ಹೈದರಾಬಾದ್, ಏ. 26: ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿನ ತಾಪಮಾನ ಏರಿಕೆಯಾಗುತ್ತಿದೆ. ಬೇಸಗೆ ಅಸಹನೀಯವಾಗತೊಡಗಿದೆ. ನೀರಿಗೆ ಹಾಹಾಕಾರ ಸಾಮಾನ್ಯ ಎಂಬಂತಾಗಿದೆ. ಬಿಸಿಲಾಘಾತ, ಸೂರ್ಯಾಘಾತದಂತಹ ಹೊಸ ಹೊಸ ಸಮಸ್ಯೆ ಸೃಷ್ಟಿಯಾಗುತ್ತಿದೆ. ಮನೆಯಿಂದ ಹೊರಗಿಳಿಯಬೇಕಾದರೆ ಎರಡೆರಡು ಬಾರಿ ಯೋಚಿಸುವಂತಾಗಿದೆ. ಪ್ರಕೃತಿಯ ಮೇಲೆ ನಾವು ಎಸಗಿರುವ ದೌರ್ಜನ್ಯಕ್ಕೆ ಸಿಕ್ಕ ಪ್ರತಿಫಲ ಇದು. ಕಾಡು ಕಡಿದು ವಿಪರೀತ ಎನಿಸುವಷ್ಟು ನಗರ ಬೆಳೆಸಿದರ ಪರಿಣಾಮ ನಾವೀಗ ಅನುಭವಿಸುತ್ತಿದ್ದೇವೆ. ಇದಕ್ಕೆಲ್ಲ ಏಕೈಕ ಪರಿಹಾರ ಎಂದರೆ ಆದಷ್ಟು ಗಿಡ ನೆಡುವುದು ಮತ್ತು ಇರುವ ಕಾಡನ್ನು ಉಳಿಸಿ ಬೆಳೆಸುವುದು. ಹೀಗಂತ ತಜ್ಞರು ಹೇಳಿದರೆ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟು ಬಿಡುತ್ತೇವೆ. ಇದಕ್ಕೆ ಪರಿಹಾರ ನಮಗೂ ಗೊತ್ತು. ನಾವು ಈ ಬಗ್ಗೆ ಗಂಟೆಗಟ್ಟಲೆ ಮಾತನಅಡಬಲ್ಲೆವೆ. ಕಾರ್ಯರೂಪಕ್ಕೆ ತರಲೂ ಒಬ್ಬರೂ ಮುಂದಾಗುತ್ತಿಲ್ಲ. ಆದರೆ ಇಲ್ಲೊಬ್ಬರು ಹಾಗಲ್ಲ. ತಮ್ಮದೇ ಜಮೀನದಲ್ಲಿ ಕಾಡು ಬೆಳೆಸಿದ್ದಾರೆ. ಬರೋಬ್ಬರಿ 70 ಎಕ್ರೆಯಲ್ಲಿ ಈ ದಟ್ಟ ಖಾಸಗಿ ಕಾನನ ತಲೆ ಎತ್ತಿದ್ದು, ಪ್ರಾಣಿ-ಪಕ್ಷಿಗಳು ಸ್ವಚ್ಛಂದದಿಂದ ಓಡಾಡುತ್ತಿವೆ. ಅವರೇ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ದುಶರ್ಲ ಸತ್ಯನಾರಾಯಣ (Dusharla Satyanarayana). ಅವರ ಸಾಹಸಗಾಥೆ ಇಲ್ಲಿದೆ.
1954ರಲ್ಲಿ ನಾಲ್ಗೊಂಡದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸತ್ಯನಾರಾಯಣ ಅವರಿಗೆ ಬಾಲ್ಯದಿಂದಲೇ ಪ್ರಕೃತಿ ಬಗ್ಗೆ ಅಪಾರ ಒಲವು. ಇದೇ ಕಾರಣಕ್ಕೆ ಅವರು ಪೂರ್ಜರಿಂದ ತಮಗೆ ಬಳುವಳಿಯಾಗಿ ಬಂದ 70 ಎಕ್ರೆ ಜಮೀನನ್ನು ಕಾಡಾಗಿ ಪರಿವರ್ತಿಸಿ ಭೂವಿಗೆ ಹಸಿರಿನ ಹೊದಿಕೆ ಹೊದಿಸಿದ್ದಾರೆ.
ಬೆಂಗಳೂರಿನಲ್ಲಿದೆ ದೇಶದ 4ನೇ ದೊಡ್ಡ ಆಲದ ಮರ; ಪ್ರಕೃತಿಪ್ರಿಯರು ಭೇಟಿ ನೀಡಲೇಬೇಕಾದ ಜಾಗ ಇದು
ಸತ್ಯನಾರಾಯಣ ಹಿನ್ನೆಲೆ
ಮೊತೆ ಮಂಡಲ್‌ನ ರಾಘವಪುರಂ ಗ್ರಾಮದಲ್ಲಿ ಜನಿಸಿದ ಸೂರ್ಯನಾರಾಯಣ ಹೈದರಾಬಾದ್‌ನ ಜಯಶಂಕರ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್‌ಸಿ. (ಕೃಷಿ) ಪದವಿ ಪೂರೈಸಿದರು. ಜತೆಗೆ ಜಲ ಸಾಧನ ಸಮಿತಿ (JSS) ಹುಟ್ಟುಹಾಕಿರುವ ಅವರು ನೀರಿನ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಟರ್ನಿಂಗ್ ಪಾಯಿಂಟ್
ಪದವಿ ಪೂರ್ಣಗೊಳಿಸಿದ ಸತ್ಯನಾರಾಯಣ 1977ರಲ್ಲಿ ಕಡಪದಲ್ಲಿರುವ ಆಂಧ್ರ ಬ್ಯಾಂಕ್‌ಗೆ ಅಗ್ರಿಕಲ್ಚರಲ್ ಅಸಿಸ್ಟಂಟ್ ಆಗಿ ಸೇರ್ಪಡೆಗೊಂಡರು. ಬಳಿಕ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ರೂರಲ್ ಡೆವಲಪ್‌ಮೆಂಟ್ ಆಫೀಸರ್ ಆಗಿ ವೃತ್ತಿ ಜೀವನ ಮುಂದುವರಿಸಿದರು. ಈ ವೇಳೆ ಚಿಕ್ಕ ಕೃಷಿಕರ ಸಮಸ್ಯೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗಿದ್ದು ಅವರ ಬದುಕಿಗೆ ಟರ್ನಿಂಗ್ ಆಯ್ತು. ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅವರು ಕೃಷಿಕರ ಸಮಸ್ಯೆ ಪರಿಹರಿಸಲು ಮುಂದಾದರು.1980ರಲ್ಲಿ ಜಲ ಸಾಧನ ಸಮಿತಿಯನ್ನು ಹುಟ್ಟು ಹಾಕಿ ನಲ್ಗೊಂಡ ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ಪಾದಯಾತ್ರೆ ಮೂಲಕ ಅಧಿಕಾರಿಗಳ, ರಾಜಕಾರಣಿಗಳ ಗಮನ ಸೆಳೆದರು.

ಅರಣ್ಯವಾಗಿ ಬದಲಾದ 70 ಎಕ್ರೆ
ಬಾಲ್ಯದಲ್ಲೇ ಪ್ರಕೃತಿಯೊಂದಿಗೆ ಒಡನಾಟ ಆರಂಭಿಸಿದ ಸೂರ್ಯನಾರಾಯಣ 27ನೇ ವರ್ಷದಲ್ಲಿ ರಾಘವಪುರಂನಲ್ಲಿ ತಮ್ಮ ಪಾಲಿಗೆ ಹಿರಿಯರಿಂದ ಬಂದ 70 ಎಕ್ರೆಯಲ್ಲಿ ಕಾಡು ಬೆಳೆಸಲು ಆರಂಭಿಸಿದರು. ಅವರು ದೇಶಾದ್ಯಂತ ಓಡಾಡಿ ಅಪರೂಪದ ಮರಗಳ ಬಿತ್ತನೆ ಬೀಜವನ್ನು ಸಂಗ್ರಹಿಸಿದರು. ಅಲ್ಲದೆ ಕಾಡಿನ ಮಧ್ಯೆ ಕೊಳಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದರು. ಹೀಗೆ 70 ಎಕ್ರೆಯಲ್ಲಿ ನೂರಾರು ಪ್ರಬೇಧದ ಮರಗಳು ತಲೆ ಎತ್ತಿ ನಿಂತಿವೆ. ಹಣ್ಣುಗಳ ಮರವೂ ಇಲ್ಲಿದ್ದು, ಸಹಜವಾಗಿ ಪ್ರಾಣಿ-ಪಕ್ಷಿಗಳ ಸಂತತಿಯೂ ಬೆಳೆದಿದೆ.
ಕಾಡು ಪರಾಣಿ-ಪಕ್ಷಿಗಳಿಗೆ ಆಹಾರ ವ್ಯವಸ್ಥೆ
ವಿಶೇಷ ಎಂದರೆ ಸೂರ್ಯನಾರಾಯಣ ಪ್ರಾಣಿ-ಪಕ್ಷಿಗಳ ಆಹಾರಕ್ಕಾಗಿಯೇ ಹಲವು ಎಕ್ರೆಯಲ್ಲಿ ಧಾನ್ಯ ಬೆಳೆಸುತ್ತಿದ್ದಾರೆ. ಕಾಡಿನಲ್ಲಿ ಬೆಳೆದ ಹಣ್ಣು, ಗದ್ದೆಯಲ್ಲಿನ ಧಾನ್ಯಗಳನ್ನು ಕಟಾವು ಮಾಡುವುದಿಲ್ಲ. ಪ್ರಾಣಿ-ಪಕ್ಷಿಗಳಿಗಾಗಿಯೇ ಇವು ಮೀಸಲು. ಈ ಕಾಡಿನಲ್ಲಿ ಪುಟ್ಟ ಗುಡಿಸಲು ಕಟ್ಟಿ ವಾಸಿಸುತ್ತಿರುವ ಸತ್ಯನಾರಾಯಣ ತಮಗೆ ಪ್ರಕೃತಿ ಬಿಟ್ಟು ಇನ್ಯಾವುದೇ ಐಷಾರಾಮಿ ಜೀವನ ಬೇಡ ಎನ್ನುತ್ತಾರೆ.
ಸುಮಾರು 5 ದಶಕಗಳ ಕಾಲ ಕಷ್ಟಪಟ್ಟು ಬೆಳೆಸಿರುವ ಕಾಡಿಗೆ ಸತ್ಯನಾರಾಯಣ ಇಟ್ಟಿರುವ ಹೆಸರು 360 ಬಾಗಿಲು ಮತ್ತು 660 ಕಿಟಿಕಿ ಹೊಂದಿರುವ ಮನೆ. ಮಳೆನೀರು ಸಂಗ್ರಹಕ್ಕೂ ಕಾಡಿನೊಳಗೆ ವ್ಯವಸ್ಥೆ ಮಾಡಲಾಗಿದೆ. ಕಾಡೊಳಗೆ ಸುಮಾರು 7 ಕೊಳ ಮತ್ತು ಚೆಕ್ ಡ್ಯಾಂಗಳಿವೆ. ಈ ಕೊಳದಲ್ಲಿ ವಿವಿಧ ಬಗೆಯ ತಾವರೆಗಳಿವೆ. ಜತೆಗೆ ಮೀನು, ಆಮೆ, ಕಪ್ಪೆ ಮುಂತಾದ ಜಲಚರಗಳಿವೆ. ಇನ್ನು ಕಾಡಿನಾದ್ಯಂತ 9 ಸ್ವಯಂಭು ಶಿವಲಿಂಗಗಳಿವೆ. ಶಿವರಾತ್ರಿಯಂತಹ ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತದೆ.
ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನ
ರಾಘವಪುರಂ ಗ್ರಾಮದಲ್ಲಿ ತಲೆ ಎತ್ತಿ ನಿಂತಿರುವ ಈ ಖಾಸಗಿ ಅರಣ್ಯದಲ್ಲಿ ಹಲವು ಬಗೆಯ ಪ್ರಾಣಿ-ಪಕ್ಷಿಗಳಿದ್ದು, ಪರಿಸರ ಸಮತೋಲನಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. ಕಾಡಿನಲ್ಲಿ ಮೊಲ, ಮಂಗ, ನವಿಲು, ಅಳಿಲು, ಹಾವು, ಕಾಡುಹಂದಿ, ಕಾಡು ಬೆಕ್ಕು, ಮುಂಗುಸಿ ಮುಂತಾದ ವನ್ಯ ಜೀವಿಗಳು ಸ್ವತಂತ್ರವಾಗಿ ಓಡಾಡುತ್ತಿವೆ.
ದೇಶದ ದೊಡ್ಡ ಅರಣ್ಯಗಳಿವು; ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ
100 ಕೋಟಿ ರುಪಾಯಿ ಆಫರ್
ವಿಶೇಷ ಎಂದರೆ ಈ ಕಾಡನ್ನು ನೀಡುವಂತೆ ರಿಯಲ್ ಎಸ್ಟೇಟ್ ಕುಳಗಳು ಹಲವು ಬಾರಿ ಸತ್ಯನಾರಾಯಣ ಅವರನ್ನು ಸಂಪರ್ಕಿಸಿವೆ. ಸುಮಾರು 100 ಕೋಟಿ ರುಪಾಯಿ ಕೊಡುಗೆಯನ್ನೂ ಮುಂದಿಟ್ಟಿವೆ. ಇದರಲ್ಲಿ ಅವರ ಸಂಬಂಧಿಕರೂ ಸೇರಿದ್ದಾರೆ. ಆದರೆ ಸತ್ಯನಾರಾಯಣ ಇದಕ್ಕೆಲ್ಲ ಒಪ್ಪಿಲ್ಲ, ಆಮಿಷಗಳಿಗೆ ಕರಗಿಲ್ಲ. ತಮ್ಮ ಮಕ್ಕಳು ಈ ಜಾಗಕ್ಕೆ ಉತ್ತರಾಧಿಕಾರಿಗಳಲ್ಲ ಎಂದು ಸ್ಪಷ್ಟವಾಗಿ ಈಗಾಗಲೇ ಹೇಳಿ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಯಾಕೆಂದು ಅವರ ಬಾಯಲ್ಲೇ ಕೇಳಿ. ''ಈ ಕಾಡು ಪ್ರಾಪರ್ಟಿ ಅಲ್ಲ; ಬದಲಾಗಿ ಒಂದೊಳ್ಳೆ ಉದ್ದೇಶ. 50 ವರ್ಷದ ಮರವೊಂದು 1.5 ಕೋಟಿ ರುಪಾಯಿ ಮೌಲ್ಯವನ್ನು ಭೂಮಿಗೆ ನೀಡಿದರೆ ಈ ಕಾಡು ಸಾವಿರಾರು ಕೋಟಿ ಕೋಟಿ ರುಪಾಯಿ ಮೌಲ್ಯ ಹೊಂದಿದೆ. ಇದೆಲ್ಲ ಭೂಮಿಗೆ ಸೇರಿದ್ದು ಹೊರತು ಮನುಷ್ಯರಿಗಲ್ಲʼʼ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಇಲ್ಲಿ ಸುಮಾರು 5 ಕೋಟಿ ಮರಗಳಿವೆ. ಸತ್ಯನಾರಾಯಣ ಕಾರ್ಯಕ್ಕೆ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತವಾಗಿದೆ. ಜತೆಗೆ ಅದೆಷ್ಟೋ ಜನರಿಗೆ ಮಾದರಿ ಎನಿಸಿಕೊಂಡಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.