ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಹಲ್ಗಾಮ್‌ ದಾಳಿಗೆ 4 ಮೊದಲೇ ಸ್ಥಳ ಪರಿಶೀಲಿಸಿದ್ದ ಉಗ್ರರು; ರೀಲ್ಸ್‌ನಲ್ಲಿ ಚಲನವಲನ ಸೆರೆ

Pahalgam Attack: ಏ. 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ತನಿಖೆ ಚುರುಕುಕೊಂಡಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರವಾಸಿಗರ ವಿಡಿಯೊದಲ್ಲಿ ಸೆರೆಯಾದ ಉಗ್ರರ ಚಲನವಲನದ ಜಾಡು ಹಿಡಿತು ಶೋಧ ಕಾರ್ಯ ನಡೆಸುತ್ತಿದೆ. ಈ ಮಧ್ಯೆ ಮಹಾರಅಷ್ಟ್ರದ ಪ್ರವಾಸಿಗರೊಬ್ಬರ ವಿಡಿಯೊದಲ್ಲಿ ಶಂಕಿತ ಉಗ್ರರು ಕಂಡು ಬಂದಿದ್ದಾರೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಪೆಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಏ. 22ರಂದು ದಾಳಿ ನಡೆಸಿದ ಪಾಕ್‌ ಭಯೋತ್ಪಾದಕರು 26 ಮಂದಿಯನ್ನು ಹತ್ಯೆಗೈದಿದ್ದು, ಈ ಆಘಾತದಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ (Pahalgam Attack). ಅದುವರೆಗೆ ಶಾಂತವಾಗಿದ್ದ ಕಣಿವೆ ರಾಜ್ಯ 2019ರ ಪುಲ್ವಾಮಾ ದಾಳಿಯ ನಂತರ ನಡೆದ ಈ ಭೀಕರ ದಾಳಿಗೆ ನಲುಗಿ ಹೋಗಿದೆ. ಈ ಹತ್ಯಾಕಾಂಡಕ್ಕೆ ಕಾರಣರಾದ ಉಗ್ರರನ್ನು ಪತ್ತೆ ಹಚ್ಚಿ ಅವರ ಹೆಡೆಮುರಿ ಕಟ್ಟಿಯೇ ಸಿದ್ಧ ಎಂದು ಪ್ರತಿಜ್ಞೆಗೈದಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶೋಧ ಕಾರ್ಯ ತೀವ್ರಗೊಳಿಸಿದ್ದು, ವಿವಿಧ ಮೂಲಗಳಿಂದ ಮಾಹಿತಿ ಕಲೆ ಹಾಕುತ್ತಿದೆ. ಪ್ರವಾಸಿಗರ ವಿಡಿಯೊದಲ್ಲಿ ಆಕಸ್ಮಿಕವಾಗಿ ಸೆರೆಯಾದ ಉಗ್ರರ ಚಲನವಲನ ಆಧರಿಸಿಯೂ ತನಿಖೆ ನಡೆಸಲಾಗುತ್ತಿದ್ದು, ಈಗಾಗಲೇ ಶಂಕಿತ ಉಗ್ರರ ಫೋಟೊಗಳನ್ನು ರಿಲೀಸ್‌ ಮಾಡಲಾಗಿದೆ. ಈ ಮಧ್ಯೆ ಮಹಾರಾಷ್ಟ್ರದ ಪ್ರವಾಸಿಗರೊಬ್ಬರು ಚಿತ್ರೀಕರಸಿದ ರೀಲ್ಸ್‌ನಲ್ಲಿ ಶಂಕಿತ ಉಗ್ರರು ಕಂಡುಬಂದಿದ್ದಾರೆ. ಈ ವಿವರಗಳನ್ನು ಅವರು ಎನ್‌ಐಎ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಈ ಪ್ರವಾಸಿಗ ನೀಡಿದ ವಿವರ ಉಗ್ರರ ಜಾಡು ಪತ್ತೆಹಚ್ಚಲು ನೆರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.



ಈ ಸುದ್ದಿಯನ್ನೂ ಓದಿ: Pahalgam Terror Attack: `ಅಲ್ಲಾಹು ಅಕ್ಬರ್‌' ಎಂದು ಕೂಗಿದ ಬೆನ್ನಲ್ಲೇ ಗುಂಡಿನ ದಾಳಿ.... ಜಿಪ್‌ಲೈನ್‌ ಆಪರೇಟರ್‌ NIA ವಶಕ್ಕೆ- ವಿಡಿಯೊ ಇದೆ

ಮಹಾರಾಷ್ಟ್ರದ ಈ ಪ್ರವಾಸಿ ತಮ್ಮ ಕುಟುಂಬ ಸದಸ್ಯರೊಂದಿಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. ಏ. 18ರಂದು ಬೈಸರನ್‌ ಕಣಿವೆಯಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಬೇತಾಬ್‌ ಕಣಿವೆಗೆ ಇವರು ಆಗಮಿಸಿದ್ದರು. ಈ ವೇಳೆ ಅವರು ಮಗಳ ರೀಲ್ಸ್‌ ಚಿತ್ರೀಕರಿಸಿದ್ದರು. ಈ ರೀಲ್ಸ್‌ನಲ್ಲಿ ಶಂಕಿತ ಉಗ್ರರಿಬ್ಬರು ಆ ಪ್ರದೇಶದಲ್ಲಿ ಅಡ್ಡಾಡುತ್ತಿರುವುದು ಸೆರೆಯಾಗಿದೆ. ದಾಳಿಗೆ 4 ದಿನಗಳ ಮುನ್ನವೇ ಉಗ್ರರು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ʼʼಪಹಲ್ಗಾಮ್‌ ದಾಳಿ ನಡೆಸಿದವರೆಂದು ಶಂಕಿಸಲಾದ ಇಬ್ಬರು ಉಗ್ರರು ಈ ವಿಡಿಯೊದಲ್ಲಿ ಕಂಡುಬಂದಿದ್ದಾರೆ. ಈ ನಿಟ್ಟಿನಲ್ಲಿ ವಿಡಿಯೊವನ್ನು ಇನ್ನಷ್ಟು ಪರಿಶೀಲಿಸಲಾಗುವುದುʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಇವರು ಬೇತಾಬ್‌ ಕಣಿವೆ, ಶ್ರೀನಗರ, ಗುಲ್ಮಾರ್ಗ್‌ ಮುಂತಾದೆಡೆಗೆ ತೆರಳಿ ದಾಳಿಯ 1 ದಿನದ ಹಿಂದೆಯಷ್ಟೇ ಮಹಾರಾಷ್ಟ್ರಕ್ಕೆ ಹಿಂದಿರುಗಿದ್ದರು.

ಪ್ರವಾಸಿಗರೊಬ್ಬರ ವಿಡಿಯೊದಲ್ಲಿ ದಾಳಿಯ ದೃಶ್ಯ ಸೆರೆ

ಈ ಮಧ್ಯೆ ಪಹಲ್ಗಾಮ್‌ನಲ್ಲಿ ಝಿಪ್‌ಲೈನ್‌ನಲ್ಲಿ ಸಾಗುತ್ತಿದ್ದ ಪ್ರವಾಸಿಗರೊಬ್ಬರ ವಿಡಿಯೊದಲ್ಲಿ ಗುಂಡಿನ ದಾಳಿಯ ಭೀಕರ ದೃಶ್ಯ ಸೆರೆಯಾಗಿದೆ. ಪೆಹಲ್ಗಾಮ್‌ಗೆ ಆಗಮಿಸಿದ್ದ ಪ್ರವಾಸಿ ರೋಪ್ ಕ್ರಾಸಿಂಗ್ ಮಾಡುವ ವೇಳೆ ಸೆಲ್ಫಿ ವಿಡಿಯೊ ಮಾಡಿದ್ದರು. ಇದರಲ್ಲಿ ಅವರಿಗೆ ಅರಿವಿಲ್ಲದಂತೆ ಉಗ್ರರ ಪೈಶಾಚಿಕ ಕೃತ್ಯ ಸೆರೆಯಾಗಿದೆ. ವೈರಲ್ ಆಗಿರುವ 53 ಸೆಕೆಂಡುಗಳ ವಿಡಿಯೊದಲ್ಲಿ ನೀಲಿ ಚೆಕ್ ಶರ್ಟ್, ಹೆಲ್ಮೆಟ್‌ ಧರಿಸಿದ ಪ್ರವಾಸಿಯೊಬ್ಬರು ಸೆಲ್ಫಿ ಸ್ಟಿಕ್ ಬಳಸಿ ಝಿಪ್‌ಲೈನ್‌ನಲ್ಲಿ ತೆರಳುತ್ತಿರುವುದು ಕಂಡು ಬಂದಿದೆ. ಹಿನ್ನೆಲೆಯಲ್ಲಿ ಗುಂಡಿನ ಸದನ್ನೂ ಕೇಳಬಹುದು.