ನವದೆಹಲಿ, ನ. 24: 1977ರ ಚುನಾವಣೆಯ ಸೋಲು ಮತ್ತು ತುರ್ತು ಪರಿಸ್ಥಿತಿಯ ನಂತರದ ದಿನಗಳು ಗಾಂಧಿ ಕುಟುಂಬದ ಮಕ್ಕಳ ಬಾಲ್ಯದಲ್ಲಿ ಹೇಗೆ ಆತಂಕ ಹುಟ್ಟುಹಾಕಿದ್ದವು ಎಂಬುದನ್ನು ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ (Priyanka Gandhi) ಹಂಚಿಕೊಂಡಿದ್ದಾರೆ. ತಾಯಿ ಸೋನಿಯಾ ಗಾಂಧಿ ಜತೆಗಿನ ಸಂವಾದದಲ್ಲಿ ಅಂದಿನ ಶಾಲಾ ದಿನಗಳ ಕ್ಷಣಗಳನ್ನು ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಚ್ಚಿಟ್ಟಿದ್ದಾರೆ.
'ಕಿಸ್ಸಾ ಕುರ್ಸಿ ಕಾ' ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಚಿಕ್ಕಪ್ಪ ಸಂಜಯ್ ಗಾಂಧಿ ಕುರಿತು ಹುಡುಗನೊಬ್ಬ ವ್ಯಂಗ್ಯವಾಡಿದಾಗ ಕೋಪಗೊಂಡು ಕಪಾಳಮೋಕ್ಷ ಮಾಡಿದ ಘಟನೆಯನ್ನು ಪ್ರಿಯಾಂಕಾ ನೆನಪಿಸಿಕೊಂಡರೆ, ಚುನಾವಣೆ ಬಳಿಕ ಶಾಲೆಯ ಮೊದಲ ದಿನ ತಾವು ಎದುರಿಸಿದ ಒಂಟಿತನ ಮತ್ತು ಸಹಪಾಠಿಗಳ ವರ್ತನೆಯ ಬಗ್ಗೆ ರಾಹುಲ್ ವಿವರಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆಯ ಬೆನ್ನಲ್ಲೇ ಹೊರಬಿದ್ದ ಈ ವಿಡಿಯೊದಲ್ಲಿ ಇಬ್ಬರ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸಂವಾದದ ವಿಡಿಯೊ ನೋಡಿ:
ʼನಿನ್ನ ಚಿಕ್ಕಪ್ಪ ಒಬ್ಬ ಕಳ್ಳ ʼ ಎಂದಿದ್ದ ಬಾಲಕ
1977ರಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತ ನಂತರ ತಾವು ಶಾಲೆಗೆ ಹೋದ ಮೊದಲ ದಿನದ ಬಗ್ಗೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಶಾಲೆಗೆ ಹೋದಾಗ ಒಬ್ಬ ಬಾಲಕ ಬಂದು, ʼʼನಿನ್ನ ಚಿಕ್ಕಪ್ಪ ಸಂಜಯ್ ಗಾಂಧಿ ಜೈಲಿನಲ್ಲಿದ್ದಾರೆ, ನಿನ್ನ ಚಿಕ್ಕಪ್ಪ ಒಬ್ಬ ಕಳ್ಳʼʼ ಎಂದು ಹೇಳಿದ್ದನ್ನು ನೆನಪಿಸಿಕೊಂಡ ಪ್ರಿಯಾಂಕಾ, ಕೋಪಗೊಂಡು ಅವನಿಗೆ ಕಪಾಳಮೋಕ್ಷ ಮಾಡಿದರು, ಅವನು ಅಳುತ್ತಾ ಶಿಕ್ಷಕರ ಬಳಿ ಹೋದ, ಪರಿಣಾಮ ನಾನು ಅವರಿಂದ ಬೈಗುಳ ಕೇಳಬೇಕಾಯಿತುʼ ಎಂದು ಪ್ರಿಯಾಂಕಾ ಗಾಂಧಿ ತಮ್ಮ ತಾಯಿ ಮತ್ತು ಸಹೋದರನೊಂದಿಗಿನ ಸಂವಾದದಲ್ಲಿ ನೆನಪಿಸಿಕೊಂಡಿದ್ದಾರೆ.
'ʼಅಪ್ಪನನ್ನು ಕೊಲ್ಲಲೆಂದೇ ಭದ್ರತೆ ತೆಗೆದರು'ʼ: ರಾಜೀವ್ ಗಾಂಧಿ ಹತ್ಯೆ ಬಗ್ಗೆ ರಾಹುಲ್ ಗಾಂಧಿ ಹೊಸ ಬಾಂಬ್
ಶಾಲೆಯಲ್ಲಿ ರಾಹುಲ್ ಎದುರಿಸಿದ ಒಂಟಿತನ
ಇದೇ ವೇಳೆ ಶಾಲೆಯಲ್ಲಿ ತಾವು ಎದುರಿಸಿದ ಕಹಿ ಅನುಭವವನ್ನೂ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಚುನಾವಣೆ ನಂತರ ಮೊದಲ ದಿನ ತರಗತಿಯಲ್ಲಿ ತನ್ನ ಪಕ್ಕ ಯಾರೂ ಕುಳಿತುಕೊಳ್ಳುತ್ತಿರಲಿಲ್ಲ, ಮಾತನಾಡಿಸಿದರೂ ನನ್ನ ಜೊತೆ ಸರಿಯಾಗಿ ನಡೆದುಕೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಕಹಿ ವಾತಾವರಣ ಸರಿಪಡಿಸಲು ಪ್ರಿಯಾಂಕಾ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿ 32 ಮಕ್ಕಳನ್ನು ಆಹ್ವಾನಿಸಿದ್ದರಾದರೂ, 15 ನಿಮಿಷ ಕಳೆದರೂ ಯಾರೂ ಬಂದಿರಲಿಲ್ಲ; ಕೊನೆಗೆ ಒಬ್ಬ ಸ್ನೇಹಿತ ಮಾತ್ರ ಬಂದಿದ್ದು, ಆ ಸ್ನೇಹ ಇಂದಿಗೂ ಮುಂದುವರಿದಿದೆ ಎಂದು ರಾಹುಲ್ ಹೇಳಿದ್ದಾರೆ.
ಬಾಲ್ಯದಿಂದ ಸಂಸತ್ತಿನವರೆಗೂ ಭಿನ್ನ ಸ್ವಭಾವ
ಶಾಲಾ ದಿನಗಳಲ್ಲೇ ತಮ್ಮಿಬ್ಬರ ಸ್ವಭಾವ ಎಷ್ಟು ಭಿನ್ನವಾಗಿತ್ತು ಎಂಬುದನ್ನೂ ಇಬ್ಬರೂ ವಿವರಿಸಿದ್ದಾರೆ. ತಾನು ಶಿಸ್ತಿನ ಸಿಪಾಯಿಯಂತೆ ಶಾಲಾ ನಿಯಮಗಳಿಗೆ ಹೊಂದಿಕೊಳ್ಳುತ್ತಿದ್ದೆ ಎಂದು ಪ್ರಿಯಾಂಕಾ ಹೇಳಿದರೆ, ತಾನು ಸದಾ ಪ್ರಶ್ನೆ ಕೇಳುವ, ನಿಯಮಗಳನ್ನು ಮುರಿಯುವ ಬಂಡಾಯ ಸ್ವಭಾವದವನಾಗಿದ್ದೆ ಎಂದು ರಾಹುಲ್ ತಿಳಿಸಿದ್ದಾರೆ. ಈಗ ಸಂಸತ್ತಿನಲ್ಲೂ ಅದೇ ವ್ಯತ್ಯಾಸ ಕಾಣುತ್ತಿದೆ; ತಾನು ವ್ಯವಸ್ಥೆಗೆ ಹೊಂದಿಕೊಳ್ಳುತ್ತೇನೆ, ಆದರೆ ರಾಹುಲ್ ಇಲ್ಲ ಎಂದು ಪ್ರಿಯಾಂಕಾ ನಗುತ್ತಲೇ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯಾದ ಕೆಲವೇ ದಿನಗಳ ನಂತರ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಅವರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಅನುಭವಿಸಿದ ಸಂತೋಷ, ನಗು ಮತ್ತು ನೋವಿನ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.