ಹೈದರಾಬಾದ್, ಡಿ. 28: ಸನಾತನ ಧರ್ಮವನ್ನು ಬಲಪಡಿಸುವ ಮತ್ತು ಅಭಿವೃದ್ದಿಪಡಿಸುವ ಸಮಯ ಬಂದಿದೆ. ಅದಕ್ಕಾಗಿ ಹಿಂದೂಗಳು ಒಗ್ಗಟ್ಟಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಕರೆ ನೀಡಿದರು. ಭಾನುವಾರ (ಡಿಸೆಂಬರ್ 28) ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ʼʼಭಾರತವು ವಿಶ್ವಗುರುವಾಗಬೇಕು ಎನ್ನುವುದು ನಮ್ಮ ಆಶಯ ಮಾತ್ರವಲ್ಲ ಜಗತ್ತಿಗೆ ಅಗತ್ಯವಿರುವ ಬಹುದೋಡ್ಡ ಜವಾಬ್ದಾರಿ. ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಯತ್ನಗಳ ಮೂಲಕ ಆರ್‌ಎಸ್‌ಎಸ್ ಈ ಗುರಿಯತ್ತ ಸ್ಥಿರವಾಗಿ ಕೆಲಸ ಮಾಡುತ್ತಿದೆʼʼ ಎಂದು ಅವರು ಹೇಳಿದರು.
"ಎಲ್ಲ ಹಿಂದೂಗಳು ಒಂದಾಗಿ ಸನಾತನ ಧರ್ಮವನ್ನು ಅಭಿವೃದ್ಧಿ ಪಡಿಸುವ ಸಮಯ ಬಂದಿದೆ" ಎಂದರು. 20ನೇ ಶತಮಾನದ ಆರಂಭದಲ್ಲಿದ್ದ ಆಧ್ಯಾತ್ಮಿಕ ನಾಯಕ ಯೋಗಿ ಅರವಿಂದ್ ಅವರನ್ನು ಉಲ್ಲೇಖಿಸಿದ ಅವರು, ʼʼಸನಾತನ ಧರ್ಮದ ಪುನರುತ್ಥಾನದ ಕಲ್ಪನೆಯನ್ನು ಬಹಳ ಹಿಂದೆಯೇ ಬಿತ್ತಲಾಗಿತ್ತು. ಶತಮಾನದ ಹಿಂದೆ ಪ್ರಾರಂಭವಾದ ಪ್ರಕ್ರಿಯೆಯನ್ನು ಈಗ ಬದ್ಧತೆ ಮತ್ತು ಸಾಮೂಹಿಕ ಪ್ರಯತ್ನದಿಂದ ಮುಂದುವರಿಸಬೇಕುʼʼ ಎಂದು ಅಭಿಪ್ರಾಯಪಟ್ಟರು.
ಮೋಹನ್ ಭಾಗವತ್ ಅವರ ಭಾಷಣ:
ʼʼಆ ಸಮಯ ಈಗ ಬಂದಿದೆ. ಸನಾತನ ದರ್ಮದ ಪುನರುತ್ಥಾನ ಎನ್ನುವುದು ದೇವರ ಇಚ್ಛೆ. ಹಿಂದೂ ರಾಷ್ಟ್ರದ ಉದಯವು ಸನಾತನ ಧರ್ಮದ ಅಭಿವೃದ್ದಿಗಾಗಿ ಎಂದು 100 ವರ್ಷಗಳ ಹಿಂದೆ ಯೋಗಿ ಅರವಿಂದ ಘೋಷಿಸಿದರು. ಭಾರತ ಅಥವಾ ಹಿಂದೂ ರಾಷ್ಟ್ರ, ಸನಾತನ ಧರ್ಮ, ಹಿಂದುತ್ವ-ಇವು ಸಮಾನಾರ್ಥಕ ಪದಗಳು. ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗ ನಾವು ಆ ಪ್ರಕ್ರಿಯೆಯನ್ನು ಮುಂದುವರಿಸಬೇಕು" ಎಂದು ಹೇಳಿದರು.
ʼʼಯಾವುದೇ ಸಂಘರ್ಷವಿಲ್ಲದಂತೆ ಭಾರತ 3,000 ವರ್ಷ ಜಗತ್ತನ್ನು ಮುನ್ನಡೆಸಿದೆʼʼ: ಮೋಹನ್ ಭಾಗವತ್
ʼʼಭಾರತ ಮತ್ತು ವಿದೇಶಗಳಲ್ಲಿ ಸಂಘದೊಂದಿಗೆ ಸಂಪರ್ಕ ಹೊಂದಿದ ಸಂಸ್ಥೆಗಳು ಸಾಮಾನ್ಯ ಉದ್ದೇಶವನ್ನು ಹೊಂದಿವೆ. ಭಾರತದಲ್ಲಿ ಸಂಘದ ಪ್ರಯತ್ನಗಳು ಮತ್ತು ಆಯಾ ದೇಶಗಳಲ್ಲಿ ಹಿಂದೂ ಸ್ವಯಂ ಸೇವಕ ಸಂಘಗಳ ಪ್ರಯತ್ನಗಳು ಒಂದೇ ಆಗಿರುವುದನ್ನು ನಾವು ನೋಡುತ್ತಿದ್ದೇವೆʼʼ ಎಂದು ತಿಳಿಸಿದರು.
ವಿಶ್ವಗುರುವಾಗಲು ನಿರಂತರ ಪ್ರಯತ್ನ ಅಗತ್ಯ
ಭಾರತದ ಜಾಗತಿಕ ನಾಯಕತ್ವದ ಕುರಿತು ಮಾತನಾಡಿದ ಮೋಹನ್ ಭಾಗವತ್, ʼʼವಿಶ್ವಗುರುವಾಗಲು ಬಹು ಕ್ಷೇತ್ರಗಳಲ್ಲಿ ನಿರಂತರ ಪ್ರಯತ್ನದ ಅಗತ್ಯವಿದೆ. ಆರ್‌ಎಸ್‌ಎಸ್ ವ್ಯಕ್ತಿತ್ವ ನಿರ್ಮಾಣ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೋಧಿಸುವ ಮೂಲಕ ಕೊಡುಗೆ ನೀಡುತ್ತದೆ. ನಾವು ಮತ್ತೆ ವಿಶ್ವಗುರು ಆಗಲು ಕೆಲಸ ಮಾಡಬೇಕಾಗಿದೆ. ವಿಶ್ವಗುರು ಆಗುವುದು ನಮ್ಮ ಮಹತ್ವಾಕಾಂಕ್ಷೆಯಲ್ಲ. ಇದು ಜಗತ್ತಿನ ಅಗತ್ಯ. ಅವುಗಳಲ್ಲಿ ಸಂಘವೂ ಒಂದುʼʼ ಎಂದು ಬಣ್ಣಿಸಿದರು.
ತಂತ್ರಜ್ಞಾನದ ವಿವೇಕಯುತ ಬಳಕೆ
ಕೃತಕ ಬುದ್ಧಿಮತ್ತೆಯಂತಹ ಬೆಳೆಯುತ್ತಿರುವ ತಂತ್ರಜ್ಞಾನದ ಪ್ರಭಾವವನ್ನೂ ಅವರು ತಿಳಿಸಿದರು. ಜತೆಗೆ ಇವರು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ತಂತ್ರಜ್ಞಾನಗಳು ಮಾನವೀಯತೆಯನ್ನು ಎತ್ತಿ ಹಿಡಿಯಬೇಕೇ ಹೊರತು ಆಳುವಂತಾಗಬಾರದು. ಇವುಗಳ ಬಳಕೆಯಲ್ಲಿಯೂ ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ತಂತ್ರಜ್ಞಾನವು ಮಾನವೀಯತೆಯ ಮೇಲೆ ಅಧಿಕಾರ ಚಲಾಯಿಸುಂತಾಗಬಾರದು ಎಂದು ಮೋಹನ್ ಭಾಗವತ್ ಒತ್ತಿ ಹೇಳಿದರು.