ಚೆನ್ನೈ: ತಮಿಳುನಾಡಿನ ಕರೂರು ಕಾಲ್ತುಳಿತ (Karur stampede) ಪ್ರಕರಣದ ಒಂದು ತಿಂಗಳ ಬಳಿಕ ಮೃತರ ಕುಟುಂಬಸ್ಥರನ್ನು ಸುಮಾರು 400 ಕಿ.ಮೀ. ದೂರದ ಮಹಾಬಲಿಪುರಂ (Mahabalipuram)ನ ಖಾಸಗಿ ರೆಸಾರ್ಟ್(Rresort)ಗೆ ಕರೆಸಿಕೊಂಡು ತಮಿಳಗ ವೆಟ್ರಿ ಕಳಗಂ (TVK) ನಾಯಕ ವಿಜಯ್ (Vijay) ಭೇಟಿಯಾಗಿದ್ದು, ಇದೀಗ ವಿವಾದ ಸೃಷ್ಟಿಸಿದೆ. ವಿಜಯ್ ಅವರ ಈ ಕ್ರಮವು 800 ಕಿ.ಮೀ.ಯ ಕಷ್ಟದ ಯಾತ್ರೆ ಎಂದು ವಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ.
ಸೋಮವಾರ ಐದು ಬಸ್‌ಗಳಲ್ಲಿ 37 ಮೃತರ ಕುಟುಂಬಸ್ಥರನ್ನು ಕರೂರಿನಿಂದ ಮಹಾಬಲಿಪುರಂಗೆ ಕರೆದೊಯ್ಯಲಾಯಿತು. ಇದು ರಾಜ್ಯ ರಾಜಧಾನಿಯಿಂದ 50 ಕಿ.ಮೀ. ದೂರದಲ್ಲಿದೆ. ಟಿವಿಕೆ ಪಕ್ಷವು ಐಷಾರಾಮಿ ರೆಸಾರ್ಟ್‌ನಲ್ಲಿ ಸುಮಾರು 50 ಕೊಠಡಿಗಳನ್ನು ಬುಕ್ ಮಾಡಿ, ಸಂತ್ರಸ್ತರ ಕುಟುಂಬಸ್ಥರೊಂದಿಗೆ ಬಾಗಿಲು ಮುಚ್ಚಿಕೊಂಡು ಸುಮಾರು ಎಂಟು ಗಂಟೆಗಳ ಮಾತುಕತೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಈ ಸುದ್ದಿಯನ್ನು ಓದಿ: Viral Video: ಗಡದ್ದಾಗಿ ತಿಂದು ಹೋಟೆಲ್ ಬಿಲ್ ಪಾವತಿಸದೆ ಪರಾರಿಯಾದ ಪ್ರವಾಸಿಗರು; ಬೆನ್ನಟ್ಟಿದ ಸಿಬ್ಬಂದಿ
ಗೌಪ್ಯತೆಯನ್ನು ಕಾಪಾಡಲು ಟಿವಿಕೆ ಕಾರ್ಯಕರ್ತರಿಗೆ ಸಹ ಭೇಟಿಯ ಸ್ಥಳಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ವಿಜಯ್ ಎಲ್ಲ ಸಂತ್ರಸ್ತರ ಕುಟುಂಬಸ್ಥರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದು, ಕೆಲವರೊಂದಿಗೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಸಂತ್ರಸ್ತರನ್ನು ಇಷ್ಟು ದೂರಕ್ಕೆ ಕರೆತಂದಿದ್ದಕ್ಕಾಗಿ ವಿಜಯ್ ಕ್ಷಮೆಯಾಚಿಸಿದ್ದು, ಕರೂರ್‌ಗೆ ಭೇಟಿ ನೀಡಲು ಅನುಮತಿ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆರ್ಥಿಕ ಸಹಾಯ ಮತ್ತು ನೆರವಿನ ಭರವಸೆ
ಸಂತ್ರಸ್ತ ಕುಟುಂಸ್ಥರೊಂದಿಗೆ ನಡೆದ ಪ್ರತ್ಯೇಕ ಮಾತುಕತೆಯಲ್ಲಿ ವಿಜಯ್, “ಈ ದುರಂತಕ್ಕೆ ನಾನು ಕ್ಷಮೆಯಾಚಿಸುತ್ತೇನೆ...ಎಷ್ಟೇ ಪರಿಹಾರವೂ ನೀಡಿದರೂ ನಿಮ್ಮ ಪ್ರೀತಿಪಾತ್ರರರನ್ನು ಹಿಂದಿರುಗಿಸಲು ಸಾಧ್ಯವಿಲ್ಲ” ಎಂದು ಭಾವನಾತ್ಮಕವಾಗಿ ಹೇಳಿದರು. ಅಲ್ಲದೇ ಆರ್ಥಿಕ ನೆರವು, ಮಕ್ಕಳಿಗೆ ಸಂಪೂರ್ಣ ಶಿಕ್ಷಣ, ಸ್ವಯಂ ಉದ್ಯೋಗಕ್ಕೆ ಅವಕಾಶ ಮತ್ತು ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ವಿಜಯ್ ಕ್ರಮಕ್ಕೆ ಟೀಕೆಗಳ ಸುರಿಮಳೆ
ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಕ್ರಮವನ್ನು ಅನೇಕರು ಟೀಕಿಸಿದ್ದಾರೆ. “ದುರಂತವನ್ನು ಪ್ರಚಾರದ ಕಾರ್ಯಕ್ರಮವನ್ನಾಗಿ ಮಾಡಿದ್ದಾರೆ! ಸಂತ್ರಸ್ತರ ಮನೆಗೆ ಹೋಗಿ ಸಂತಾಪ ಸೂಚಿಸುವ ಬದಲು, ಅವರನ್ನೇ ಹೊಟೇಲ್‌ಗೆ ಕರೆಸಿ ಸಂತಾಪ ವ್ಯಕ್ತಪಡಿಸುವುದು ಕರುಣೆ ಅಲ್ಲ, ಅಹಂಕಾರ. ತಮಿಳುನಾಡು ಮಾಧ್ಯಮಗಳು ಇದನ್ನು ದೊಡ್ಡದಾಗಿ ತೋರಿಸುತ್ತಿರುವುದು ಲಜ್ಜಾಸ್ಪದ” ಎಂದು ಎಕ್ಸ್‌ನಲ್ಲಿ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎನ್.ತ್ಯಾಗರಾಜನ್ ಟೀಕಿಸಿದ್ದಾರೆ.
ಟಿವಿಕೆ ಪಕ್ಷ ಹೇಳೋದೇ ಬೇರೆ... "ಕರೂರಿನಲ್ಲಿ ಪ್ರತಿಭಟನೆ, ಮಾಧ್ಯಮಗಳ ಗದ್ದಲ ಉಂಟಾಗುವ ಸಾಧ್ಯತೆ ಇತ್ತು. ಸಂತ್ರಸ್ತರೊಂದಿಗೆ ಶಾಂತ ವಾತಾವರಣ ಮತ್ತು ಖಾಸಗಿಯಾಗಿ ಮಾತನಾಡಬೇಕೆಂದು ಮಹಾಬಲಿಪುರಂದ ಖಾಸಗಿ ರೆಸಾರ್ಟ್‌ನಲ್ಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿತ್ತು" ಎಂದು ಸಮರ್ಥಿಸಿಕೊಂಡಿವೆ.
ಸೆಪ್ಟೆಂಬರ್ 27ರಂದು ವಿಜಯ್ ಅವರ ಟಿವಿಕೆ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನ ಪ್ರಾಣ ಕಳೆದುಕೊಂಡಿದ್ದರು ಮತ್ತು 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.