ದೆಹಲಿ, ಏ. 26: ದಿನ ಕಳೆದಂತೆ ದೇಶದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ. ದೇಶದ ವಿವಿಧೆಡೆ ಬಿಸಿಗಾಳಿ (Heatwave) ಬೀಸುತ್ತಿದ್ದು, ಸೂರ್ಯಾಘಾತ ಪ್ರಕರಣ ಹೆಚ್ಚಾಗುತ್ತಿದೆ. ಈ ಮಧ್ಯೆ ಉತ್ತರ ಪ್ರದೇಶ ಬಾಂದಾದಲ್ಲಿ ದೇಶದಲ್ಲೇ ಗರಿಷ್ಠ ಉಷ್ಣಾಂಶ 47.4° ಸೆಲ್ಸಿಯಸ್ ದಾಖಲಾಗಿದೆ. ಆ ಮೂಲಕ 4 ವರ್ಷಗಳ ಹಿಂದಿನ ದಾಖಲೆ ಮುರಿದು ಬಿದ್ದಿದೆ. ಈ ಹಿಂದಿನ ದಾಖಲೆ 2022ರ ಏಪ್ರಿಲ್ 30ರಂದು ದಾಖಲಾಗಿತ್ತು. ಅಂದು 47°C ಉಷ್ಣಾಂಶ ಇತ್ತು. ಇನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲೂ ಬಿಸಿಲಿನ ಝಳ ಹೆಚ್ಚಾಗಿದ್ದು, ಹಗಲಿನಲ್ಲಿ 45° ಸೆಲ್ಸಿಯಸ್ ಕಂಡು ಬಂದಿದೆ. ಈ ತಿಂಗಳಲ್ಲಿ 4ನೇ ಬಾರಿ ಇಷ್ಟೊಂದು ಪ್ರಮಾಣದ ಉಷ್ಣತೆ ದಾಖಲಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಅದಾಗ್ಯೂ 7 ವರ್ಷದ ಹಿಂದಿನ ಅತೀ ಹೆಚ್ಚು 45.3° ಸೆಲ್ಸಿಯಸ್ ಇನ್ನೂ ದಾಟಿಲ್ಲ ಎನ್ನುವುದೇ ಸಮಾಧಾನದ ಸಂಗತಿ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. 2019ರ ಏಪ್ರಿಲ್ 30ರಂದು 45.3° ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ತೀವ್ರ ಬಿಸಿಗಾಳಿಯ ನಡುವೆ ಲಲಿತ್‌ಪುರದ ಜನತೆಗೆ ಕೊಂಚ ನಿರಾಳರಾಗಿದ್ದು, ಭಾರಿ ಮಳೆಯಾಗಿದೆ. ಜತೆಗೆ ತಂಪು ಗಾಳಿ ಬೀಸಿದ್ದು, ಉಷ್ಣಾಂಶ ತೀವ್ರವಾಗಿ ಕುಸಿದಿದೆ. ಅದಾಗ್ಯೂ ಉತ್ತರ ಪ್ರದೇಶದ 55 ನಗರಗಳು ಬಿಸಿಗಾಳಿಯ ಚಕ್ರವ್ಯೂಹಕ್ಕೆ ಸಿಲುಕಿ ನಲುಗಿದೆ.
ಭಾರತದಲ್ಲಿ ಹೆಚ್ಚುತ್ತಿದೆ ತಾಪಮಾನ:
ಹವಾಮಾನ ಇಲಾಖೆ ಎಚ್ಚರಿಕೆ
ಭಾನುವಾರ (ಏಪ್ರಿಲ್ 26) ಹವಾಮಾನ ಇಲಾಖೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳ ಉಷ್ಣಾಂಶ 42–45°ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಎಚ್ಚರಿಸಿದೆ. ದೇಶದ ಉತ್ತರ, ಮಧ್ಯ ಮತ್ತು ಪಶ್ಚಿಮ ಭಾಗದದಲ್ಲಿ ತೀವ್ರವಾಗಿ ಬಿಸಿಗಾಳಿ ಬೀಸಲಿದ್ದು, ಸಾರ್ವಜನಿಕ ಬಿಸಿಲಿಗೆ ಮೈ ಒಡ್ಡದಂತೆ ಸೂಚಿಸಲಾಗಿದೆ.
ರಾಜ್ಯಾದ್ಯಂತ ಹೆಚ್ಚಿದ ತಾಪಮಾನ; ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಸಾಧ್ಯತೆ
ಅತೀ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶಗಳು
- ಬಾಂದಾ (ಉತ್ತರ ಪ್ರದೇಶ)-47.4° ಸೆಲ್ಸಿಯಸ್
- ಅಕೋಲ (ಮಹಾರಾಷ್ಟ್ರ)- 45.6° ಸೆಲ್ಸಿಯಸ್
- ಅಮರಾವತಿ (ಮಹಾರಾಷ್ಟ್ರ)-45.6° ಸೆಲ್ಸಿಯಸ್
- ವಾದ್ರಾ (ಮಹಾರಾಷ್ಟ್ರ)-45.5° ಸೆಲ್ಸಿಯಸ್
- ಫರಿದ್‌ಕೋಟ್ (ಪಂಜಾಬ್)-45.2° ಸೆಲ್ಸಿಯಸ್
- ರೋಹ್ಟಕ್ (ಹರಿಯಾಣ)-44.6° ಸೆಲ್ಸಿಯಸ್
- ಝಾರ್ಸುಗುದಾ (ಒಡಿಶಾ)-44.6° ಸೆಲ್ಸಿಯಸ್
- ಸುರೇಂದ್ರನಗರ್ (ಗುಜರಾತ್)-44.4° ಸೆಲ್ಸಿಯಸ್
- ಅಹಮದಾಬಾದ್ (ಗುಜರಾತ್)-43.8° ಸೆಲ್ಸಿಯಸ್
- ನಾಗಪುರ (ಮಹಾರಾಷ್ಟ್ರ)-44.2° ಸೆಲ್ಸಿಯಸ್
ತಜ್ಞರ ಪ್ರಕಾರ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ. ಜಾಗತಿಕವಾಗಿ ಅತೀ ಹೆಚ್ಚು ಉಷ್ಣಾಂಶ ಹೊಂದಿರುವ ನಗರಗಳ ಪಟ್ಟಿಯಲ್ಲಿ ಭಾರತದ ಹಲವು ಸ್ಥಳಗಳಿವೆ. ಸದ್ಯ ಬಹುತೇಕ ರಾಜ್ಯಗಳಲ್ಲಿ ಬೇಸಗೆ ರಜೆ ಇರುವುದರಿಂದ ಮಕ್ಕಳು ಬಿಸಿಲಿಗೆ ಓಡಾಡಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಕಲಬುರಗಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲು!
ಈ ವರ್ಷ ಬೇಗ ಮುಂಗಾರು?
ಈ ಮಧ್ಯೆ ಹವಾಮಾನ ತಜ್ಞರು ಗುಡ್‌ನ್ಯೂಸ್ ಒಂದನ್ನು ನೀಡಿದ್ದಾರೆ. ದೇಶದಲ್ಲಿ ವಾಡಿಕೆಗಿಂತ ಮೊದಲೇ ಮಳೆಗಾಲ ಆರಂಭವಾಗುವ ಸೂಚನೆ ನೀಡಿದ್ದಾರೆ. ಜೂನ್ ಬದಲು ಮೇ 25ಕ್ಕೇ ಕೇರಳಕ್ಕೆ ಮುಂಗಾರು ಆಗಮಿಸಲಿದೆ ಎಂದಿದ್ದಾರೆ. ಭಾರತ ಉಪಖಂಡದ ಮೇಲೆ ಪ್ರಭಾವ ಬೀರುವ ನೈಋತ್ಯ ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಜೂನ್ 1ರ ವೇಳೆಗೆ ಪ್ರವೇಶಿಸುವುದು ವಾಡಿಕೆ. ಆದರೆ ಈ ಬಾರಿ ಮುಂಗಾರು ಮೇ ಕೊನೆಯ ವಾರದಲ್ಲೇ ಆಗಮಿಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.