ದಿಸ್ಪುರ: ಇಂದು ಶಿಕ್ಷಕರ ದಿನಾಚರಣೆ. ಈ ಸಂದರ್ಭದಲ್ಲಿ ಇಲ್ಲೊಬ್ಬ ಶಿಕ್ಷಕರ (teacher) ಬಗ್ಗೆ ನಿಮಗೆ ತಿಳಿಯಲೇಬೇಕು. ಯಾಕೆಂದರೆ ಶಾಲೆಯಿಂದ ಹೊರಗುಳಿದ 300 ವಿದ್ಯಾರ್ಥಿಗಳನ್ನು ಮತ್ತೆ ತರಗತಿಗೆ ಕರೆತಂದು ಪಾಠ ಹೇಳಿಕೊಡುತ್ತಿದ್ದಾರೆ. ಇದಕ್ಕಾಗಿ ಅವರು ಪ್ರತಿನಿತ್ಯ 150 ಕಿ.ಮೀ ದೂರ ಪ್ರಯಾಣಿಸುತ್ತಾರೆ. ಅಸ್ಸಾಂ (Assam) ನ ದೇಬಜಿತ್ ಘೋಷ್ ಎಂಬ ಶಿಕ್ಷಕ, ಆನೆಗಳಿರುವ ಪ್ರದೇಶ ಮತ್ತು ಕೆಸರುಮಯ ರಸ್ತೆಗಳನ್ನು ಹೊಂದಿರುವ ದಿಹಿಂಗ್ ಪಟ್ಕೈ ರಾಷ್ಟ್ರೀಯ ಉದ್ಯಾನವನದ ಕಠಿಣ ಭೂಪ್ರದೇಶದಲ್ಲಿ ಸಂಚರಿಸುತ್ತಾ, ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. 34 ವರ್ಷ ವಯಸ್ಸಾಗಿರುವ ಇವರಿಗೆ, ಪ್ರಾಥಮಿಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಮಕ್ಕಳ ಬೆಳಕಾಗಿದ್ದಾರೆ.
ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಈ ಶಿಕ್ಷಕನ ಕರ್ತವ್ಯ ನಿಷ್ಠೆ ಇದೀಗ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಈ ಸಮರ್ಪಣೆಗೆ ಸೆಪ್ಟೆಂಬರ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ 2025 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 45 ಶಿಕ್ಷಕರಲ್ಲಿ ಇವರೂ ಒಬ್ಬರು.
2022ರಲ್ಲಿ ಸ್ಥಾಪನೆಯಾದ ನಮ್ಸಾಂಗ್ ಟೀ ಎಸ್ಟೇಟ್ ಮಾದರಿ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಘೋಷ್ ದಿಬ್ರುಗಢದಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಜೊತೆಗೆ ಇತರ ಇಬ್ಬರು ಶಿಕ್ಷಕರನ್ನು ಕೂಡ ಕರೆದುಕೊಂಡು ಹೋಗುತ್ತಾರೆ. ಆದರೆ ಇತರರು ಶಾಲೆಗೆ ನೇರ ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ ಬೈಕ್‌ನಲ್ಲಿ ಪ್ರಯಾಣಿಸುತ್ತಾರೆ.
2013 ರಲ್ಲಿ ದಿಬ್ರುಗಢ ಪ್ರೌಢಶಾಲೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಘೋಷ್, 8 ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಎಂಬಾತನಿಗೆ ಅದ್ಭತವಾಗಿ ಮಾರ್ಗದರ್ಶನ ನೀಡಿ ಸುದ್ದಿಯಾಗಿದ್ದರು. ಅಭಿಷೇಕ್‍ಗೆ ವಿಜ್ಞಾನ ವಿಷಯವು ಕಷ್ಟವಾಗಿದ್ದರಿಂದ ಘೋಷ್ ಆತನಿಗೆ ಪಾಠ ಹೇಳಿಕೊಟ್ಟರು. ಇದರಿಂದ ಗಮನಾರ್ಹವಾಗಿ ಸುಧಾರಣೆ ಕಂಡ ಅಭಿಷೇಕ್ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಗಳಿಸುವಲ್ಲಿ ಸಫಲನಾದ. ಅಸ್ಸಾಂ ಮಂಡಳಿಯ 10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ ಶೇ. 93 ರಷ್ಟು ಅಂಕವನ್ನು ಪಡೆದರು.
ಇದನ್ನೂ ಓದಿ: Viral Video: ಸಿಕ್ಕರೆ ಇಂಥಾ ಮಾವ ಸಿಗ್ಬೇಕು! ಸೊಸೆ ಜೊತೆಗಿನ ಬಾಂದವ್ಯವನ್ನೊಮ್ಮೆ ನೋಡಿ
ಈಗ, ಅಭಿಷೇಕ್ ವಿಜ್ಞಾನದಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಆರ್ಥಿಕ ಸವಾಲುಗಳ ಹೊರತಾಗಿಯೂ ಗಣಿತದಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಈ ಅನುಭವಗಳು ಕೇವಲ ಅಂಕಗಳ ಮೇಲೆ ಕೇಂದ್ರೀಕರಿಸುವ ಬದಲು ಕುತೂಹಲವನ್ನು ಬೆಳೆಸುವಲ್ಲಿ ಘೋಷ್ ಅವರ ನಂಬಿಕೆಯನ್ನು ಬಲಪಡಿಸಿದವು. ಇದೀಗ ಶಿಕ್ಷಕ ಘೋಷ್ ಅವರು ಚಹಾ ತೋಟದ ಸಮುದಾಯಗಳ ಮಕ್ಕಳು ಮಾಧ್ಯಮಿಕ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಿದ್ದಾರೆ. ಶಾಲೆಯು 300 ಕ್ಕೂ ಹೆಚ್ಚು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕೇವಲ ಎರಡು ವರ್ಷಗಳಲ್ಲಿ ಮತ್ತೆ ತರಗತಿಗಳಿಗೆ ಕರೆತಂದಿದೆ ಎಂದು ವರದಿ ತಿಳಿಸಿದೆ.
ಮಾಧ್ಯಮಿಕ ಶಾಲೆಗಳ ಕೊರತೆ ಮತ್ತು ದಿಹಿಂಗ್ ಪಟ್ಕೈ ರಾಷ್ಟ್ರೀಯ ಉದ್ಯಾನವನದ ಮೂಲಕ ಅಪಾಯಕಾರಿ ಮಾರ್ಗದಲ್ಲಿ ಪ್ರಯಾಣಿಸಬೇಕಾದ ಕಾರಣದಿಂದಾಗಿ ಮಕ್ಕಳು ಶಾಲೆಯನ್ನು ಬಿಡಬೇಕಾಯಿತು. ಹೀಗಾಗಿ ಘೋಷ್ ಅವರು ಈ ನಿರ್ಧಾರ ತೆಗೆದುಕೊಂಡರು. ಮೊದಲ ಬಾರಿಗೆ, ಚಹಾ ತೋಟಗಳ ಮಕ್ಕಳು ಹತ್ತಿರದ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಮೊದಲ ವರ್ಷದಲ್ಲಿ, 271 ವಿದ್ಯಾರ್ಥಿಗಳು ದಾಖಲಾಗಿದ್ದರು, ಎರಡನೇ ವರ್ಷದ ವೇಳೆಗೆ 326ಕ್ಕೆ ಏರಿತು.
ಘೋಷ್ ತಮ್ಮ ಶಿಕ್ಷಣದಲ್ಲಿ ಪ್ರಯೋಗಗಳು, ಆಟಿಕೆ ತಯಾರಿಕೆ ಇತ್ಯಾದಿ ಮೂಲಕ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುತ್ತಾರೆ. ಐಸಿಟಿ ಪರಿಕರಗಳು, ವರ್ಚುವಲ್ ಲ್ಯಾಬ್‌ಗಳು ಮತ್ತು 3D ವೆಬ್‌ಸೈಟ್‌ಗಳ ಮೂಲಕ ತಂತ್ರಜ್ಞಾನವನ್ನು ಸಂಯೋಜಿಸುತ್ತಾರೆ. ಅವರ ಪ್ರಭಾವವು ತರಗತಿಗಳನ್ನು ಮೀರಿ ವಿಸ್ತರಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ, ಅವರು ಆರೋಗ್ಯ ಶಿಬಿರವನ್ನು ಆಯೋಜಿಸಿದರು. ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಮಾತ್ರೆಗಳು ಮತ್ತು ಜಂತುಹುಳು ನಿವಾರಣಾ ಚಿಕಿತ್ಸೆಗಳೊಂದಿಗೆ ವಿದ್ಯಾರ್ಥಿಗಳಲ್ಲಿರುವ ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಪರಿಹರಿಸಿದರು. ಮೂರು ವರ್ಷಗಳಲ್ಲಿ ಮಕ್ಕಳ ಹಿಮೋಗ್ಲೋಬಿನ್ ಮಟ್ಟಗಳು ಗಮನಾರ್ಹವಾಗಿ ಸುಧಾರಿಸಿದವು.