ದೆಹಲಿ, ಡಿಸೆಂಬರ್ 29: ಸುಪ್ರೀಂ ಕೋರ್ಟ್ (Supreme Court) ಸೋಮವಾರ (ಡಿಸೆಂಬರ್ 29) ಮಹತ್ವದ ಆದೇಶ ಹೊರಡಿಸಿದ್ದು, ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ನ (Kuldeep Singh Sengar) ಜಾಮೀನಿಗೆ ತಡೆ ಒಡ್ಡಿದೆ. ಈ ಆದೇಶವನ್ನು ಸಂತ್ರಸ್ತೆ ಸ್ವಾಗತಿಸಿದ್ದು, ಕುಲದೀಪ್ ಸಿಂಗ್ ಸೆಂಗಾರ್‌ಗೆ ಮರಣದಂಡನೆ ವಿಧಿಸುವವರೆಗೆ ವಿರಮಿಸುವುದಿಲ್ಲ ಎಂದಿದ್ದಾರೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ ಸೆಂಗಾರ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೈಗೆತ್ತಿಕೊಂಡಿತು. ಇಂತಹ ಪ್ರಕರಣಗಳಲ್ಲಿ ಪೋಕ್ಸೋ ಕಾಯಿದೆಯ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಸಿಬಿಐ ವಾದಿಸಿದ್ದು, ಅಂತಿಮವಾಗಿ ಸುಪ್ರೀಂ ಕೋರ್ಟ್ ಜಾಮೀನು ಆದೇಶವನ್ನು ರದ್ದುಗೊಳಿಸಿದೆ.
ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ ಆದೇಶದ ಆಧಾರದಲ್ಲಿ ಸೆಂಗಾರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂತಲೂ ಆದೇಶಿಸಿದೆ.
ಸಂತ್ರಸ್ತೆಯ ಮಾತು:
ಸಂತ್ರಸ್ತೆ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿದ ಸಂತ್ರಸ್ತೆ, ''ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಸಂತಸವಾಗಿದೆ. ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಕ್ಕಿದೆ. ಮೊದಲಿನಿಂದಲೂ ನಾನು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಲೇ ಬಂದಿದ್ದೇನೆ. ನಾನು ಯಾವುದೇ ಕೋರ್ಟ್ ಅನ್ನು ದೂರುವುದಿಲ್ಲ. ಎಲ್ಲ ನ್ಯಾಯಾಲಯದಲ್ಲೂ ವಿಶ್ವಾಸ ಇರಿಸಿದ್ದೇನೆ. ಆದರೆ ನನಗೆ ನ್ಯಾಯ ಒದಗಿಸಿದ್ದು ಸುಪ್ರೀಂ ಕೋರ್ಟ್. ಇದು ಮುಂದುವರಿಯಲಿದೆ ಎನ್ನುವ ನಂಬಿಕೆ ಇದೆʼʼ ಎಂದು ಹೇಳಿದರು.
ʼʼಸೆಂಗಾರ್‌ನನ್ನು ನೇಣಿಗೆ ಹಾಕುವವವರೆಗೆ ನಾನು ವಿರಮಿಸುವುದಿಲ್ಲ. ನಾನು ಹೋರಾಡುತ್ತಲೇ ಇರುತ್ತೇನೆ. ಆತನನ್ನು ನೇಣುಗಂಬಕ್ಕೆ ಏರಿಸಿದ ದಿನ ನನಗೆ ಮತ್ತು ನನ್ನ ಕುಟುಂಬಕ್ಕೆ ನ್ಯಾಯ ಸಿಗುತ್ತದೆ. ಪ್ರತಿದಿನ ನಮಗೆ ಬೆದರಿಕೆ ಬರುತ್ತಲೇ ಇದೆʼʼ ಎಂದು ತಿಳಿಸಿದರು.
ಉನ್ನಾವ್ ಅತ್ಯಾಚಾರ ಪ್ರಕರಣ; ಕುಲದೀಪ್ ಸಿಂಗ್ ಸೆಂಗಾರ್ ಜಾಮೀನು ಆದೇಶಕ್ಕೆ ಸುಪ್ರೀಂ ತಡೆ
ಕುಟುಂಬಸ್ಥರಿಂದಲೂ ಸ್ವಾಗತ
ಸದ್ಯ ಸಂತ್ರಸ್ತೆಯ ಕುಟುಂಬದವರೂ ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ವಾಗತಿಸಿದ್ದಾರೆ. ಜತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರುವುದಾಗಿ ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರಿ ಮಾತನಾಡಿ ತಮಗೆ ಆರೋಪಿ ಸದ್ಯಕ್ಕೆ ಬಿಡುಗಡೆಯಾಗುವುದಿಲ್ಲ ಎನ್ನುವ ವಿಶ್ವಾಸವಿತ್ತು ಎಂದು ಹೇಳಿದರು.
ಸೆಂಗಾರ್‌ನನ್ನು ರಾಕ್ಷಸ ಎಂದು ಕರೆದ ಅವರು, ಆತ ತನ್ನ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದು ಮಾತ್ರವಲ್ಲ ಇಡೀ ಕುಟುಂಬವನ್ನೇ ನಾಶಪಡಿಸಿದ್ದಾನೆ. ಸದ್ಯ ಸುಪ್ರೀಂ ಕೋರ್ಟ್‌ನ ತೀರ್ಪು ತೃಪ್ತಿ ತಂದಿರುವುದಾಗಿ ವಿವರಿಸಿದರು. ಜತೆಗೆ ಸಂತ್ರಸ್ತೆಯ ತಾಯಿ ಸುಪ್ರಿಂ ಕೋರ್ಟ್‌ಗೆ ಧನ್ಯವಾದ ತಿಳಿಸಿದರು. ತನ್ನ ಪತಿಯ ಸಾವಿಗೆ ಕಾರಣವಾದ ಸೆಂಗಾರ್‌ಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿದರು. 2017ರ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಏನಿದು ಪ್ರಕರಣ?
ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ 2017ರ ಜೂನ್ 20ರಂದು ಉನ್ನಾವೋನ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ. ಅತ್ಯಾಚಾರದ ನಂತರ ಆಕೆಯನ್ನು 60,000 ರುಪಾಯಿಗೆ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ಆಕೆಯನ್ನು ಸಾಗಣೆ ಮಾಡುತ್ತಿದ್ದ ವೇಳೆ ಮಾಖಿ ಪೊಲೀಸ್ ಠಾಣೆಯ ಪೊಲೀಸರು ರಕ್ಷಿಸಿದ್ದರು.