ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ (Prayagraj)ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಸಮೀಪದ ಅಯೋಧ್ಯೆ ರಾಮ ಮಂದಿರಕ್ಕೂ ಭಕ್ತರ ಪ್ರವಾಹವೇ ಹರಿದು ಬರುತ್ತಿದೆ (Ayodhya Ram Mandir). ಈ ಹಿನ್ನೆಲೆಯಲ್ಲಿ ರಾಮ ಮಂದಿರದಲ್ಲಿ ದೇವರ ದರ್ಶನ ಸಮಯವನ್ನು ವಿಸ್ತರಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ತಿಳಿಸಿದೆ. ಇನ್ನುಮುಂದೆ ದೇಗುಲದ ಬಾಗಿಲು ಬೆಳಗ್ಗೆ 6 ಗಂಟೆಗೆ ತೆರೆಯಲಿದ್ದು, ರಾತ್ರಿ 10 ಗಂಟೆವರೆಗೆ ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಹಿಂದೆ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು.
ದರ್ಶನ ಅವಧಿಯನ್ನು ಹೆಚ್ಚಿಸುವ ಜತೆಗೆ ದೇಗುಲ ಆಡಳಿತ ಮಂಡಳಿ ದೇವರ ಮಂಗಳಾರತಿ ಸಮಯವನ್ನೂ ಬದಲಾಯಿಸಿದೆ. ಹಿಂದೆ ಮುಂಜಾನೆ 4:30ಕ್ಕೆ ನಡೆಯುತ್ತಿದ್ದ ಮಂಗಳ ಆರತಿ ಇನ್ನು ಮುಂಜಾನೆ 4 ಗಂಟೆಗೆ ನಡೆಯಲಿದೆ. ಈ ವೇಳೆ ದೇಗುಲದ ಬಾಗಿಲನ್ನು ಭಾಗಶಃ ಮುಚ್ಚಲಾಗುತ್ತದೆ. ಶೃಂಗಾರ ಆರತಿ ಬೆಳಗ್ಗೆ 6 ಗಂಟೆಗೆ ನೆರವೇರಿಸಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ರಾಜ್‌ಭೋಗ್ ನಡೆಯಲಿದ್ದು, ಈ ವೇಳೆ ಭಕ್ತರಿಗೆ ದರ್ಶನ ಅವಕಾಶವಿರಲಿದೆ. ಸಂಜೆ 7 ಗಂಟೆಗೆ ಸಂಧ್ಯಾ ಆರತಿ ನಡೆಯಲಿದೆ.
ಇನ್ನು ರಾತ್ರಿ 9:30ಕ್ಕೆ ನಡೆಯುತ್ತಿದ್ದ ದಿನದ ಕೊನೆಯ ಆರತಿ ಶಯನ್ ಆರತಿ ರಾತ್ರಿ 10 ಗಂಟೆಗೆ ನೆರವೇರಲಿದೆ. ಬಳಿಕ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ರಾಮ ಮಂದಿರದ ಬಾಗಿಲನ್ನು 2 ಪಾಳಿಯಲ್ಲಿ ತೆರೆಯಾಗುತ್ತದೆ.
ದಾಖಲೆಯ ಸಂಖ್ಯೆಯಲ್ಲಿ ಭಕ್ತರ ಭೇಟಿ
ಪ್ರಾಣ ಪ್ರತಿಷ್ಠೆ ನೆರವೇರಿ 1 ವರ್ಷ ಕಳೆದ ಬಳಿಕವೂ ಅಯೋಧ್ಯೆ ರಾಮ ಮಂದಿರಕ್ಕೆ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಜ. 26ರಿಂದ ಬಸಂತ್ ಪಂಚಮಿಯ ದಿನವಾದ ಫೆ. 3ರವರೆಗೆ ಸುಮಾರು 1 ಕೋಟಿ ಭಕ್ತರು ಬಾಲಕ ರಾಮನ ದರ್ಶನ ಪಡೆದಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಇತ್ತೀಚೆಗೆ ಹೇಳಿತ್ತು. ಸದ್ಯ ರಾಮ ಮಂದಿರ ಉತ್ತರ ಪ್ರದೇಶದ ಆಧ್ಮಾತ್ಮಿಕ ಕೇಂದ್ರವಾಗಿ ಬದಲಾಗಿದ್ದು, ಇಲ್ಲಿಗೆ ಪ್ರತಿದಿನ ಸರಾಸರಿ 3 ಲಕ್ಷ ಮಂದಿ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Droupadi Murmu: ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು!
ಪ್ರಯಾಗ್‌ರಾಜ್‌ನಿಂದ 160 ಕಿ.ಮೀ. ದೂರ
ಮಹಾ ಕಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನಿಂದ ಅಯೋಧ್ಯೆಗೆ ಕೇವಲ 160 ಕಿ.ಮೀ. ಅಂತರ. ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಕಾರ 2024ರ ಮೊದಲ 6 ತಿಂಗಳಲ್ಲಿ 32.98 ಕೋಟಿ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಪೈಕಿ ಅಯೋಧ್ಯೆ ಮತ್ತು ವಾರಾಣಸಿಗೆ ಭೇಟಿ ನೀಡಿದರವರ ಸಂಖ್ಯೆ ಅಧಿಕ.
ಹಲವು ವರ್ಷಗಳ ಹೋರಾಟದ ಬಳಿಕ 2019ರಲ್ಲಿ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಅದರಂತೆ ಕಳೆದ ವರ್ಷ ಜನವರಿಯಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠೆ ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾವಿರಾರು ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು.