ಹೊಸದಿಲ್ಲಿ: ಏ. 22ರಂದು ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ (Pahalgam Attack) ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಸ್ಥಿತಿಯನ್ನು ಪರಿಶೀಲಿಸಲು ಮಂಗಳವಾರ (ಏ. 29) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ದಾಳಿಗೆ ಪ್ರತ್ಯುತ್ತರ ನೀಡುವುದಾಗಿ ಕಳೆದ ವಾರ ಪ್ರತಿಜ್ಞೆ ಮಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದರು.
ರಾಷ್ಟ್ರೀಯ ಸುರಕ್ಷತೆಯ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಪ್ರಧಾನಿ ನೇತೃತ್ವದ ಭದ್ರತಾ ಕ್ಯಾಬಿನೆಟ್ ಸಮಿತಿ (PM-led Cabinet Committee on Security-CCS) ಏ. 30ರಂದು ಸಭೆ ನಡೆಸಲಿದ್ದು, ಅದಕ್ಕಿಂತ 1 ದಿನ ಮೊದಲು ಈ ಸಮಾಲೋಚನೆ ನಡೆದಿದೆ. ವಿಶೇಷ ಎಂದರೆ ಭದ್ರತಾ ಕ್ಯಾಬಿನೆಟ್ ಸಮಿತಿ ವಾರದೊಳಗೆ ನಡೆಸುವ 2ನೇ ಸಭೆ ಇದಾಗಿರಲಿದೆ.
ಸಭೆ ಮುಗಿಸಿ ತೆರಳಿದ ಸಚಿವ ರಾಜನಾಥ್ ಸಿಂಗ್:
ಸಿಸಿಎಸ್ ಸಭೆಯ ನಂತರ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಮಾತುಕತೆ ನಡೆಸಲಿದೆ. ಪ್ರಧಾನಿ ನೇತೃತ್ವದಲ್ಲಿನ ಸಿಸಿಎಸ್‌ನ 5 ಸದಸ್ಯರ ಜತೆಗೆ ಇದು ರಸ್ತೆ ಸಾರಿಗೆ ಸಚಿವರು, ಆರೋಗ್ಯ ಸಚಿವರು, ಕೃಷಿ ಸಚಿವರು ಮತ್ತು ರೈಲ್ವೆ ಸಚಿವರನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಜೀವ ಉಳಿಸಿಕೊಳ್ಳಲು ಪ್ರವಾಸಿಗರು ಅಡಗಿಕೊಂಡಿರುವ ಭಯಾನಕ ವಿಡಿಯೋ ವೈರಲ್
ಸಿಸಿಎಸ್‌ನಲ್ಲಿ ಯಾರೆಲ್ಲ ಇದ್ದಾರೆ?
ಪ್ರಧಾನಿ ನರೇಂದ್ರ ಮೋಡಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜತೆಗೆ ಸಿಸಿಎಸ್ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನು ಒಳಗೊಂಡಿದೆ. ಪಹಲ್ಗಾಮ್ ದಾಳಿ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನದ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಈ ಸಭೆಗಳಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಭಾರತ ದೀರ್ಘಾವಧಿಯ ವೀಸಾ ಹೊರತುಪಡಿಸಿ ಪಾಕಿಸ್ತಾನಿ ಪ್ರಜೆಗಳ ತಾತ್ಕಾಲಿಕ ವೀಸಾಗಳನ್ನು ಹಿಂತೆಗೆದುಕೊಂಡಿದೆ. ಸರ್ಕಾರವು ವೈದ್ಯಕೀಯ ವೀಸಾಗಳನ್ನು ಸಹ ರದ್ದುಪಡಿಸಿದೆ. ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲ ಅಧಿಸೂಚಿತ ವೀಸಾಗಳ ಕಾಲಾವಧಿ ಏ. 27ರಂದು ಮುಕ್ತಾಯವಾಗಿದ್ದು, ಈಗಾಗಲೇ ಸುಮಾರು 1,000 ಪಾಕ್ ಪ್ರಜೆಗಳು ಭಾರತದಿಂದ ವಾಪಸ್ ತೆರಳಿದ್ದಾರೆ. ಇದರ ಜತೆಗೆ ಭಾರತವು ಪಾಕಿಸ್ತಾನದ ಶೇ. 80ರಷ್ಟು ಭೂಮಿಗೆ ನೀರುಣಿಸುವ ಸಿಂಧೂ ನದಿ ನೀರಿನ ಒಪ್ಪಂದವನ್ನು ಅಮಾನತುಗೊಳಿಸಿದೆ. ಈ ಒಪ್ಪಂದವನ್ನು ಅಮಾನತುಗೊಳಿಸುವುದು ಯುದ್ಧಕ್ಕೆ ಸಮಾನ ಎಂದು ಪಾಕ್ ತಿಳಿಸಿದೆ. ಜತೆಗೆ ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿದೆ. ಮಾತ್ರವಲ್ಲ ತನ್ನ ದೇಶದಲ್ಲಿನ ಭಾರತೀಯರನ್ನು ತೆರಳಲು ಸೂಚಿಸಿದೆ.
ಕಠಿಣ ಕ್ರಮದ ಸಾಧ್ಯತೆ
ಏ. 30ರ ಸಭೆಯಲ್ಲಿ ಪ್ರಧಾನಿ ಮೋದಿ ನೇತೃತ್ವದದಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಎಲ್ಲರ ಕಣ್ಣು ಬುಧವಾರದ ಸಭೆಯತ್ತ ನೆಟ್ಟಿದೆ.