ದೆಹಲಿ, ಏ. 3: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ತೀವ್ರವಾಗಿಯೇ ಮುಂದುವರಿದಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್‌ನ ಅತಿ ಎತ್ತರದ ಕರಾಜ್‌ನಲ್ಲಿರುವ ಬಿ1 ಸೇತುವೆ (B1 Bridge) ಸಂಪೂರ್ಣವಾಗಿ ಧ್ವಂಸಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸೇಡಿನ ಪ್ರತಿಜ್ಞೆ ಮಾಡಿದ್ದು, ಅಮೆರಿಕ ಮಿತ್ರ ರಾಷ್ಟ್ರಗಳ 8 ಸೇತುವೆ ಉಡಾಯಿಸುವುದಾಗಿ ಗುಡುಗಿದೆ. ಹೀಗೆ ಸಂಘರ್ಷ ಮತ್ತೊಂದು ಹಂತ ತಲುಪುವ ಭೀತಿಯಲ್ಲಿರುವಾಗಲೇ ಭಾರತಕ್ಕೆ ತುಸು ನೆಮ್ಮದಿಯ ಸುದ್ದಿಯೊಂದು ಇರಾನ್‌ನ ಹೊರ್ಮುಜ್ ಜಲಸಂಧಿಯಿಂದ (Strait of Hormuz) ಬಂದಿದೆ. ಹೌದು, ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದ ಭಾರತದ ಮತ್ತೊಂದು ಹಡಗು ದೇಶದತ್ತ ಧಾವಿಸುತ್ತಿದೆ.
ಎಲ್‌ಪಿಜಿ ಟ್ಯಾಂಕರ್ ಗ್ರೀನ್ ಸಾನ್ವಿ (Green Sanvi) ಇದೀಗ ಹೊರ್ಮುಜ್ ಜಲಸಂಧಿ ದಾಟಿದೆ ಎಂದು ಹಡಗುಗಳ ಚಲನೆಯನ್ನು ಗಮನಿಸುವ ವೆಸೆಲ್‌ಫೈಂಡರ್ (VesselFinder) ವರದಿ ಮಾಡಿದೆ. ಆ ಮೂಲಕ ಫೆಬ್ರವರಿ 28ರಂದು ಯುದ್ಧ ಆರಂಭವಾದ ಬಳಿಕ, ಇರಾನ್ ಹೊರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಿದ ನಂತರ ಭಾರತಕ್ಕೆ ಆಗಮಿಸುತ್ತಿರುವ ಎಲ್‌ಪಿಜಿ ಹೊತ್ತ 7ನೇ ಹಡಗು ಇದು ಎನಿಸಿಕೊಂಡಿದೆ.
ಭಾರತದತ್ತ ಹೊರಟ ಮತ್ತೊಂದು ಹಡಗು:
ಈಗಾಗಲೇ ಎಲ್‌ಪಿಜಿ ಹೊತ್ತ 6 ಹಡಗುಗಳ ಆಗಮನ
ಇದುವರೆಗೆ ಎಲ್‌ಪಿಜಿ ಹೊತ್ತ 6 ಹಡಗುಗಳ ಸುರಕ್ಷಿತವಾಗಿ ಭಾರತದ ಕರಾವಳಿ ತೀರವನ್ನು ತಲುಪಿವೆ. ಶಿವಾಲಿಕ್, ನಂದಾ ದೇವಿ, ಜಗ್ ವಸಂತ್, ಬಿಡಬ್ಲ್ಯು ಟೈರ್, ಬಿಡಬ್ಲ್ಯು ಎಲ್ಮ್ ಮತ್ತು ಪೈನ್ ಗ್ಯಾಸ್ ಹಡಗುಗಳು ಹೊರ್ಮುಲ್ ಜಲಸಂಧಿ ಅಡೆ ತಡೆ ದಾಟಿ ಭಾರತಕ್ಕೆ ಆಗಮಿಸಿವೆ. ಇದೀಗ ಭಾರತದತ್ತ ಹೊರಟಿರುವ ಗ್ರೀನ್ ಸಾನ್ವಿ 58,811 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಒಳಗೊಂಡಿದೆ.
ತಡವಾಗುವ ಮುನ್ನ ಒಪ್ಪಂದ ಮಾಡಿಕೊಳ್ಳಿ: ಇರಾನ್ ಸೇತುವೆಯ ಮೇಲಿನ ದಾಳಿಯ ನಂತರ ಟ್ರಂಪ್ ಎಚ್ಚರಿಕೆ
15 ಹಡಗು ಇನ್ನೂ ಬಾಕಿ
ಮೂಲಗಳ ಪ್ರಕಾರ ಹೊರ್ಮುಜ್ ಜಲಸಂಧಿಯಲ್ಲಿ ಇನ್ನೂ ಇಂಧನ ಹೊತ್ತ ಕನಿಷ್ಠ 15 ಭಾರತೀಯ ಹಡಗುಗಳಿ ಸಿಲುಕಿಕೊಂಡಿವೆ. ಆರಂಭದಲ್ಲಿ ಗ್ರೀನ್ ಸಾನ್ವಿ ಜತೆ ಎಲ್‌ಪಿಜಿ ಹೊತ್ತ ಗ್ರೀನ್ ಆಶಾ ಮತ್ತು ಜಗ್ ವಿಕ್ರಮ್ ಹಡಗುಗಳು ಹೊರಟಿದ್ದವು. ಅದಾಗ್ಯೂ ಅವೆರಡು ಇನ್ನೂ ಅಲ್ಲೇ ಬಾಕಿಯಾಗಿದ್ದು, ಶೀಘ್ರದಲ್ಲೇ ಹೊರಡಲು ಅನುಮತಿ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಇರಾನ್ ಭಾರತ ಸೇರಿ 5 ಮಿತ್ರ ರಾಷ್ಟ್ರಗಳ ಹಡಗು ಸಾಗಾಟಕ್ಕೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ತಿಳಿಸಿದ್ದು ಭರವಸೆ ಹುಟ್ಟಿಸಿದೆ.
ಹೊರ್ಮುಜ್ ಜಲಸಂಧಿ ದಾಟಲು ಭಾರತ ಪಾವತಿಸುವ ಟೋಲ್ ಮೊತ್ತ ಎಷ್ಟು?
ಭಾರತಕ್ಕೆ ಹೊರಟ ಹಡಗು ಚೀನಾದತ್ತ
ಈ ಮಧ್ಯೆ ಭಾರತಕ್ಕೆ ಇರಾನಿನ ಕಚ್ಚಾ ತೈಲವನ್ನು ಸಾಗಿಸಬೇಕಾಗಿದ್ದ ತೈಲ ಟ್ಯಾಂಕರ್ ಸಮುದ್ರದ ಮಧ್ಯೆ ಮಾರ್ಗವನ್ನು ಬದಲಾಯಿಸಿ ಚೀನಾದ ಕಡೆಗೆ ಸಾಗುತ್ತಿದೆ. ಇರಾನಿನ ಕಚ್ಚಾ ತೈಲದ ಹಡಗು ಪಿಂಗ್ ಶುನ್ ಗುಜರಾತ್ ಬಂದರಿಗೆ ಆಗಮಿಸುವ ಬದಲು ಇದೀಗ ಚೀನಾದ ಕಡೆ ತೆರಳುತ್ತಿದೆ. ಸಿಬ್ಬಂದಿ ಅಥವಾ ದಾಖಲಾತಿಯಲ್ಲಿನ ಸಮಸ್ಯೆಯಿಂದ ಹಡಗು ಮಾರ್ಗ ಬದಲಾಯಿಸಿದೆ ಎನ್ನಲಾಗಿದೆ. ಆದರೆ ಹಡಗು ತನ್ನ ಗಮ್ಯಸ್ಥಾನವನ್ನು ಬದಲಾಯಿಸಿದ ನಿಖರ ಕಾರಣ ಖಚಿತವಾಗಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.