ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನರೇಂದ್ರ ಮೋದಿಗೆ ಕರೆ ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌; ಭಾರತದ ಮೇಲಿನ ಸುಂಕ ಶೇಕಡಾ 18ಕ್ಕೆ ಇಳಿಕೆ

ಭಾರತ ಮತ್ತು ಅಮೆರಿಕ ಮಧ್ಯೆ ಸುಂಕ ಸಮರ ನಡೆಯುತ್ತಿರುವ ಮಧ್ಯೆ ಅಪರೂಪದ ಪ್ರಸಂಗವೊಂದು ಕಂಡು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದು, ಸುಂಕವನ್ನು ಶೇಕಡಾ 18ಕ್ಕೆ ಇಳಿಸಿರುವುದಾಗಿ ಪ್ರಕಟಿಸಿದ್ದಾರೆ.

ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ದೆಹಲಿ, ಫೆ. 2: ಭಾರತ ಮತ್ತು ಅಮೆರಿಕ ಮಧ್ಯೆ ಸುಂಕ ಸಮರ ನಡೆಯುತ್ತಿರುವ ಮಧ್ಯೆ ಅಪರೂಪದ ಪ್ರಸಂಗವೊಂದು ಕಂಡು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಹೇಳಿದ್ದಾರೆ. ಹೊಸದಾಗಿ ನೇಮಕಗೊಂಡ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಇಬ್ಬರು ನಾಯಕರು ಯಾವ ವಿಚಾರದ ಬಗ್ಗೆ ಮಾತುಕತೆ ನಡೆಸಿದರು ಎನ್ನುವ ವಿವರ ಬಹಿರಂಗಪಡಿಸಿಲ್ಲ. ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಮಧ್ಯೆ ಈ ಬೆಳವಣಿಗೆ ಸಂಭವಿಸಿದ್ದು, ಜಗತ್ತೇ ಕುತೂಹಲದಿಂದ ನೋಡುತ್ತಿದೆ. ಈ ಮಧ್ಯೆ ಟ್ರಂಪ್‌ ಭಾರತ ಮತ್ತು ಅಮೆರಿಕ ಮಧ್ಯೆ ವ್ಯಾಪಾರ ಒಪ್ಪಂದ ನಡೆದಿದೆ ಎಂದು ಘೋಷಿಸಿದ್ದಾರೆ. ಇದರಿಂದಾಗಿ ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕವನನು ಶೇಕಡಾ 25ರಿಂದ ಶೇಕಡಾ 18ಕ್ಕೆ ಇಳಿಸಲಾಗುತ್ತಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಮತ್ತು 500 ಬಿಲಿಯನ್ ಡಾಲರ್‌ ಮೌಲ್ಯದ ಅಮೆರಿಕದ ಇಂಧನ ಮತ್ತು ತಂತ್ರಜ್ಞಾನವನ್ನು ಖರೀದಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸೆರ್ಗಿಯೋ ಗೋರ್ ಹೇಳಿದ್ದೇನು?

ಈ ಮೊದಲು ಸೆರ್ಗಿಯೋ ಗೋರ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ʼʼಅಮರಿಕ ಅಧ್ಯಕ್ಷ ಟ್ರಂಪ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಹೆಚ್ಚಿನ ವಿವರಗಳಿಗೆ ನಿರೀಕ್ಷಿಸಿ...ʼʼ ಎಂದು ಅವರು ಬರೆದುಕೊಂಡಿದ್ದರು. ಭಾರತ ಸರ್ಕಾರ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸೆರ್ಗಿಯೋ ಗೋರ್ ಅವರ ಎಕ್ಸ್‌ ಪೋಸ್ಟ್‌:



ಅಮೆರಿಕ ವಿಧಿಸಿದ ತೆರಿಗೆಯು ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಸ್ಥಗಿತಗೊಳಿಸಿತು. ಆದಾಗ್ಯೂ, ದ್ವಿಪಕ್ಷೀಯ ಒಪ್ಪಂದವನ್ನು ಮುಕ್ತಾಯಗೊಳಿಸುವ ಪ್ರಯತ್ನದ ಭಾಗವಾಗಿ ಎರಡೂ ದೇಶಗಳ ನಿಯೋಗಗಳು ನಿಯಮಿತವಾಗಿ ಸಭೆಗಳನ್ನು ನಡೆಸುತ್ತಲೇ ಇದ್ದವು. ಮೋದಿ ಮತ್ತು ಟ್ರಂಪ್‌ ಕೊನೆಯ ಬಾರಿ 2025ರ ಡಿಸೆಂಬರ್‌ನಲ್ಲಿ ದೂರವಾಣಿ ಸಂಭಾಷಣೆ ನಡೆದಿದ್ದರು.

ಕಳೆದ ವರ್ಷ ನಡೆದ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಇಬ್ಬರು ನಾಯಕರು ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದ್ದರು ಮತ್ತು ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದರು.

ವೆನೆಜುವೆಲಾ ಜತೆ ಸಂಬಂಧ ಸದೃಢಗೊಳಿಸಲು ಹಂಗಾಮಿ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಭಾರತವು ವೆನೆಜುವೆಲಾದ ತೈಲವನ್ನು ಖರೀದಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ ಕೆಲವೇ ದಿನಗಳ ನಂತರ ಕರೆ ಬಂದಿದೆ. "ಭಾರತವು ಇರಾನ್‌ನಿಂದ ತೈಲ ಖರೀದಿಸುವ ಬದಲು ವೆನೆಜುವೆಲಾದ ಖರೀದಿಸಲಿದೆ. ನಾವು ಈಗಾಗಲೇ ಒಪ್ಪಂದವನ್ನು ಮಾಡಿಕೊಂಡಿದ್ದೇವೆʼʼ ಎಂದು ಹೇಳಿದ್ದರು.

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ 3 ದಿನಗಳ ಅಮೆರಿಕ ಪ್ರವಾಸ ಆರಂಭಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಯ ಕುರಿತು ಸಭೆಯಲ್ಲಿ ಭಾಗವಹಿಸಲು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

Ramesh Ballamoole

View all posts by this author