ಚೆನ್ನೈ, ಮೇ 4: ಭಾರಿ ಕುತೂಹಲ ಕೆರಳಿಸಿದ ಪಂಚ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರ ಬೀಳುತ್ತಿದೆ (Assembly Election Result 2026). ಬಹುತೇಕ ಕಡೆಗಳಲ್ಲಿ ಎಕ್ಸಿಟ್ ಪೋಲ್ ವರದಿಯಂತೆ ಫಲಿತಾಂಶ ಬರುತ್ತಿದ್ದು, ತಮಿಳುನಾಡಿನಲ್ಲಿ ಮಾತ್ರ ಅಚ್ಚರಿಯ ಬೆಳವಣಿಗೆ ಕಂಡುಬಂದಿದೆ. ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಆರಂಭಿಕ ಟ್ರೆಂಡ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಿಂಗ್ ಮೇಕ್ ಆಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ.
ಇದೀಗ ಬಂದ ವರದಿಯ ಪ್ರಕಾರ ಟಿವಿಕೆ 102 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಡಿಎಂಕೆ ತೀವ್ರ ಹಿನ್ನಡೆಯಾಗಿದೆ. ಡಿಎಂಕೆ ಕೇವಲ 52 ಸೀಟ್‌ಗಳಲ್ಲಿ ಮುಂದಿದ್ದು, ಎಐಎಡಿಎಂಕೆ 69 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ.
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ, ತಮಿಳುನಾಡಿನಲ್ಲಿ ಎಡಿಎಂಕೆಗೆ ಪೈಪೋಟಿ ನೀಡುತ್ತಿರುವ ಟಿವಿಕೆ
ಟಿವಿಕೆ ಸುನಾಮಿ
ಬಹುತೇಕ ಎಕ್ಸಿಟ್ ಪೋಲ್‌ಗಳು ಡಿಎಂಕೆ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೆ-ಎಕ್ಸಿಸ್ ಮೈ ಇಂಡಿಯಾ ಹೊರತು ಪಡಿಸಿ ಬೇರೇ ಯಾವ ಸಮೀಕ್ಷೆಯೂ ಟಿವಿಕೆ ಇಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂದು ಊಹಿಸಿರಲಿಲ್ಲ. ಇಂಡಿಯಾ ಟುಡೆ-ಎಕ್ಸಿಸ್ ಮೈ ಇಂಡಿಯಾ ಟಿವಿಕೆ 98-120 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದಿತ್ತು. ಅದರಂತೆ ಇದೀಗ ಟಿವಿಕೆ ಶತಕ ದಾಟಿ ಮುನ್ನಡೆ ಸಾಧಿಸುತ್ತಿದ್ದು, ವಿಜಯ್ ಸರ್ಕಾರ ರಚಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಎಂಜಿಆರ್, ಜಯಲಲಿತಾ ಬಳಿಕ ವಿಜಯ್ ಕೂಡ ಮುಖ್ಯಮಂತ್ರಿಯಾಗುತ್ತಾರಾ ಎನ್ನುವ ಕುತೂಹಲ ಮೂಡಿದೆ.
ಅಚ್ಚರಿ ಎಂದರೆ ಟಿವಿಕೆ ಇದು ಮೊದಲ ಚುನಾವಣೆ. ಚೊಚ್ಚಲ ಚುನಾವಣೆಯಲ್ಲೇ ಇಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದು ದೇಶದ ಗಮನ ಸೆಳೆದಿದೆ. ಚುನಾವಣಾ ಪ್ರಚಾರ ಸಮಯದಲ್ಲಿ ವಿಜಯ್ ವಿರುದ್ಧ ಡಿಎಂಕೆ ಸೇರಿದಂತೆ ಹಲವು ನಾಯಕು ವೈಯಕ್ತಿಕವಾಗಿ ಟೀಕಿಸಿದ್ದು, ಒಂದು ರೀತಿಯಲ್ಲಿ ಅನುಕಂಪ ಸೃಷ್ಟಿಸಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಒಟ್ಟು 234 ಕ್ಷೇತ್ರಗಳಿದ್ದು ಮ್ಯಾಜಿಕ್ ನಂಬರ್ 118. ಇದೀಗ ಡಿವಿಕೆ ತಮಿಳುನಾಡಿನಲ್ಲಿ ಮತ್ತೊಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರ ಹೊಮ್ಮಿದೆ.