ತಿರುವನಂತಪುರಂ, ನ. 16: ವಾರ್ಷಿಕ ಮಂಡಲ ಮಕರಜ್ಯೋತಿ ಋತುವಿಗಾಗಿ (Mandala-Makaravilakku pilgrimage season) ಕೇರಳಂನ ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಪ್ರಸಿದ್ಧ ತೀರ್ಥ ಕ್ಷೇತ್ರ ಶಬರಿಮಲೆ ದೇಗುಲದ ಬಾಗಿಲು ಸೋಮವಾರ (ನವೆಂಬರ್ 16) ಸಂಜೆ ತೆರೆಯಲಿದೆ. ಅಯ್ಯಪ್ಪನ ದರ್ಶನಕ್ಕಾಗಿ ಆರಂಭ ದಿನ ಸುಮಾರು 30,000 ಭಕ್ತರು ಆನ್ಲೈನ್ ಮೂಲಕ ಬುಕ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಯಾಳಂ ಕ್ಯಾಲಂಡರ್ನ ವೃಶ್ಚಿಕ ಮಾಸದ ಮೊದಲ ದಿನವಾದ ಸೋಮವಾರ ದೇಗುಲದ ಬಾಗಿಲನ್ನು ಮಂಡಲ ಪೂಜೆಗಾಗಿ ತೆರೆಯಲಾಗುತ್ತದೆ.
ತಂತ್ರಿ ಕಂಡರರು ಬ್ರಹ್ಮದತ್ತನ್, ಇ.ಡಿ. ಪ್ರಸಾದ್ ನಂಬೂದಿರಿ ಅವರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಲಾಗುತ್ತದೆ. ಇದೇ ವೇಳೆ ಅರೆಕ್ಕರ ಸುಬ್ರಮಣಿಯನ್ ಶಂಕರನ್ ನಂಬೂದಿರಿ ಶಬರಿಮಲೆಯ ಮುಖ್ಯ ಅರ್ಚಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎ. ದಾಮೋದರನ್ ನಂಬೂದಿರಿ ಮಲಿಕಪ್ಪುರಂ ದೇವಸ್ಥಾನದ ಮೇಲ್ಶಾಂತಿಯಾಗಲಿದ್ದಾರೆ.
ಶಬರಿಮಲೆ ದೇಗುಲದ ಬಾಗಿಲು ಇಂದು ತೆರೆಯಲಿದೆ:
ಪ್ರತಿ ದಿನ 80 ಸಾವಿರ ಭಕ್ತರಿಗೆ ಅವಕಾಶ
ಮಂಗಳವಾರದಿಂದ ಈ ಋತುವಿನಲ್ಲಿ ಪ್ರತಿದಿನ 80 ಸಾವಿರ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆನ್ಲೈನ್ ಮೂಲಕ 60,000 ಮಂದಿ ಮತ್ತು ನಿಲಕ್ಕಲ್ನಲ್ಲಿ 10,000 ಮಂದಿ ಸ್ಪಾಟ್ ಬುಕಿಂಗ್ ಮಾಡಬಹುದು. ಎರುಮೇಲಿ ಮತ್ತು ಪುಲ್ಲುಮೇಡು ಮೂಲಕ ಹಾದುಹೋಗುವ ಸಾಂಪ್ರದಾಯಿಕ ಅರಣ್ಯ ಮಾರ್ಗಗಳಲ್ಲಿ ತಲಾ 3,000 ಹಾಗೂ ವಂಡಿಪೆರಿಯಾರ್ನ ಸತ್ರಂ ಮಾರ್ಗದ ಮೂಲಕ 2,000 ಮಂದಿಗೆ ಹೆಚ್ಚುವರಿ ಸೀಮಿತ ಕೋಟಾಗಳು ಲಭ್ಯ. ಇವೆಲ್ಲದಕ್ಕೂ ಮುಂಗಡ ಆನ್ಲೈನ್ ಬುಕಿಂಗ್ ಕಡ್ಡಾಯ. ಪಂಬಾದಲ್ಲಿ ಸ್ಥಳದಲ್ಲೇ ಬುಕಿಂಗ್ (ಸ್ಪಾಟ್ ಬುಕಿಂಗ್) ಸೌಲಭ್ಯ ಇಲ್ಲ.
ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಆರಂಭದ ದಿನದಂದು ಭಕ್ತರ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮಧ್ಯಾಹ್ನದವರೆಗೆ ನಿಲಕ್ಕಲ್ನಿಂದ ಪಂಬಾ ಕಡೆಗಿನ ಸಂಚಾರವನ್ನು ನಿರ್ವಂಧಿಸಲಾಗಿದೆ. ಈ ಋತುವಿನಲ್ಲಿ ದೇವಾಲಯವು ಪ್ರತಿದಿನ ಮುಂಜಾನೆ 3 ಗಂಟೆಗೆ ತೆರೆಯುತ್ತದೆ ಮತ್ತು ಬೆಳಗ್ಗೆ 11 ಗಂಟೆಯವರೆಗೆ ನೆಯ್ಯಾಭಿಷೇಕ (ತುಪ್ಪದ ಅಭಿಷೇಕ) ನಡೆಯಲಿದೆ. ಮಧ್ಯಾಹ್ನದ ಪೂಜೆಯ ನಂತರ ಮಧ್ಯಾಹ್ನ 1 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಮತ್ತೆ ಅಪರಾಹ್ನ 3 ಗಂಟೆಗೆ ತೆರೆಯುವ ದೇವಾಲಯವು ರಾತ್ರಿ 11 ಗಂಟೆಗೆ ಮುಚ್ಚಲಿದೆ.
ಮಕರವಿಳಕ್ಕು ಉತ್ಸವವು 2027ರ ಜನವರಿ 14ರಂದು ನಡೆಯಲಿದೆ. ಅದಾದ ಬಳಿಕ ಜನವರಿ 20ರ ಬೆಳಗ್ಗೆ 7 ಗಂಟೆಗೆ ದೇಗುಲವನ್ನು ಮುಚ್ಚಲಾಗುತ್ತದೆ. ʼʼಪ್ರತಿದಿನ ದೇಶಾದ್ಯಂತದ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ಸಮಸ್ಯೆಯಾಗಬಾರದೆಂಬ ದೃಷ್ಟಿಯಲ್ಲಿ ಜನ ದಟ್ಟಣೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆʼʼ ಎಂದು ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ. ತಿರುವಾಂಕೂರು ದೇವಸ್ವಂ ಮಂಡಳಿ (TDB)ಗೂ ಈ ಬಗ್ಗೆ ಸೂಚನೆ ನೀಡಿದ್ದಾರೆ.
ಶಬರಿಮಲೆ ಚಿನ್ನ ಕದ್ದ ಅಪರಾಧಿಗಳನ್ನು ಜೈಲಿಗೆ ಅಟ್ಟುತ್ತೇವೆ; ಕೇರಳದ ಜನತೆಗೆ ಪ್ರಧಾನಿ ಮೋದಿ ಗ್ಯಾರಂಟಿ
ʼʼಭದ್ರತೆಯ ಭಾಗವಾಗಿ ಹಾಗೂ ಜನಸಂದಣಿಯನ್ನು ಉತ್ತಮವಾಗಿ ನಿರ್ವಹಿಸುವ ಉದ್ದೇಶದಿಂದ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಲಾಗಿದೆʼʼ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪಿ. ವಿಜಯನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ʼʼಒಮ್ಮೆಗೆ ಸುಮಾರು 6,000 ಯಾತ್ರಾರ್ಥಿಗಳಿಗೆ ಆಶ್ರಯ ನೀಡಬಲ್ಲ ಎರಡು ದೊಡ್ಡ ಶೆಡ್ಗಳನ್ನು ನಿರ್ಮಿಸಲಾಗಿದೆʼʼ ಎಂದು ಅವರು ಹೇಳಿದ್ದಾರೆ.