ಭೋಪಾಲ್, ಮೇ 24: ಇಡೀ ದೇಶವೇ ಮರುಗುವಂತೆ ಮಾಡಿದ, ಯುವ ಜನತೆಯ ಆಕ್ರೋಶಕ್ಕೆ ಕಾರಣವಾದ ಮಾಜಿ ಮಾಡೆಲ್, ನಟಿ, ಉತ್ತರ ಪ್ರದೇಶದ ನೋಯ್ಡಾ ಮೂಲದ ತ್ವಿಶಾ ಶರ್ಮಾ ಸಾವಿನ ಪ್ರಕರಣದ (Twisha Sharma Case) ರಹಸ್ಯ ಇನ್ನೂ ಬಗೆಹರಿದಿಲ್ಲ. ಈ ಮಧ್ಯೆ ಭಾವುಕ ಕ್ಷಣವೊಂದಕ್ಕೆ ದೇಶ ಸಾಕ್ಷಿಯಾಯಿತು. ತ್ವಿಶಾ ಮೃತದೇಹ ಪತ್ತೆಯಾದ 12 ದಿನಗಳ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ ಅವರ ತಾಯಿ ಕುಸಿದು ಬಿದ್ದು, ಕಣ್ಣೀರು ಸುರಿಸುತ್ತ ಮಗಳ ಸಾವಿಗೆ ಶೀಘ್ರದಲ್ಲೇ ನ್ಯಾಯ ಸಿಗಲಿ ಎಂದು ಆಗ್ರಹಿಸಿದರು. ಈ ದೃಶ್ಯ ಅಲ್ಲಿದವರ ಹೃದಯವನ್ನು ಭಾರವಾಗಿಸಿತು.
ಈ ತಿಂಗಳ ಆರಂಭದಲ್ಲಿ ತ್ವಿಶಾ ಶರ್ಮಾ ಅವರ ಮೃತದೇಹ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ಅವರ ಹೆತ್ತವರು ನ್ಯಾಯಕ್ಕಾಗಿ ಅಂದಿನಿಂದ ಹೋರಾಡುತ್ತಲೇ ಬಂದಿದ್ದಾರೆ. ಪತಿ ಮತ್ತು ಅತ್ತೆ ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಮತ್ತೊಂದು ಬಾರಿ ಮರಣೋತ್ತರ ಪರೀಕ್ಷೆ ನಡೆಸುವ ಉದ್ದೇಶದಿಂದ ತ್ವಿಶಾ ಶರ್ಮಾ ಅವರ ಮೃತದೇಹವನ್ನು 12 ದಿನ ಸಂರಕ್ಷಿಸಿಡಲಾಗಿತ್ತು.
ತ್ವಿಶಾ ಶರ್ಮಾ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು:
ಮಧ್ಯ ಪ್ರದೇಶ ಹೈಕೋರ್ಟ್ ಸೂಚನೆ ಮೇರೆಗೆ ಭಾನುವಾರ (ಮೇ 24) ದೆಹಲಿ ಏಮ್ಸ್‌ನ ವೈದ್ಯರು 2ನೇ ಮರಣೋತ್ತರ ಪರೀಕ್ಷೆ ಮುಗಿಸಿದ ಹಿನ್ನೆಲೆಯಲ್ಲಿ ತ್ವಿಶಾ ಶರ್ಮಾ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಭೋಪಾಲ್‌ನ ಭಾದ್ಭದ ವಿಶ್ರಮ ಘಾಟ್‌ನಲ್ಲಿ ಆಯೋಜಿಸಿದ ಅಂತಿಮ ವಿಧಿ ವಿಧಾನದಲ್ಲಿ ತ್ವಿಶಾ ಶರ್ಮಾ ಮನೆಯವರು ಪಾಲ್ಗೊಂಡರು. ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಯಿತು.
ಸಾವಿಗೂ ಮುನ್ನ ತ್ವಿಶಾ ಶರ್ಮಾ ಶ್ವಾನದ ಜತೆ ಸಮಯ ಕಳೆದ ವಿಡಿಯೊ ವೈರಲ್; ತನಿಖೆಯ ದಿಕ್ಕನ್ನೇ ಬದಲಿಸುತ್ತ ಈ ದೃಶ್ಯ?
ತಂದೆ ಹೇಳಿದ್ದೇನು?
ಅಂತ್ಯ ಸಂಸ್ಕಾರದ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ತ್ವಿಶಾ ಶರ್ಮಾ ತಂದೆ ನವನಿಧಿ ಶರ್ಮಾ, ʼʼಇವತ್ತು ನಾವು ಮಗಳು, ಸಹೋದರಿ ಮತ್ತು ಅಮಾಯಕ ಜೀವಕ್ಕೆ ವಿದಾಯ ಹೇಳುತ್ತಿದ್ದೇವೆ. ಹೊಸ ಕನಸಿನೊಂದಿಗೆ ಮತ್ತೊಂದು ಹಂತದ ಜೀವನ ಆರಂಭಿಸಿದ್ದ ಮಗಳು ಶೀಘ್ರದಲ್ಲೇ ನಮ್ಮನ್ನಲಿದ್ದಾಳೆʼʼ ಎಂದು ಭಾವುಕರಾದರು. ತಮ್ಮ ಮಗಳ ಸಾವಿಗೆ ನ್ಯಾಯವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು.
ತಂದೆಯ ಮನವಿ
ಅಂತ್ಯ ಸಂಸ್ಕಾರದ ಮುನ್ನ ನವನಿಧಿ ಶರ್ಮಾ ಭೋಪಾಲ್ ಜನತೆಯಲ್ಲಿ ಮನವಿಯೊಂದನ್ನು ಮಾಡಿದರು. ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು, ಮಹಿಳೆಯರು ಮತ್ತು ಯುವ ಜನತೆ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ʼʼಇಂದು ತ್ವಿಶಾ ಪಂಚಭೂತಗಳಲ್ಲಿ ಲೀನವಾಗಿದ್ದಾಳೆ. ಇದು ಒಂದು ಕುಟುಂಬದ ನೋವಲ್ಲ. ಪ್ರತಿಯೊಬ್ಬರ ಹೃದಯವು ಮಹಿಳೆಯರ ಸುರಕ್ಷತೆಗಾಗಿ ಮಿಡಿಯುತ್ತಿದೆʼʼ ಎಂದರು.
ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ 2ನೇ ಮರಣೋತ್ತರ ಪರೀಕ್ಷೆ
ಮಧ್ಯ ಪ್ರದೇಶ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಏಮ್ಸ್‌ನ ನಾಲ್ವರು ಪರಿಣಿತರ ತಂಡ 2ನೇ ಮರಣೋತ್ತರ ಪರೀಕ್ಷೆ ನಡೆಸಿತು. ತಂಡವು ಶನಿವಾರ ರಾತ್ರಿ ಭೋಪಾಲ್‌ಗೆ ಆಗಮಿಸಿ ಭಾನುವಾರ ಬೆಳಗ್ಗೆ ಏಮ್ಸ್ ಭೋಪಾಲ್ ತಲುಪಿತು. ಕುಟುಂಬದ ತಾಂತ್ರಿಕ ತಂಡದೊಂದಿಗೆ ಬಂದ ವಕೀಲ ಅಂಕುರ್ ಪಾಂಡೆ, ತ್ವಿಶಾ ಅವರ ಸಹೋದರ ಮತ್ತು ಅತ್ತಿಗೆ ಮೃತದೇಹ ಗುರುತಿಸಿದ ನಂತರ ಪರೀಕ್ಷೆ ಪ್ರಾರಂಭವಾಯಿತು.
ಭೋಪಾಲ್‌ನಲ್ಲಿ ನಡೆದ ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ನರಿಯಾಗಿ ನಡೆಸಿಲ್ಲ ಎಂದು ಆರೋಪಿಸಿ ತ್ವಿಶಾ ಶರ್ಮಾ ಅವರ ಕುಟುಂಬವು ಮತ್ತೊಂದು ಪರೀಕ್ಷೆ ನಡೆಸುವಂತೆ ಕೋರ್ಟ್ ಮೊರೆ ಹೋಗಿತ್ತು. 33 ವರ್ಷದ ತ್ವಿಶಾ ಶರ್ಮಾ ಮೇ 12ರಂದು ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ಎಸ್ಐಟಿ ತಂಡ ರಚನೆ, ಪತಿ ಸಮರ್ಥ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಪೊಲೀಸರು ಆಕೆಯ ಪತಿ ವಕೀಲ ಸಮರ್ಥ್ ಸಿಂಗ್ ಮತ್ತು ಅತ್ತೆ ಮಾಜಿ ಜಿಲ್ಲಾ ನ್ಯಾಯಾಧೀಶ ಗಿರಿಬಾಲಾ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. 10 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್‌ನನ್ನು ಮೇ 22ರಂದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಬಂಧಿಸಲಾಯಿತು. ಭೋಪಾಲ್ ನ್ಯಾಯಾಲಯವು ಅವರನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.