ಬೆಂಗಳೂರು: ಬ್ಯಾಂಕ್‌ಗಳಿಂದ ತನ್ನ ಸಾಲ- ಮರುಪಾವತಿ - ಬಡ್ಡಿ ಇತ್ಯಾದಿಗಳ ಲೆಕ್ಕ ಕೋರಿ ಕರ್ನಾಟಕ ಹೈಕೋರ್ಟ್‌ಗೆ (Karnataka high court) ಉದ್ಯಮಿ ವಿಜಯ ಮಲ್ಯ (Vijay Mallya) ರಿಟ್ ಅರ್ಜಿ (Writ petition) ಸಲ್ಲಿಸಿದ್ದಾರೆ. ಇಂದು ಹೈಕೋರ್ಟ್‌ನಲ್ಲಿ ವಿಜಯ್ ಮಲ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಯಿತು. ವಿಜಯ್ ಮಲ್ಯ ಅವರು ಬ್ಯಾಂಕ್‌ಗಳ ಸಾಲ ಸಂಪೂರ್ಣವಾಗಿ ತೀರಿಸಿದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ವಿಜಯ್ ಮಲ್ಯ ಪರ ವಕೀಲರು ವಾದಿಸಿದರು.
ವಿಜಯ್ ಮಲ್ಯ ಪರವಾಗಿ ಹಿರಿಯ ವಕೀಲ ಸಜನ್ ಪೂವಯ್ಯ ವಾದಿಸಿದರು. ವಿಜಯ್ ಮಲ್ಯ ಅವರು 6,200 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿತ್ತು. 14,000 ಕೋಟಿ ಹಣವನ್ನು ಅವರಿಂದ ವಸೂಲಿ ಮಾಡಿದ್ದಾರೆ. ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ ಸಹ 10200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣವಾಗಿ ಸಾಲ ತೀರಿದರೂ ಕೂಡ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದರು.
ಬ್ಯಾಂಕುಗಳ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು ವಾದ ಮಂಡಿಸಿದರು. ವಿಜಯ್ ಮಲ್ಯ ದೇಶ ತೊರೆದು ದೇಶ ಭ್ರಷ್ಟರಾಗಿದ್ದಾರೆ. ವಿಜಯ್ ಮಲ್ಯ ಮುಗ್ಧರಾಗಿದ್ದರೆ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ದೇಶ ಬಿಟ್ಟು ಪರಾರಿ ಆಗಿದ್ದಾರೆ. ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆ ಎಂದು ವಾದಿಸಿದರು.
ಇದನ್ನೂ ಓದಿ: Lalit Modi-Vijay Mallya: ಲಂಡನ್‌ನಲ್ಲಿ ಅದ್ದೂರಿ ಪಾರ್ಟಿ; ಒಟ್ಟಿಗೆ ಹಾಡು ಹಾಡಿದ ವಿಜಯ್ ಮಲ್ಯ-ಲಲಿತ್ ಮೋದಿ; ವಿಡಿಯೊ ನೋಡಿ
ಈ ವೇಳೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಬ್ಯಾಂಕುಗಳ ಪರ ವಕೀಲರಿಗೆ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ಹೊರಡಿಸಿತು.
ಈ ವೇಳೆ ಹೈಕೋರ್ಟ್, ನೀವು ಕಂಪನಿ ಕೋರ್ಟಿಗೆ ಅರ್ಜಿ ಏಕೆ ಸಲ್ಲಿಸಲಿಲ್ಲ ಎಂದು ವಿಜಯ ಮಲ್ಯ ಪರ ವಕೀಲರನ್ನು ಪ್ರಶ್ನೆ ಮಾಡಿತು. ಅರ್ಜಿಯಲ್ಲಿ ಬ್ಯಾಂಕ್‌ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರಿ ಎಂದು ಜಡ್ಜ್ ಪ್ರಶ್ನಿಸಿದರು. ರಿಟ್ ಅರ್ಜಿ ಸಲ್ಲಿಸುವುದು ಸಂವಿಧಾನಿಕ ಹಕ್ಕು ಎಂದು ಉಲ್ಲೇಖಿಸಿ ಸಜನ್ ಪೂವಯ್ಯ ತಿಳಿಸಿದರು. ಈ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಕೇಸಲ್ಲಿ ವಿಜಯ ಮಲ್ಯ ಹಾಜರಾಗಿಲ್ಲ. ದೇಶದ ವಿವಿಧೆಡೆ ನಡೆದಿರುವ ಕೋರ್ಟು ವಿಚಾರಣೆಗೆ ವಿಜಯ್ ಮಲ್ಯ ಹಾಜರಾಗಿಲ್ಲ. ಹೀಗಿರುವಾಗ ರಿಟ್ ಅರ್ಜಿ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ ಎಂದು ಕೋರ್ಟ್ ಪ್ರಶ್ನಿಸಿತು.
ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಆಧೀನದಲ್ಲಿ ಬರುತ್ತದೆ. ಒಂದು ಕಾಲದಲ್ಲಿ ಯುಬಿಎಚ್‌ಎಲ್ ಕಂಪನಿ ವಿಶ್ವದಲ್ಲಿಯೇ ಪ್ರಸಿದ್ಧ ಕಂಪನಿಯಾಗಿತ್ತು. ಬ್ಯಾಂಕ್‌ನವರು ಒಂದು ಹೇಳುತ್ತಾರೆ, ಅಫಿಶಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ ಎಂದು ವಕೀಲರು ತಿಳಿಸಿದರು.
ಇದನ್ನೂ ಓದಿ: Sabarimala temple: ಶಬರಿಮಲೆ ದೇವಸ್ಥಾನ ಚಿನ್ನ ಕಳವು ವಿವಾದ- ವಿಜಯ್ ಮಲ್ಯ ಹೆಸರು ಕೇಳಿ ಬಂದಿದ್ದು ಏಕೆ?