ಅಂಕಲ್-ಆಂಟಿ ಲವ್ ಸ್ಟೋರಿಗೆ ದುರಂತ ಅಂತ್ಯ; ಪ್ರಿಯಕರನಿಗಾಗಿ 600 ಕಿ.ಮೀ. ಕಾರು ಡ್ರೈವ್ ಮಾಡಿಕೊಂಡು ಹೋದ ಮಹಿಳೆಗೆ ಕೊನೆಗೆ ಆಗಿದ್ದೇನು?
ಪ್ರೀತಿ ಅರಸಿ ಹೋದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಕೈಯಿಂದಲೇ ಭೀಕರವಾಗಿ ಹತ್ಯೆಯಾದ ಘಟನೆ ರಾಜಸ್ಥಾನದಲ್ಲಿನಡೆದಿದೆ. ಕೊಲೆ ಆರೋಪಿಯನ್ನು ಶಿಕ್ಷಕ ಮನರಾಮ್ ಎಂದು ಗುರುತಿಸಲಾಗಿದೆ. ರಾಜಸ್ಥಾನದ ಝುಂಝುನು ನಿವಾಸಿ, ಅಂಗನವಾಡಿ ಸೂಪರ್‌ವೈಸರ್ ಮುಕೇಶ್ ಕುಮಾರಿ ಮೃತ ಮಹಿಳೆ

ಮನರಾಮ್ ಮತ್ತು ಮುಕೇಶ್ ಕುಮಾರಿ -

ಜೈಪುರ: ರಾಜಸ್ಥಾನದಲ್ಲಿ ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾಕ್ಕೆ ಕಡಿಮೆ ಇಲ್ಲದ ರೀತಿಯ ಘಟನೆಯೊಂದು ನಡೆದಿದ್ದು, ಪ್ರೀತಿ ಅರಸಿ ಹೋದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಕೈಯಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾಳೆ (Rajasthan News). ಹೌದು, ಪ್ರಿಯಕರನನ್ನು ಮದುವೆಯಾಗಲು ಸುಮಾರು 600 ಕಿ.ಮೀ. ಕಾರು ಡ್ರೈವ್ ಮಾಡಿಕೊಂಡು ಹೋದ 37 ವರ್ಷದ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ (Crime News). ಆ ಮೂಲಕ ಮತ್ತೊಂದು ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ. ಕೊಲೆ ಆರೋಪದಲ್ಲಿ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಕೊಲೆ ಆರೋಪಿಯನ್ನು ಶಿಕ್ಷಕ ಮನರಾಮ್ ಎಂದು ಗುರುತಿಸಲಾಗಿದೆ.
ರಾಜಸ್ಥಾನದ ಝುಂಝುನು ನಿವಾಸಿ, ಅಂಗನವಾಡಿ ಸೂಪರ್‌ವೈಸರ್ ಮುಕೇಶ್ ಕುಮಾರಿ ಮೃತ ಮಹಿಳೆ. ದಶಕಗಳ ಹಿಂದೆಯೇ ಪತಿಯಿಂದ ದೂರವಾಗಿದ್ದ ಆಕೆಗೆ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಮನರಾಮ್‌ನ ಪರಿಚಯವಾಗಿತ್ತು. ಮೋಡಿ ಮಾತಿನಿಂದ ಆಕೆಯನ್ನು ಸೆಳೆದಿದ್ದ ಆತನೇ ಇದೀಗ ಕೊಲೆ ಮಾಡಿದ್ದಾನೆ.
ಈ ಸುದ್ದಿಯನ್ನೂ ಓದಿ: Physical Abuse: ವ್ಯಕ್ತಿಯ ಖಾಸಗಿ ಅಂಗಕ್ಕೆ ಖಾರದ ಪುಡಿ ಹಾಕಿ ಕ್ರೌರ್ಯ; ದಂಪತಿಯ ಬಂಧನ
ಘಟನೆಯ ವಿವರ
ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದ ಮುಕೇಶ್ ಕುಮಾರಿ ಅನಿವಾರ್ಯ ಕಾರಣಗಳಿಂದ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಕೆಗೆ ಫೇಸ್‌ಬುಕ್ ಮೂಲಕ ಬರ್ಮಾರ್‌ನ ಶಿಕ್ಷಕ ಮನರಾಮ್‌ನ ಪರಿಚಯವಾಯ್ತು. ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಇಬ್ಬರು ಪರಸ್ಪರ ಪ್ರೀತಿಸತೊಡಗಿದರು. ಆಗಾಗ ಭೇಟಿಯಾಗತೊಡಗಿದರು.
ಕೆಲವು ದಿನಗಳ ಹಿಂದೆ ಮುಕೇಶ್ ಕುಮಾರಿ ಮದುವೆಯಾಗುವಂತೆ ಮನರಾಮ್‌ನ ಮನವೊಲಿಸಲು ಝುಂಝುನುವಿನಿಂದ 600 ಕಿ.ಮೀ. ದೂರದಲ್ಲಿರುವ ಬರ್ಮರ್‌ಗೆ ಕಾರು ಚಲಾಯಿಸಿಕೊಂಡು ತೆರಳಿದಳು. ಅದಾಗಲೇ ಮುಕೇಶ್ ತನ್ನ ಪತಿಯಿಂದ ವಿಚ್ಛೇದನ ಪಡೆದಿದ್ದರೆ, ಮನರಾಮ್‌ನ ಡಿವೋರ್ಸ್ ಪ್ರಕರಣ ಕೋರ್ಟ್‌ನಲ್ಲಿತ್ತು. ಆದಷ್ಟು ಬೇಗ ಆತನನ್ನು ವರಿಸುವುದು ಮುಕೇಶ್‌ನ ಉದ್ದೇಶವಾಗಿತ್ತು. ಹೀಗಾಗಿ ಈ ಬಗ್ಗೆ ಅತನೊಂದಿಗೆ ಮಾತನಾಡಲು ಹೋದಳು.
ಪ್ರಕರಣ ಇನ್ನೂ ಕೋರ್ಟ್‌ನಲ್ಲಿರುವುದರಿಂದ ಸ್ವಲ್ಪ ದಿನಗಳ ಬಳಿಕ ಮದುವೆಯಾಗೋಣ ಎಂದು ಮನರಾಮ್ ಹೇಳಿದ್ದರೂ ಮುಕೇಶ್ ಕೇಳುವ ಸ್ಥಿತಿಯಲ್ಲಿರಲಿಲ್ಲ. ಪದೇ ಪದೆ ಈ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆಯುತ್ತಲೇ ಇತ್ತು.
ಅಂದು ಏನಾಯ್ತು?
ಸೆಪ್ಟೆಂಬರ್ 10ರಂದು ತನ್ನ ಆಲ್ಟೋ ಕಾರನ್ನು ಡ್ರೈವ್ ಮಾಡಿಕೊಂಡು ಮನರಾಮ್‌ನ ಹಳ್ಳಿಗೆ ಹೋದಳು. ಅಲ್ಲಿ ಆತನ ಮನೆಯವರಿಗೆ ತಮ್ಮ ಸಂಬಂಧದ ಬಗ್ಗೆ ತಿಳಿಸಿದಳು. ಕೊನೆಗೆ ಪ್ರಕರಣ ಠಾಣೆಯ ಮೆಟ್ಟಿಲೇರಿತು. ಪೊಲೀಸರು ಇಬ್ಬರನ್ನೂ ಕರೆದು ರಾಜಿ ಸಂಧಾನದ ಮೂಲಕ ದೂರನ್ನು ಬಗೆಹರಿಸಲು ಸೂಚಿಸಿದರು.
ಈ ವಿಚಾರವಾಗಿ ಮುಕೇಶ್ ಜತೆ ಪ್ರತ್ಯೇಕವಾಗಿ ಮಾತನಾಡುವುದಾಗಿ ಮನರಾಮ್ ತಿಳಿಸಿದ. ಮಾತಿಗೆ ಮಾತು ಬೆಳೆದು ಮನರಾಮ್ ತಾಳ್ಮೆ ಕಳೆದುಕೊಂಡು ಕಬ್ಬಿಣದ ರಾಡ್‌ನಿಂದ ಮುಕೇಶ್ ತಲೆಗೆ ಬಲವಾಗಿ ಹೊಡೆದ. ಇದರಿಂದ ಆಕೆ ಅಲ್ಲೇ ಸಾವನ್ನಪ್ಪಿದಳು. ಬಳಿಕ ಆಕೆಯನ್ನು ಕಾರಿನ ಡ್ರೈವಿಂಗ್ ಸೀಟ್‌ನಲ್ಲಿ ಕುಳ್ಳಿರಿಸಿ ಅಪಘಾತವೆನ್ನುವಂತೆ ಬಿಂಬಿಸಲು ಮನರಾಮ್ ಮುಂದಾದ. ಆಕೆ ಮೃತಪಟ್ಟ ವೇಳೆ ಮನರಾಮ್‌ನ ಮೊಬೈಲ್ ಫೋನ್ ಅದೇ ಸ್ಥಳದಲ್ಲಿರುವುದು ಕಂಡುಕೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.