಿ ಹಲವರ ಬಂಧನ
ಇದು ಪ್ರಜಾಪ್ರಭುತ್ವ ಉಳಿಸುವ ಹೋರಾಟ: ರಾಹುಲ್ ಗಾಂಧಿ
ಮೆರವಣಿಗೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಕ್ಯಾರೇ ಎನ್ನುವುದಿಲ್ಲ ಎಂದಿದ್ದಾರೆ. ʼʼದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಬಳಿಸಲು ಯತ್ನಿಸುತ್ತಿರುವವರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆʼʼ ಎಂದು ಹೇಳಿದ್ದಾರೆ. ಮತ್ತೊಂದೆಡೆ, ದೆಹಲಿ ಪೊಲೀಸರು ಪ್ರತಿಭಟನಾ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದ್ದು, ಜಂತರ್ ಮಂತರ್, ರಾಜಪಥ್ ಹಾಗೂ ಕನ್ನಾಟ್ ಪ್ಲೇಸ್ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹೈ ಅಲರ್ಟ್ ಘೋಷಿಸಿದ್ದಾರೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.