ಜೈಪುರ: ರಾಜಸ್ಥಾನದಲ್ಲಿ ಬೆಳ್ಳಂ ಬೆಳಗ್ಗೆ ಘನಘೋರ ಘಟನೆಯೊಂದು ನಡೆದಿದ್ದು, ಶಾಲಾ ಕಟ್ಟಡ ಕುಸಿದು(School Building Collapses) ಬಿದ್ದಿದೆ. ಪರಿಣಾಮವಾಗಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಕ್ಕಳು ಅವಶೇಷದಡಿಯಲ್ಲಿ ಸಿಲುಕಿದ್ದಾರೆ. ಝಲಾವರ್ ಜಿಲ್ಲೆಯ ಮನೋಹರ್ ಥಾನಾದ ಪಿಪ್ಲೋಡಿ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ಒಂದೇ ಅಂತಸ್ತಿನ ಕಟ್ಟಡದ ಛಾವಣಿ ಕುಸಿದಾಗ ಶಿಕ್ಷಕರು ಮತ್ತು ಸಿಬ್ಬಂದಿ ಸದಸ್ಯರಲ್ಲದೆ ಸುಮಾರು 40 ಮಕ್ಕಳು ಆವರಣದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಘಟನೆಯ ವಿಡಿಯೊ ಇಲ್ಲಿದೆ
ಮೂಲಗಳ ಪ್ರಕಾರ, ಕಟ್ಟಡವು ಶಿಥಿಲ ಸ್ಥಿತಿಯಲ್ಲಿತ್ತು ಮತ್ತು ಈ ಬಗ್ಗೆ ಹಲವಾರು ದೂರುಗಳು ಮೊದಲೇ ಬಂದಿವೆ. ಶಾಲೆಯು 8 ನೇ ತರಗತಿಯವರೆಗೆ ಶಿಕ್ಷಣವನ್ನು ನೀಡುತ್ತದೆ. ಘಟನೆಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಇತರ 17 ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ಥಳೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಮೂರರಿಂದ ನಾಲ್ವರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಝಲಾವರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಅವಶೇಷದಡಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಸ್ಥಳೀಯ ನಿವಾಸಿಗಳು ಧಾವಿಸಿದ್ದಾರೆ. ಅವಶೇಷಗಳನ್ನು ತೆರವುಗೊಳಿಸಲು ಕನಿಷ್ಠ ನಾಲ್ಕು ಜೆಸಿಬಿ ಯಂತ್ರಗಳು ಸ್ಥಳಕ್ಕೆ ಬಂದಿವೆ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ವಿಪತ್ತು ಪರಿಹಾರ ತಂಡಗಳು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳದಲ್ಲಿವೆ ಎಂದು ಮೂಲಗಳು ತಿಳಿಸಿವೆ. ಕಟ್ಟಡ ಕುಸಿತದ ಬಗ್ಗೆ ತಿಳಿದ ಶಾಲಾ ಮಕ್ಕಳ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿದರು.
ಈ ಸುದ್ದಿಯನ್ನೂ ಓದಿ: Cabinet Meeting: ಬಹುಮಹಡಿ ಕಟ್ಟಡಗಳಿಗೆ ಆಸ್ತಿ ತೆರಿಗೆಯೊಂದಿಗೆ ಶೇ.1 ಫೈರ್ ಸೆಸ್; ಸಚಿವ ಸಂಪುಟ ಅನುಮೋದನೆ
"ಗಾಯಗೊಂಡ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಮಾಡಲು ಮತ್ತು ಅವರ ಚಿಕಿತ್ಸೆಯ ಮೇಲ್ವಿಚಾರಣೆ ಮಾಡಲು ಮತ್ತು ಅವರು ಯಾವುದೇ ರೀತಿಯ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳಲು ನಾನು ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ಕಟ್ಟಡ ಕುಸಿತಕ್ಕೆ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಆದೇಶಿಸುತ್ತೇನೆ. ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ಸಾಧ್ಯವಾದಷ್ಟು ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದರು. ರಕ್ಷಿಸಲ್ಪಟ್ಟ ಮತ್ತು ಗಾಯಗೊಂಡ ಮಕ್ಕಳನ್ನು ಚಿಕಿತ್ಸೆಗಾಗಿ ಮನೋಹರ್ ಥಾನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಗಂಭೀರ ಗಾಯಗೊಂಡವರನ್ನು ಝಲಾವರ್‌ನಲ್ಲಿರುವ ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.