ಚಂಡೀಗಢ, ನ. 24: ಮುಂದಿನ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದ್ದು (Punjab assembly election), ಈಗಾಗಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ವಿವಿಧ ಪಕ್ಷಗಳು ಈಗಾಗಲೇ ಸಿದ್ಧತೆ ನಡೆಸುತ್ತಿವೆ. ಈ ಬಾರಿ ಶಿರೋಮಣಿ ಅಕಾಲಿ ದಳದೊಂದಿಗೆ (SAD) ಮತ್ತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಜ್ಜಾಗಿದೆ. ಸುಮಾರು 6 ವರ್ಷಗಳ ಬಳಿಕ ಈ 2 ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಆಮ್ ಆದ್ಮಿ ಪಾರ್ಟಿಯನ್ನು ಅಧಿಕಾರದಿಂದ ಕೆಳಗಿಸಲು ಮುಂದಾಗಿವೆ. ಈ ಮೂಲಕ ಪಂಜಾಬ್ ರಾಜಕೀಯ ದೇಶದ ಕುತೂಹಲ ಕೆರಳಿಸಿದೆ.
ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳಷ್ಟೇ ಬಾಕಿ ಉಳಿದಿದ್ದು ಮಂಗಳವಾರ (ನವೆಂಬರ್ 24) ಕೇಂದ್ರ ಗೃಹ ಸಚಿವ ಅಮಿತರ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಅಕಾಲಿ ದಳ ಅಧ್ಯಕ್ಷ ಸುಖಬಿರ್ ಬಾದಲ್ ಜಂಟಿ ಪ್ರತಿಕಾಗೋಷ್ಠಿ ನಡೆಸಿ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದರು. ಎನ್‌ಡಿಎ ಒಕ್ಕೂಟದ ಭಾಗವಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳದೊಂದಿಗೆ ಬಿಜೆಪಿ ಮೈತ್ರಿ:
ದೂರವಾಗಿದ್ದೇಕೆ?
ಈ ಹಿಂದೆ ಹಲವು ದಶಕಗಳ ಕಾಲ ಬಿಜೆಪಿ ಮತ್ತು ಅಕಾಲಿ ದಳ ಮೈತ್ರಿಯಲ್ಲಿದ್ದವು. ಆ ಮೂಲಕ ದೀರ್ಘ ಕಾಲ ಮೈತ್ರಿ ಹೊಂದಿದ ಪಕ್ಷಗಳಲ್ಲಿ ಇವೂ ಸ್ಥಾನ ಪಡೆದಿದ್ದವು. ಆದರೆ 2020ರಲ್ಲಿ ಎರಡೂ ಪಕ್ಷಗಳ ಮೈತ್ರಿ ಮುರಿದುಬಿತ್ತು. ಅಂದು ಕೇಂದ್ರ ಸರ್ಕಾರ ತರಲು ಉದ್ದೇಶಿಸಿದ್ದ ವಿವಾದಿತ 3 ಕೃಷಿ ಕಾಯ್ದೆಗಳನ್ನು ಅಕಾಲಿ ದಳ ವಿರೋಧಿಸಿತ್ತು. ರೈತರು ವಿಶೇಷವಾಗಿ ಪಂಜಾಬ್‌ನ ರೈತರು ಈ ಕಾಯ್ದೆ ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಅದಾದ ಬಳಿ ಕೇಂದ್ರ ಈ ಕಾಯ್ದೆ ಹಿಂಪಡೆಯಿತು. ಜತೆಗೆ ಹಲವು ದಶಕಗಳ ಅಕಾಲಿ ದಳದೊಂದಿಗಿನ ಮೈತ್ರಿಯೂ ಕೊನೆಗೊಂಡಿತು.
ಪ್ರಧಾನಿ ನರೇಂದ್ರ ಮೋದಿ - ಸುಖ್ಬೀರ್ ಬಾದಲ್ ಭೇಟಿ
1997-98ರಿಂದ 2020ರವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎಯಲ್ಲಿ ಅಕಾಲಿ ದಳವು ಅತ್ಯಂತ ಹಳೆಯ, ಮುಖ್ಯ ಪಾಲುದಾರ ಪಕ್ಷವಾಗಿತ್ತು. ಈ ಮೈತ್ರಿಯು ಅಕಾಲಿ ದಳದ ಗ್ರಾಮೀಣ ಜಾಟ್ ಸಿಖ್ ಹಾಗೂ ಕೃಷಿ ಆಧಾರಿತ ಮತದಾರರನ್ನು ಬಿಜೆಪಿಯೊಂದಿಗೆ ಬೆಸೆದಿತ್ತು. ಅಲ್ಲದೆ ಬಿಜೆಪಿಗೆ ನಿಷ್ಠರಾಗಿದ್ದ ನಗರ ಪ್ರದೇಶದ ಹಿಂದೂ ಮತದಾರರು ತಮ್ಮ ಬೆಂಬಲವನ್ನು ಅಕಾಲಿ ದಳದ ಅಭ್ಯರ್ಥಿಗಳಿಗೆ ನೀಡುತ್ತಿದ್ದರು. ಹೀಗೆ ಕೊಡು-ಕೊಳ್ಳುವಿಕೆ ರಾಜ್ಯದಲ್ಲಿ ಮೈತ್ರಿಯನ್ನು ಬಲಿಷ್ಠವಾಗಿಸಿತ್ತು.
ಅದಾಗ್ಯೂ ಕೃಷಿ ಕಾಯ್ದೆ ಬಗ್ಗೆ ಇದ್ದ ಭಿನ್ನಾಭಿಪ್ರಾಯದ ಕಾರಣದಿಂದ 2020ರ ಸೆಪ್ಟೆಂಬರ್‌ನಲ್ಲಿ ಈ ಮೈತ್ರಿ ಮುರಿದುಬಿತ್ತು. ಆರಂಭದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಈ ಕಾಯ್ದೆ ಬೆಂಬಲಿಸಿದ್ದ ಅಕಾಲಿ ದಳವು, ಪಂಜಾಬ್‌ನ ರೈತ ಸಮುದಾಯದಿಂದ ವ್ಯಕ್ತವಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತನ್ನ ನಿಲುವನ್ನು ಬದಲಾಯಿಸಿಕೊಂಡಿತು.
ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಕಾರಿನ ಮೇಲೆ ದಾಳಿ
2020ರ ಸೆಪ್ಟೆಂಬರ್‌ನಲ್ಲಿ ಅಕಾಲಿ ದಳದ ಏಕೈಕ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ನಂತರ ಚಂಡೀಗಢದಲ್ಲಿ ನಡೆದ ಅಕಾಲಿ ದಳದ ತುರ್ತು ಕೋರ್ ಕಮಿಟಿ ಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಪಕ್ಷವು ಸರ್ವಾನುಮತದಿಂದ ಹೊರಬರುತ್ತಿರುವುದಾಗಿ ಸುಖಬಿರ್ ಸಿಂಗ್ ಬಾದಲ್ ಘೋಷಿಸಿದ್ದರು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.