ದೆಹಲಿ, ನ. 5: ಎಸ್ಐಆರ್ ಮತ್ತು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಮರ ಸಾರಿರುವ ವಿಪಕ್ಷಗಳು ಕೆಲವು ತಿಂಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ, ರ್ಯಾಲಿ ಮೂಲಕ ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಿದ್ದು, ಈ ಬಗ್ಗೆ ಅಸಮಾಧಾನ ಹೊಗೆಯಾಡುತ್ತಿದೆ. ಅದರಲ್ಲೂ ನವರಾತ್ರಿ, ದೀಪಾವಳಿಯಂತಹ ಹಬ್ಬದ ಋತುವಿನಲ್ಲಿ ಪ್ರತಿಭಟನೆ ನಡೆಸುವ ಮೂಲಕ ವ್ಯಾಪಾರ ವಹಿವಾಟಿಗೆ ತಡೆ ಒಡ್ಡುತ್ತಿರುವುದಕ್ಕೆ ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಭರ್ಜರಿ ವ್ಯಾಪಾರ ನಡೆಯುವ ಈ ಸಮಯದಲ್ಲೇ ಹೋರಾಟ ನಡೆಸುತ್ತಿರುವುದು ವ್ಯಾಪಾರಿಗಳ ತೀವ್ರ ಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ನವೆಂಬರ್ 1ರಂದು ಇಂಡಿಯಾ ಒಕ್ಕೂಟ ರಾಮ್ಲೀಲಾ ಮೈದಾನದಲ್ಲಿ ಪ್ರತಿಭಟನೆ ಆಯೋಜಿಸಿದ್ದರಿಂದ ವ್ಯಾಪಾರ ವಹಿವಾಟಿಗೆ ತೀವ್ರ ಅಡಣೆ ಉಂಟಾಗಿದ್ದಕ್ಕೆ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಬಹಿರಂಗವಾಗಿಯೇ ಸಿಡಿಮಿಡಿಗೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ರಾಜಕೀಯ ರ್ಯಾಲಿಗಳು ಮತ್ತು ಪ್ರತಿಭಟನೆಗಳಿಂದಾಗಿ ದೆಹಲಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಪದೇ ಪದೆ ಅಡ್ಡಿಯುಂಟಾಗುತ್ತಿರುವ ಬಗ್ಗೆಯೂ ಸಿಎಐಟಿ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದೆ. ಪ್ರತಿಭಟನೆ ನಡೆಸುವ ಹಕ್ಕು ಇನ್ನೊಬ್ಬರ ಜೀವನೋಪಾಯವನ್ನು ನಾಶಪಡಿಸುವಂತಿರಬಾರದು ಎಂದಿದೆ.
ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಬರೆದ ಪತ್ರ:
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ, ಒಂದು ತಿಂಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ವ್ಯಾಪಾರಿಗಳು ಮತ್ತು ಉದ್ಯಮಿಗಳು ಅನುಭವಿಸಿದ ಆರ್ಥಿಕ ನಷ್ಟಗಳಿಗೆ ಸಂಬಂಧಿಸಿದಂತೆ 5 ಪ್ರಶ್ನೆಗಳನ್ನು ಎತ್ತಿದ್ದಾರೆ.
ದೆಹಲಿಯಲ್ಲಿ 2.5 ಲಕ್ಷ ಅಂಗಡಿ ಬಂದ್, ಒಂದೇ ದಿನ 11,000 ಕೋಟಿ ರೂ. ನಷ್ಟ!
ಹಬ್ಬಗಳು ಮತ್ತು ಮದುವೆ ಶಾಪಿಂಗ್ಗೆ ಅತ್ಯಂತ ನಿರ್ಣಾಯಕವಾಗಿರುವ ಈ ಸಮಯದಲ್ಲಿ, ಇಂತಹ ಅಡಚಣೆಗಳು ವಾಣಿಜ್ಯ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ ಎಂದು ವ್ಯಾಪಾರಿಗಳ ಸಂಘಟನೆ ತಿಳಿಸಿದೆ. ಅಲ್ಲದೆ ಗ್ರಾಹಕರು ಮಾರುಕಟ್ಟೆಗಳಿಗೆ ಪ್ರವೇಶಿಸುವುದಕ್ಕೆ ಅಡ್ಡಿಯುಂಟು ಮಾಡಿದ ಪ್ರತಿಭಟನೆಗಳನ್ನು ಬೆಂಬಲಿಸಿದ್ದಕ್ಕಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ರಾಜಕೀಯ ಹಾಗೂ ನೈತಿಕ ಹೊಣೆಗಾರಿಕೆಯ ಬಗ್ಗೆಯೂ ಪ್ರಶ್ನಿಸಿದೆ.
"ರಾಹುಲ್ ಗಾಂಧಿ ಏಕಕಾಲದಲ್ಲಿ ಪರಸ್ಪರ ವಿರುದ್ಧವಾದ ಎರಡು ನಿಲುವುಗಳನ್ನು ಹೊಂದಿದ್ದಾರೆ. ಒಂದು ಕಡೆ, ಅವರು ಸ್ಥಳೀಯ ಮಾರುಕಟ್ಟೆಗಳಲ್ಲಿ ವಸ್ತುಗಳನ್ನು ಖರೀದಿಸುವಂತೆ ಜನರಿಗೆ ಕರೆ ನೀಡುತ್ತಾರೆ; ಇನ್ನೊಂದು ಕಡೆ, ಗ್ರಾಹಕರು ಅದೇ ಮಾರುಕಟ್ಟೆಗಳಿಗೆ ಹೋಗದಂತೆ ತಡೆಯುವ ರಾಜಕೀಯ ಚಟುವಟಿಕೆಗಳು ಮತ್ತು ಪ್ರತಿಭಟನೆಗಳನ್ನು ಬೆಂಬಲ ನೀಡುತ್ತಾರೆ. ಇದು ಕೇವಲ ರಾಜಕೀಯ ಅಸ್ಥಿರತೆ ಮಾತ್ರವಲ್ಲ ಸಾಮಾನ್ಯ ವ್ಯಾಪಾರಿಗಳ ಜೀವನೋಪಾಯಕ್ಕೆ ನೇರವಾಗಿ ಹಾನಿಯನ್ನುಂಟು ಮಾಡುವ ಪ್ರವೃತ್ತಿ" ಎಂದು ಭಾರ್ತಿಯಾ ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಕೇಳಿದ ಆ 5 ಪ್ರಶ್ನೆಗಳು
ಇದೇ ವೇಳೆ ಭಾರ್ತಿಯಾ ರಾಹುಲ್ ಗಾಂಧಿ ಅವರಿಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ.
- ಪ್ರತಿಭಟನೆ ನಡೆಸುವ ಹಕ್ಕು ಎನ್ನುವುದು ವ್ಯಾಪಾರದ ಹಕ್ಕು ಮತ್ತು ಜೀವನೋಪಾಯಕ್ಕೆ ಗಳಿಸುವ ಹಕ್ಕಿಗಿಂತ ಮುಖ್ಯವಾದುದೆ?
- ರಾಷ್ಟ್ರ ರಾಜಧಾನಿಯ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ರಾಜಕೀಯವಾಗಿ ಮತ್ತು ನೈತಿಕವಾಗಿ ಸಮರ್ಥನೀಯವೇ? ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಪರಿಹಾರ ನೀಡುವವರು ಯಾರು?
- ಗ್ರಾಹಕರು ಸ್ಥಳೀಯ ಮಾರುಕಟ್ಟೆಗಳನ್ನು ತಲುಪದಂತೆ ತಡೆಯುವ ಪ್ರತಿಭಟನೆಗಳನ್ನು ಬೆಂಬಲಿಸುತ್ತಲೇ, ಅದೇ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವಂತೆ ರಾಹುಲ್ ಗಾಂಧಿ ಜನರಿಗೆ ಹೇಗೆ ಕರೆ ನೀಡುತ್ತಾರೆ?
- ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪ್ರತಿಭಟನೆಗಳಿಂದ ಉಂಟಾದ ಆರ್ಥಿಕ ನಷ್ಟದ ಜವಾಬ್ದಾರಿ ಒಪ್ಪಿಕೊಳ್ಳುತ್ತವ?
- ಒಂದು ವೇಳೆ ರಾಹುಲ್ ಗಾಂಧಿ ಅವರ ಸ್ವಂತ ವ್ಯವಹಾರ, ಜೀವನೋಪಾಯ ಅಥವಾ ದೈನಂದಿನ ಆದಾಯಕ್ಕೆ ಧಕ್ಕೆಯುಂಟಾಗಿದ್ದರೆ ಅವರು ಇಂತಹ ದೀರ್ಘಕಾಲದ ಅಡಚಣೆಯನ್ನು ಸಹಿಸಿಕೊಳ್ಳುತ್ತಿದ್ದರೆ?
ಈ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಅವರಿಂದ ಪ್ರತಿಕ್ರಿಯೆ ಬರುವವರೆಗೆ ಕಾಯುವುದಾಗಿ ಸಿಎಐಟಿ ತಿಳಿಸಿದೆ. ದೇಶಾದ್ಯಂತ ಧಿಕ್ಕಾರ್ ದಿವಸ್ ಆಚರಿಸಲು ಚಿಂತನೆ ನಡೆಸುತ್ತಿರುವುದಾಗಿಯೂ ಹೇಳಿದೆ. ದಿನಾಂಕವನ್ನು ದೀಪಾವಳಿ ಬಳಿಕ ನಿರ್ಧರಿಸಲಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.