ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ(Pahalgam terror attack) 26 ಜನರು ಸಾವನ್ನಪ್ಪಿರುವ ಬೆನ್ನಲ್ಲೇ ಎನ್‌ಐಎ ತನಿಖೆ ಕೈಗೆತ್ತಿಕೊಂಡಿದೆ. ಇದೀಗ ಮೂವರು ಶಂಕಿತ ಉಗ್ರರ ರೇಖಾಚಿತ್ರ ಮತ್ತು ಫೋಟೋ ರಿಲೀಸ್ ಮಾಡಿರುವ ಎನ್‌ಐಎ(NIA) ಉಗ್ರರ ಬೇಟೆ ಶುರು ಮಾಡಿದೆ. ಮೂವರು ಭಯೋತ್ಪಾದಕರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ. ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (LET) ಯ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಸದಸ್ಯರಾದ ದಾಳಿಕೋರರು, ನಿನ್ನೆ ಪಹಲ್ಗಾಮ್‌ನ ಜನಪ್ರಿಯ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದರು.
ಕನಿಷ್ಠ 5–6 ಭಯೋತ್ಪಾದಕರು ಕುರ್ತಾ-ಪೈಜಾಮಾಗಳನ್ನು ಧರಿಸಿ, ಕಣಿವೆಯ ಸುತ್ತಲಿನ ದಟ್ಟವಾದ ಪೈನ್ ಕಾಡಿನಿಂದ ಬೈಸರನ್ ಹುಲ್ಲುಗಾವಲಿಗೆ ಬಂದು AK-47ಗಳೊಂದಿಗೆ ಗುಂಡು ಹಾರಿಸಿದರು. ದಾಳಿಗೆ ಕೆಲವೇ ದಿನಗಳ ಮೊದಲು ಕಣಿವೆಗೆ ನುಸುಳಿದ ಪಾಕಿಸ್ತಾನಿ ಭಯೋತ್ಪಾದಕರು ಈ ಗುಂಪಿನಲ್ಲಿ ಸೇರಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಗುಪ್ತಚರ ಸಂಸ್ಥೆಗಳು ಎಲ್‌ಇಟಿಯ ಉನ್ನತ ಕಮಾಂಡರ್ ಸೈಫುಲ್ಲಾ ಕಸೂರಿ ಅಲಿಯಾಸ್ ಖಾಲಿದ್ ಅವರನ್ನು ಹತ್ಯಾಕಾಂಡದ ಮಾಸ್ಟರ್ ಮೈಂಡ್ ಎಂದು ಗುರುತಿಸಿವೆ.

ರೇಖಾಚಿತ್ರದ ಬೆನ್ನಲ್ಲೇ ಫೋಟೋ ರಿಲೀಸ್
ಇನ್ನು ಎನ್‌ಐಎ ರೇಖಾಚಿತ್ರದ ಬೆನ್ನಲ್ಲೇ ದಾಳಿ ನಡೆಸಿದ ಉಗ್ರರ ಫೋಟೋವನ್ನೂ ರಿಲೀಸ್ ಮಾಡಿದೆ. ಇದರಿಂದ ಈ ದಾಳಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದ ಪಾಕ್ ಕುತಂತ್ರ ಬಟಾಬಯಲಾಗಿದೆ. ಎನ್‌ಐಎ ರಿಲೀಸ್ ಮಾಡಿರುವ ಚಿತ್ರದಲ್ಲಿರುವವರು ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದವರು ಎಂಬುದು ಸ್ಪಷ್ಟವಾಗಿದೆ. ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಸೇರಿದಂತೆ ಒಟ್ಟು ನಾಲ್ವರು ಉಗ್ರರು ಫೊಟೋದಲ್ಲಿದ್ದಾರೆ.