ಚೆನ್ನೈ, ಅ. 3: ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ನೇತೃತ್ವದ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇಲಾಖೆಯ ಆಂತರಿಕ ವಿಜಿಲೆನ್ಸ್ ತನಿಖೆಯಲ್ಲಿ ಅಕ್ರಮಗಳು ಸಾಬೀತಾದ ಹಿನ್ನೆಲೆಯಲ್ಲಿ, ಗೂಗಲ್ ಪೇ ಮುಖಾಂತರ ಲಂಚ ಪಡೆದ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ಐದು ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯಿಂದ ಸೇವೆಯಿಂದ ವಜಾಗೊಳಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಈ ದಿಢೀರ್ ಮತ್ತು ದಿಟ್ಟ ನಿರ್ಧಾರದಿಂದಾಗಿ ಇಡೀ ಪೊಲೀಸ್ ಇಲಾಖೆಯಲ್ಲಿ ಭಾರಿ ಸಂಚಲನ ಉಂಟಾಗಿದೆ.
ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ನೋಟುಗಳ ಬದಲು ಕ್ಯುಆರ್ ಕೋಡ್ ತೋರಿಸಿ ಜಿಪೇ, ಫೋನ್ ಪೇ ಮೂಲಕ ಲಂಚ ಪಡೆಯುವ ಹೊಸ ಮಾದರಿಯ ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರುಗಳು ಕೇಳಿಬಂದಿದ್ದವು. ಸಾರ್ವಜನಿಕರು ಆಂತರಿಕ ವಿಜಿಲೆನ್ಸ್ ಸಂಖ್ಯೆಗಳಿಗೆ ನೀಡಿದ ಆಡಿಯೊ, ವಿಡಿಯೊ ಹಾಗೂ ಜಿಪೇ ಟ್ರಾನ್ಸ್‌ಫರ್ ಸಾಕ್ಷ್ಯಗಳನ್ನು ಆಧರಿಸಿ ವಿಜಿಲೆನ್ಸ್ ತಂಡ ಕ್ಷಿಪ್ರ ತನಿಖೆ ನಡೆಸಿತ್ತು. ಡಿಜಿಟಲ್ ಸಾಕ್ಷ್ಯಗಳು ಸಿಕ್ಕಿದ್ದರಿಂದ ಆರೋಪಿ ಪೋಲಿಸರಿಗೆ ಯಾವುದೇ ರೀತಿಯಲ್ಲಿ ತಪ್ಪಿಸಿಕೊಳ್ಳಲು ದಾರಿಯಿರಲಿಲ್ಲ.
ಸಿಎಂ ವಿಜಯ್ ಭೇಟಿ ಮಾಡಿದ ನಟ ಕಮಲ್ ಹಾಸನ್; ʻದಳಪತಿʼ ಎದುರು ʻಉಳಗನಾಯಗನ್ʼ ಇಟ್ಟ ಡಿಮ್ಯಾಂಡ್‌ಗಳೇನು?
ಜಿಪೇ ಮೂಲಕ ಲಂಚ ಸ್ವೀಕಾರ
ಇಲಾಖಾ ತನಿಖೆಯಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಈ ಶಿಸ್ತು ಕ್ರಮಗಳನ್ನು ಜರುಗಿಸಲಾಗಿದೆ. ತಿರುನೆಲ್ವೇಲಿ ನಗರದ ಮೇಲಪಾಳಯಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೊರ್ಣ ರಾಜ್ ನಿಯಮಿತ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸೂಕ್ತ ದಾಖಲೆಗಳಿಲ್ಲದ ಬೈಕ್ ಸವಾರನಿಗೆ ಚಲನ್ ನೀಡಿ ದಂಡ ಹಾಕುವ ಬದಲು, 1,000 ರೂಪಾಯಿ ಲಂಚಕ್ಕಾಗಿ ತಮ್ಮ ಗೂಗಲ್ ಪೇ ಸಂಖ್ಯೆ ನೀಡಿದ್ದರು. ಈ ಕುರಿತು ದೂರು ಉನ್ನತಾಧಿಕಾರಿಗಳ ಕೈಸೇರುತ್ತಿದ್ದಂತೆ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.
ಚೆನ್ನೈಯ ನಾರ್ತ್ ಬೀಚ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವರಾಜ್ ಮತ್ತು ಕಾನ್ಸ್‌ಟೇಬಲ್ ವಿವೇಕ್ ಕಳುವಾಗಿದ್ದ ಬೈಕ್ ಒಂದನ್ನು ಪತ್ತೆಹಚ್ಚಿದ ನಂತರ, ಅದನ್ನು ಮಾಲಕನಿಗೆ ಹಿಂತಿರುಗಿಸಲು ಗೂಗಲ್ ಪೇ ಮೂಲಕ 10,000 ರೂಪಾಯಿ ಲಂಚ ಪಡೆದಿದ್ದರು. ಆಂತರಿಕ ವಿಜಿಲೆನ್ಸ್ ತನಿಖೆಯಲ್ಲಿ ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅತ್ಯಂತ ಕಠಿಣ ಕ್ರಮ ಜರುಗಿದ್ದು ಪುಳಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಾರಿಶ್ವರನ್ ವಿರುದ್ಧ. 2024ರಲ್ಲಿ ಅಣ್ಣಾ ನಗರ ಠಾಣೆಯಲ್ಲಿದ್ದಾಗ ಸಾರ್ವಜನಿಕರಿಂದ ನಿರಂತರವಾಗಿ ಲಂಚ ಬೇಡಿಕೆ ಇಟ್ಟು ಸ್ವೀಕರಿಸಿದ್ದ ಆರೋಪ ಇವರ ಮೇಲಿತ್ತು. ಸುದೀರ್ಘ ಇಲಾಖಾ ತನಿಖೆಯ ನಂತರ ಆರೋಪಗಳು ಸಂಪೂರ್ಣ ಸಾಬೀತಾದ ಕಾರಣ ಅವರನ್ನು ನೇರವಾಗಿ ಸೇವೆಯಿಂದಲೇ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ವಿಜಯ್ ಪ್ರಧಾನಿ ಅಭ್ಯರ್ಥಿ ಎಂದ ಟಿವಿಕೆ; ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯುವ ಬಗ್ಗೆ ಕಾಂಗ್ರೆಸ್ ಎಚ್ಚರಿಕೆ
ಭ್ರಷ್ಟಾಚಾರಕ್ಕೆ ಜಿರೋ ಟಾಲರೆನ್ಸ್ ಎಚ್ಚರಿಕೆ
ತಮಿಳುನಾಡು ಪೊಲೀಸ್ ಪಡೆಯಲ್ಲಿನ ಸುದೀರ್ಘ ಭ್ರಷ್ಟಾಚಾರದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಜಿರೋ ಟಾಲರೆನ್ಸ್ ನೀತಿಯನ್ನು ಅನುಸರಿಸುತ್ತಿದೆ. ಸುದೀರ್ಘ ಅವಧಿಯಿಂದ ಅಮಾನತಿನಲ್ಲಿರುವ ಅಥವಾ ವಿಜಿಲೆನ್ಸ್ ತನಿಖೆ ಎದುರಿಸುತ್ತಿರುವ ಅಧಿಕಾರಿಗಳ ಪ್ರಕರಣಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ತಪ್ಪಿತಸ್ಥರೆಂದು ಕಂಡುಬಂದರೆ ಮುಲಾಜಿಲ್ಲದೆ ಸೇವೆಯಿಂದಲೇ ತೆಗೆದುಹಾಕಲು ಡಿಜಿಪಿ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. "ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ಲಂಚ ಪಡೆದರೆ ಅದು ಎಷ್ಟೇ ಸಣ್ಣ ಮೊತ್ತವಾಗಿದ್ದರೂ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ" ಎಂಬ ಸ್ಪಷ್ಟ ಎಚ್ಚರಿಕೆಯನ್ನು ಸಿಎಂ ವಿಜಯ್ ಸರ್ಕಾರ ರವಾನಿಸಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.