ನವದೆಹಲಿ, ಫೆ.11: ಸದನದಲ್ಲಿ ಲಘು ಆರೋಪ ಮಾಡುವ ಮೊದಲು ರಾಹುಲ್ ಗಾಂಧಿ (Rahul Gandhi) ಅದಕ್ಕೆ ಪೂರಕವಾಗಿ ದೃಢೀಕೃತ ದಾಖಲೆಗಳನ್ನು ಸಲ್ಲಿಸಿ, ನಿಯಮಬದ್ಧವಾಗಿ ನಡೆದುಕೊಳ್ಳಲಿ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸವಾಲು ಹಾಕಿದ್ದಾರೆ. ದೆಹಲಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಹುಲ್ ಗಾಂಧಿ ಮೊದಲು ಸದನದ ನಿಯಮಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲೆಂದು ತಿರುಗೇಟು ನೀಡಿದ್ದಾರೆ.
ಆಧಾರ ರಹಿತ ಆರೋಪ, ನಿರೂಪಣೆಗೆ ಸಂಸತ್ತು ವೇದಿಕೆಯಲ್ಲ. ಇಲ್ಲಿ ಮಾತನಾಡುವ ಪ್ರತಿಯೊಂದು ಪದವೂ ಸಾಂವಿಧಾನಿಕ ತೂಕವನ್ನು ಹೊಂದಿರುತ್ತದೆ. ಹಾಗಾಗಿ ಸತ್ಯಾಸತ್ಯತೆ, ದಾಖಲೆಗಳು ಮತ್ತು ಹೊಣೆಗಾರಿಕೆಯಿಂದ ಕೂಡಿರಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಯಾವುದೇ ಆರೋಪ ಹೊರಿಸುವ ಮುನ್ನ ಸದನದೆದುರು ದೃಢೀಕೃತ ದಾಖಲೆಗಳನ್ನಿರಿಸಲಿ. ತಮ್ಮ ಹಕ್ಕುಗಳಿಗೆ ಸಹಿ ಮಾಡಿ ಪ್ರತಿಪಾದಿಸಬೇಕು ಮತ್ತು ಪ್ರತಿಯೊಂದು ಪದವನ್ನು ಅತ್ಯಂತ ಜವಾಬ್ದಾರಿಯಿಂದ ಹೇಳಬೇಕು ಎಂದಿದ್ದಾರೆ.
ಕೇವಲ ಪ್ರತಿಪಾದನೆಗಳ ಪುನರಾವರ್ತನೆಯಿಂದ ಸುಳ್ಳು ಸತ್ಯವಾಗುವುದಿಲ್ಲ. ಸಾಂವಿಧಾನಿಕ ಪೀಠದಲ್ಲಿ ಕುಳಿತವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರೇ ಆಗಿದ್ದರೂ ರಾಹುಲ್ ಗಾಂಧಿ ಗೌರವ ತೋರಬೇಕು ಎಂದು ಸಲಹೆ ನೀಡಿದ್ದಾರೆ.
'ಮಾಜಿ ಕಾಂಗ್ರೆಸ್ ವ್ಯಕ್ತಿ' ಎನ್ನುವುದು ತರವಲ್ಲ
ಸಾಂವಿಧಾನಿಕ ಪೀಠದಲ್ಲಿ ಕುಳಿತವರನ್ನು ರಾಹುಲ್ ಗಾಂಧಿ ʼಮಾಜಿ ಕಾಂಗ್ರೆಸ್ ವ್ಯಕ್ತಿ' ಎಂದು ಕರೆಯುವುದು ಸರಿಯಲ್ಲ. ಅದು ಅವರ ಮೇಲೆ ಮಾಡಿರುವ ನೇರ ದಾಳಿಯಾಗಿದೆ. ಸದನದ ಸದಸ್ಯರನ್ನು ವೃಥಾ ಆರೋಪದಿಂದ ಅವಮಾನಿಸುವುದನ್ನೇ ರೂಢಿಸಿಕೊಂಡಂತಿದೆ ಎಂದು ಖಂಡಿಸಿದ್ದಾರೆ.
PM Surya Ghar Yojana: ಪಿಎಂ ಸೂರ್ಯಘರ್ ಯೋಜನೆಯಡಿ 16,000 ಕೋಟಿ ಸಬ್ಸಿಡಿ ಸಕ್ರಿಯ: ಪ್ರಲ್ಹಾದ್ ಜೋಶಿ
ಕಾಗದದ ತುಣುಕು ತಂದು ಪ್ರಮಾಣೀಕರಿಸುತ್ತೇನೆ ಎನ್ನುವುದು ತರವಲ್ಲ
ಸದನದ ಸದಸ್ಯರ ವಿರುದ್ಧ ಆರೋಪ ಬಂದರೆ, ಆ ಸದಸ್ಯರಿಗೆ ನೋಟಿಸ್ ನೀಡಬೇಕು. ಯಾವುದೋ ಒಂದು ಕಾಗದದ ತುಣುಕನ್ನು ತಂದು, "ನಾನು ಪ್ರಮಾಣೀಕರಿಸುತ್ತೇನೆ, ನಾನು ಪ್ರಮಾಣೀಕರಿಸುತ್ತೇನೆ" ಎನ್ನುವುದು ಅಧಿಕೃತವಾಗುವುದಿಲ್ಲ. ರಾಹುಲ್ ಗಾಂಧಿ ಇದನ್ನು ಅರ್ಥ ಮಾಡಿಕೊಳ್ಳಬೇಉ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಟಿ ಬೀಸಿದ್ದಾರೆ.