ಚೆನ್ನೈ, ಮೇ 25: ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಆರಂಭದಲ್ಲೇ ಮುಜುಗರದ ಸನ್ನಿವೇಶ ಎದುರಾಗಿದೆ. ಕೊಯಮತ್ತೂರಿನಲ್ಲಿ ನಡೆದ 10 ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಗಳಿಬ್ಬರು ನಗುತ್ತಿರುವ ವಿಡಿಯೊ ವೈರಲ್ (Viral Video) ಆಗಿದ್ದು, ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಮಹಿಳಾ ಪೊಲೀಸ್ ಅಧಿಕಾರಿ ಕೈಯ ನೈಲ್ ಪಾಲಿಷ್ ನೋಡಿ ಜೋರಾಗಿ ನಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಇದಕ್ಕೂ ಮೊದಲು ತಮಿಳುನಾಡು ಸಚಿವೆ ಎಸ್. ಕೀರ್ತನಾ ಪ್ರಕರಣದ ಬಗ್ಗೆ ಮಾತನಾಡುವಾಗ ನಕ್ಕಿದ್ದು ಭಾರಿ ವಿವಾದವಾಗಿತ್ತು. ಅದರ ಕಿಚ್ಚು ಆರುವ ಮುನ್ನವೇ ಮತ್ತೊಂದು ಎಡವಟ್ಟು ನಡೆದಿದೆ.
10 ವರ್ಷದ ಬಾಲಕಿ ಸಾಮಗ್ರಿ ಖರೀದಿಸಲು ಅಂಗಡಿಗೆ ತೆರಳಿದಾಗ ಇಬ್ಬರು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಂದಿರುವ ಘಟನೆ ಇತ್ತೀಚೆಗೆ ಕೊಯಮತ್ತೂರಿನ ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ನಡೆದಿತ್ತು. ಪ್ರಕರಣದ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ.
ಪತ್ರಿಕಾಗೋಷ್ಠಿ ವೇಳೆ ನಕ್ಕ ಪೊಲೀಸ್ ಅಧಿಕಾರಿಗಳು:
ಏನಿದು ವಿವಾದ?
ಈ ಪ್ರಕರಣದ ಬಗ್ಗೆ ವಿವರ ನೀಡಲು ಪೊಲೀಸರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಪ್ರಕರಣದ ಗಂಭೀರತೆ ಮರೆತು ಲಘುವಾಗಿ ವರ್ತಿಸಿದ್ದಾರೆ. ಪಶ್ಚಿಮ ವಲಯದ ಪೊಲೀಸ್ ಮಹಾನಿರ್ದೇಶಕಿ ಆರ್.ವಿ. ರಮ್ಯಾ ಭಾರತಿ, ಕೊಯಮತ್ತೂರು ರೇಂಜ್ ಡಿಐಜಿ ಪಿ. ಸಾಮಿನಾಥನ್ ಮತ್ತು ಕೊಯಮತ್ತೂರು ಎಸ್‌ಪಿ ಅಲ್ಲತಿಪಲ್ಲಿ ಪವನ್ ಕುಮಾರ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಈ ವೇಳೆ ರಮ್ಯಾ ಭಾರತಿ ಯಾವುದೋ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಬಂದವರ ಹಾಗೆ ನಗುತ್ತ ಕಾಲ ಕಳೆದಿದ್ದಾರೆ. ಅಲ್ಲದೇ ಪಕ್ಕದಲ್ಲಿನ ಪೊಲೀಸ್ ಅಧಿಕಾರಿ ಕೂಡ ಇದಕ್ಕೆ ಸಾಥ್ ಕೊಟ್ಟಿದ್ದಾರೆ.
10 ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ; ಸಿಎಂ ವಿಜಯ್ ಹೇಳಿದ್ದೇನು?
ಭುಗಿಲೆದ್ದ ಆಕ್ರೋಶ
ಸದ್ಯ ಈ ವಿಡಿಯೊ ನೋಡಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸನ್ನೀವೇಶದ ಗಂಭೀರತೆ ಅರಿಯದ ಇಂತಹ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಆಗ್ರಹಿಸಿದ್ದಾರೆ. ʼʼಅನಗತ್ಯವಾಗಿ ಅವರು ಯಾಕೆ ಅಷ್ಟೊಂದು ನಗುತ್ತಿದ್ದಾರೆ? ಗಂಭೀರ ಪರಿಸ್ಥಿತಿಯಲ್ಲಿ ಯಾವ ರೀತಿ ವರ್ತಿಸಬೇಕೆಂದು ಅವರಿಗೆ ತಿಳಿದಿಲ್ಲʼʼ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ʼʼ10 ವರ್ಷದ ಬಾಲಕಿಗೆ ಕಿರುಕುಳ ಕೊಟ್ಟು ಕೊಲೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಗಂಭೀರವಾಗಿರುವುದು ಬಿಟ್ಟು ಪತ್ರಿಕಾಗೋಷ್ಠಿಯಲ್ಲಿ ಜೋಕ್ ಮಾಡುತ್ತ, ನಗುತ್ತ ಕಾಲ ಕಳೆಯುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.
ʼʼರಮ್ಯಾ ಭಾರತಿ ಈ ಹುದ್ದೆಯಲ್ಲಿರಲು ಅರ್ಹರಲ್ಲʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ʼʼನಾಗರಿಕ ಸಮಾಜವಾಗಿ ನಾವು ಯಾವ ರೀತಿ ವರ್ತಿಸಬೇಕು ಎನ್ನುವುದನ್ನೇ ಮರೆತಿದ್ದೇವೆʼʼ ಎಂದು ಮಗದೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಈ ರೀತಿಯ ವರ್ತನೆಯಿಂದ ರಾಜ್ಯವೇ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.
ಮಸೀದಿಯೊಳಗೆ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮೌಲ್ವಿಗೆ ಜೀವಾವಧಿ ಶಿಕ್ಷೆ
ವಿವಾದದ ಅಲೆ ಎಬ್ಬಿಸಿದ್ದ ಕೀರ್ತನಾ
ಇದಕ್ಕೂ ಮೊದಲು ಸಚಿವೆ ಕೀರ್ತನಾ ಇದೇ ವಿಚಾರದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದರು. ಈ ಬಗ್ಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದಾಗ ಕೀರ್ತನಾ ನಕ್ಕಿದ್ದರು ಎಂದು ಬಿಜೆಪಿ ನಾಯಕರು ದೂರಿದ್ದಾರೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ಸಭೆ ಮುಗಿದ ಬಳಿಕ ಪತ್ರಕರ್ತರು ಈ ಬಗ್ಗೆ ಕೀರ್ತನಾ ಬಳಿ ಪ್ರಶ್ನಿಸಿದ್ದರು. ಆಗ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಆಡಳಿತಕ್ಕ ಎಸಂಬಂಧಪಟ್ಟ ಪ್ರಶ್ನೆಗಳನ್ನು ಮಾತ್ರ ಕೇಳುವಂತೆ ಸೂಚಿಸಿದ್ದರು. ಈ ವೇಳೆ ಅವರು ನಗುತ್ತಿದ್ದರು ಎಂದು ಬಿಜೆಪಿ ಆರೋಪಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.