ದೆಹಲಿ, ನ. 23: ದೇಶವನ್ನೇ ನಡುಗಿಸಿದ 2002ರಲ್ಲಿ ಗುಜರಾತ್ನ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ (Godhra Train Burning Case) ಪ್ರಕರಣದ ಆರೋಪಿಗೆ ಸುಪ್ರೀಂ ಕೋರ್ಟ್ ಇದೀಗ ಜಾಮೀನು ನೀಡಿದೆ. ಗಂಭೀರ ಹೃದಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮತ್ತು 17 ವರ್ಷ ಜೈಲುವಾಸ ಅನುಭವಿಸಿದ ಕಾರಣ ಜೀವಾವಧಿ ಶಿಕ್ಷೆಗೆ ಗುರಿಯಾದ ಸಿರಾಜ್ ಪಾದೋ ಘಾಂಚಿಗೆ ಸದ್ಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಸ್ಟಿಸ್ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠವು ಸಿರಾಜ್ನ ಹೃದಯದ ಆರೋಗ್ಯವನ್ನು ಉಲ್ಲೇಖಿಸಿ ಜಾಮೀನು ನೀಡಿದ್ದಾಗಿ ಲೈವ್ಲಾ ವರದಿ ಮಾಡಿದೆ.
ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಟ್ರಯಲ್ ಕೋರ್ಟ್ 2011ರಲ್ಲಿ ಮಹತ್ವದ ತೀರ್ಪು ನೀಡಿ ಘಾಂಚಿ ಸೇರಿ 31 ಮಂದಿ ತಪ್ಪಿತಸ್ಥರೆಂದು ತೀರ್ಪು ನೀಡಿತು.
ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗೆ ಜಾಮೀನು
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಲೆ ಅವರಿದ್ದ ಪೀಠವು, "ಈ ಅರ್ಜಿಯಲ್ಲಿ ಜಾಮೀನಿಗಾಗಿ ಮಂಡಿಸಲಾದ ವಾದವು ಪ್ರಾಥಮಿಕವಾಗಿ ವೈದ್ಯಕೀಯ ಕಾರಣಗಳನ್ನು ಆಧರಿಸಿದೆ ಎನ್ನುವುದು ಸಾಬೀತಾಗಿದೆ. ಅರ್ಜಿದಾರರ ಆರೋಗ್ಯ ಸ್ಥಿತಿಯ ಕುರಿತಾದ ವಿವರ ವಾಸ್ತವಿಕವಾಗಿ ಸರಿಯಾಗಿದೆ ಎಂದು ರಾಜ್ಯ ಸರ್ಕಾರವು ಒಪ್ಪಿಕೊಂಡಿದೆ. ಈ ವಾಸ್ತವಿಕ ಸನ್ನಿವೇಶವನ್ನು ಪರಿಗಣಿಸಿ, ವೈದ್ಯಕೀಯ ಕಾರಣಗಳ ಆಧಾರದ ಮೇಲೆ ತಜಾಮೀನು ನೀಡಲು ನಿರ್ಧರಿಸಲಾಗಿದೆʼʼ ಎಂದು ತಿಳಿಸಿದೆ.
ಏನಿದು ಪ್ರಕರಣ?
2002ರ ಫೆಬ್ರವರಿ 27ರಂದು ಗುಜರಾತ್ನ ಗೋಧ್ರಾಕ್ಕೆ ತಲುಪಿದ ಸಬರ್ಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಲಾಯಿತು. ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರ ಸೇವಕರು ಸೇರಿ 58 ಮಂದಿ ಈ ದುರಂತದಲ್ಲಿ ಸುಟ್ಟು ಕರಕಲಾದರು. ಅದಾದ ಬಳಿಕ ಗುಜರಾತ್ನಲ್ಲಿ ಕೋಮು ಸಂಘರ್ಷ ಭುಗಿಲೆದ್ದು, ಸುಮಾರು 1,000 ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡರು.
ನಂತರ ನಡೆದ ವಿಚಾರಣೆಯಲ್ಲಿ 31 ಅಪರಾಧಿಗಳ ಪೈಕಿ 11 ಮಂದಿಗೆ ಮರಣ ದಂಡನೆ ಘೋಷಿಸಲಾಯಿತು. ಘಾಂಚಿ ಸೇರಿ ಉಳಿದ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 2017ರಲ್ಲಿ ಗುಜರಾತ್ ಹೈಕೋರ್ಟ್ 11 ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಿತು. ಅದೇ ವೇಳೆ ಉಳಿದ 20 ಮಂದಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು. ಅವರ ಅಪರಾಧ ಸಾಬೀತಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳು 2018ರಿಂದ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ.
ಸುಪ್ರೀಂ ಕೋರ್ಟ್ ಹಿಂದೆಯೂ ಆರೋಪಿಗಳಿಗೆ ಕೆಲವೊಂದು ಅನುಕೂಲ ಒದಗಿಸಿತ್ತು. 2022ರ ಮೇಯಲ್ಲಿ ಇಬ್ಬರಿಗೆ 6 ತಿಂಗಳ ಜಾಮೀನು ನೀಡಿತ್ತು. 3ನೇ ಆರೋಪಿಗೆ ಅದೇ ವರ್ಷ ಡಿಸೆಂಬರ್ನಲ್ಲಿ ಜಾಮೀನು ಲಭಿಸಿತ್ತು. 17 ವರ್ಷಗಳ ಸೆರೆವಾಸವನ್ನು ಉಲ್ಲೇಖಿಸಿ ಕೋರ್ಟ್ ಬೇಲ್ ಮಂಜೂರು ಮಾಡಿತ್ತು. 2023ರ ಏಪ್ರಿಲ್ನಲ್ಲಿ ಮತ್ತೆ 8 ಆರೋಪಿಗಳಿಗೆ ಜಾಮೀನು ಸಿಕ್ಕಿತು.
ಗೋಧ್ರಾ ಹತ್ಯಾಕಾಂಡ ದಿನಗಳನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ
ಅವಧಿಗೂ ಮುನ್ನ ಬಿಡುಗಡೆ ಕೋರುವ ಮನವಿಯನ್ನು ಪರಿಗಣಿಸಲು ಅನುವು ಮಾಡಿಕೊಡುವ ಸಲುವಾಗಿ 2025ರಲ್ಲಿ ಗುಜರಾತ್ ಸರ್ಕಾರವು ಘಾಂಚಿಗೆ ಮಧ್ಯಂತರ ಪೆರೋಲ್ ನೀಡಿತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.