Supreme court: ಬಂಗಾಳದ 25,753 ಶಿಕ್ಷಕರನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್- ದೀದಿ ಸರ್ಕಾರಕ್ಕೆ ತೀವ್ರ ಮುಖಭಂಗ
Supreme court: ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 25,753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಳನ್ನು ಅಮಾನ್ಯಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿಹಿಡಿದಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಈ ಎಲ್ಲಾ ಶಿಕ್ಷಕರ ನೇಮಕ ಪ್ರಕ್ರಿಯಲ್ಲಿ ಭಾರೀ ಅಕ್ರಮ ನಡೆದಿದ್ದು,ಅದನ್ನು ರದ್ದುಗೊಳಿಸಲೇಬೇಕು ಎಂದು ಹೇಳಿದೆ.


ಕೋಲ್ಕತ್ತಾ: ಕೆಲವು ವರ್ಷಗಳ ಹಿಂದೆ ಇಡೀ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್(Supreme court) ಮಹತ್ವದ ತೀರ್ಪೊಂದನ್ನು ನೀಡಿದೆ. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 25,753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಳನ್ನು ಅಮಾನ್ಯಗೊಳಿಸಿದ ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿಹಿಡಿದಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಈ ಎಲ್ಲಾ ಶಿಕ್ಷಕರ ನೇಮಕ ಪ್ರಕ್ರಿಯಲ್ಲಿ ಭಾರೀ ಅಕ್ರಮ ನಡೆದಿದ್ದು,ಅದನ್ನು ರದ್ದುಗೊಳಿಸಲೇಬೇಕು ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು, ಈ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಮೂಲಭೂತವಾಗಿ ದೋಷಪೂರಿತವಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ. ಯಾವುದೇ ಕೌಶಲ್ಯ, ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ನೇಮಕ ಪ್ರಕ್ರಿಯೆ ನಡೆದಿಲ್ಲ. ಬದಲಾಗಿ ಸಂಪೂರ್ಣ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ಹೀಗಾಗಿ ಈ ನೇಮಕ ಪ್ರಕ್ರಿಯೆಯನ್ನು ಅಮಾನ್ಯಗೊಳಿಸದೇ ಬೇರೆ ಯಾವುದೇ ದಾರಿ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಪಶ್ಚಿಮ ಬಂಗಾಳದ ವಿವಿಧ ಶಾಲೆಗಳಲ್ಲಿ 25,000 ಕ್ಕೂ ಹೆಚ್ಚು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ವಿವಾದ ಭುಗಿಲೆದ್ದ ಬೆನ್ನಲ್ಲೇ ಕಲ್ಕತ್ತಾ ಹೈಕೋರ್ಟ್‌ನ ಏಪ್ರಿಲ್ 2024 ರಂದು ನೇಮಕಾತಿ ರದ್ದುಗೊಳಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿವಾದಾತ್ಮಕ ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಗೊಂಡ ಎಲ್ಲಾ ವ್ಯಕ್ತಿಗಳನ್ನು ಅವರ ಹುದ್ದೆಗಳಿಂದ ವಜಾಗೊಳಿಸಲಾಗುವುದು ಎಂದು ಹೇಳಿದೆ. ಆದಾಗ್ಯೂ, ಈ ತೀರ್ಪಿನಿಂದ ಬಾಧಿತರು ಈಗಾಗಲೇ ಪಡೆದ ಯಾವುದೇ ಸಂಬಳ ಅಥವಾ ಪ್ರಯೋಜನಗಳನ್ನು ಮರುಪಾವತಿಸಬೇಕಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಸುದ್ದಿಯನ್ನೂ ಓದಿ: Earthquake: ಪಶ್ಚಿಮ ಘಟ್ಟದಲ್ಲಿ ಭೂಕಂಪದ ಅನುಭವ, ಜನ ಭಯಭೀತ
ಏನಿದು ಪ್ರಕರಣ?
ಈ ಪ್ರಕರಣವು 2016 ರಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ಸರ್ಕಾರಿ ಮತ್ತು ರಾಜ್ಯ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗಾಗಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮದ ಕುರಿತಾಗಿದೆ. ಒಟ್ಟು 24,640 ಹುದ್ದೆಗಳಿಗೆ ಒಟ್ಟು 23 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ಇದರ ಹೊರತಾಗಿಯೂ 25,753 ನೇಮಕಾತಿ ಪತ್ರಗಳನ್ನು ನೀಡಲಾಗಿದೆ. OMR ಹಾಳೆಗಳನ್ನು ತಿರುಚುವುದು ಮತ್ತು ರ‍್ಯಾಂಕ್-ಜಂಪಿಂಗ್ ಪ್ರಕರಣಗಳಂತಹ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಕಲ್ಕತ್ತಾ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ಕೊನೆಗೆ ನೇಮಕಾತಿ ರದ್ದುಗೊಳಿಸಿ ತೀರ್ಪು ನೀಡಿತ್ತು. ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸೇರಿದಂತೆ ಹಲವಾರು ಪಕ್ಷಗಳು ಅರ್ಜಿಗಳನ್ನು ಸಲ್ಲಿಸಿದ ನಂತರ ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಡಿಸೆಂಬರ್ 19, 2024 ರಂದು, ಸುಪ್ರೀಂ ಕೋರ್ಟ್ ಈ ವಿಷಯದ ಕುರಿತು ವಿಚಾರಣೆಯನ್ನು ಪ್ರಾರಂಭಿಸಿತು, ಇದು ಜನವರಿ ಮತ್ತು ಫೆಬ್ರವರಿ 2025 ರವರೆಗೆ ಮುಂದುವರೆಯಿತು. ಅಂತಿಮವಾಗಿ ಸುಪ್ರೀಂ ಕೋರ್ಟ್ ಫೆಬ್ರವರಿ 10, 2025 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.