ದೆಹಲಿ, ನ. 9: ದೇಶಾದ್ಯಂತದ ಕ್ಯಾನ್ಸರ್ ರೋಗಿಗಳಿಗೆ ಗುಡ್ನ್ಯೂಸ್ ಸಿಕ್ಕಿದ್ದು, ಔಷಧಗಳ ಬೆಲೆ ಇಳಿಕೆ ಇಂದು (ನವೆಂಬರ್ 9) ಜಾರಿಗೆ ಬಂದಿದೆ (Anti-Cancer Formulations). ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಅಧೀನದಲ್ಲಿರುವ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ರಚಿಸಿದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಕ್ಯಾನ್ಸರ್ ನಿಗ್ರಹ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮೇಲೆ ವ್ಯಾಪಾರ ಲಾಭಾಂಶವನ್ನು ಅಕ್ಟೋಬರ್ 17ರಂದು ಮಿತಿಗೊಳಿಸಲಾಗಿತ್ತು. ಈ ಔಷಧಗಳ ಪರಿಷ್ಕೃತ ಎಂಆರ್ಪಿ ಇಂದಿನಿಂದ ಜಾರಿಗೆ ಬಂದಿದೆ.
679 ಬ್ರ್ಯಾಂಡ್ಗಳು ಶೇ. 50ಕ್ಕಿಂತ ಹೆಚ್ಚು ಬೆಲೆ ಇಳಿಕೆ ಮಾಡಿವೆ. ಎಂಆರ್ಪಿಯಲ್ಲಿ ಅತ್ಯಧಿಕ ಶೇ. 96.45ರಷ್ಟು ಕಡಿಮೆಯಾಗಿದೆ. ಬೆಲೆ ಇಳಿಕೆಯ ಪರಿಣಾಮವಾಗಿ, ಗ್ರಾಹಕರಿಗೆ ಅಂದಾಜು ವಾರ್ಷಿಕ 3,540.38 ಕೋಟಿ ರೂ. ಉಳಿತಾಯ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆ:
ಗ್ರಾಹಕರು ಔಷಧ ಪ್ಯಾಕ್ನಲ್ಲಿ ಮುದ್ರಿಸಲಾದ ಪರಿಷ್ಕೃತ ಎಂಆರ್ಪಿಯನ್ನು ಪರಿಶೀಲಿಸಬಹುದು ಮತ್ತು ಫಾರ್ಮಾ ಸಾಹಿ ದಾಮ್ ಮೊಬೈಲ್ ತಂತ್ರಾಂಶ ಅಥವಾ ಎನ್ಪಿಪಿಎ ವೆಬ್ಸೈಟ್ (nppa.gov.in) ಮೂಲಕ ಬೆಲೆಗಳನ್ನು ಪರಿಶೀಲಿಸಬಹುದು. ಯಾವುದೇ ಔಷಧ ಮಾರಾಟಗಾರರು ಅಥವಾ ಆಸ್ಪತ್ರೆಯ ಔಷಧಾಲಯವು ಪರಿಷ್ಕೃತ ಎಂಆರ್ಪಿಗಿಂತ ಹೆಚ್ಚು ದರದಲ್ಲಿ ಮಾರಾಟ ಮಾಡುವಂತಿಲ್ಲ. ಹೆಚ್ಚಿನ ದರ ವಿಧಿಸುವ ಅಥವಾ ಇತರ ಯಾವುದೇ ಬೆಲೆಗೆ ಸಂಬಂಧಿಸಿದ ದೂರಿದ್ದರೆ ಗ್ರಾಹಕರು ತಮ್ಮ ಕುಂದುಕೊರತೆಯನ್ನು ಫಾರ್ಮಾ ಜನ ಸಮಾಧಾನ್ ಪೋರ್ಟಲ್ ಮೂಲಕ ತಿಳಿಸಬಹುದು ಅಥವಾ 1800-111-255 ಸಂಖ್ಯೆಯ ಮೂಲಕ ಎನ್ಪಿಪಿಎ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ಶ್ವಾಸಕೋಶದ ಕ್ಯಾನ್ಸರ್ನಿಂದ ಬದುಕುಳಿದಿದ್ದೀರಾ? ಚಿಕಿತ್ಸೆ ಮುಗಿದ ನಂತರವೇ ನಿಜವಾದ ಚೇತರಿಕೆಯ ಪಯಣ ಆರಂಭ
ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಂದರ್ಭದಲ್ಲಿ ಔಷಧಗಳ ಬೆಲೆ ಇಳಿಕೆ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ದೊಡ್ಡ ಆರ್ಥಿಕ ನೆರವಾಗಲಿದೆ. ವಿಶೇಷವಾಗಿ ದೀರ್ಘಕಾಲ ಔಷಧಗಳನ್ನು ಬಳಸಬೇಕಾದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.