ತಿರುವನಂತಪುರಂ, ಜ. 15, 2025: ಕಳೆದ ವರ್ಷದ ಮಳೆಗಾಲದಲ್ಲಿ ಕೇರಳ ಕಂಡು ಕೇಳರಿಯದ ದುರಂತಕ್ಕೆ ಸಾಕ್ಷಿಯಾಗಿತ್ತು. ಭೀಕರ ಮಳೆಯಿಂದಾಗಿ ವಯನಾಡಿನಲ್ಲಿ ಭೀಕರ ಭೂಕುಸಿತ (Wayanad Landslide) ಸಂಭವಿಸಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇಡೀ ಊರಿಗೆ ಊರೇ ಕೊಚ್ಚಿ ಹೋಗಿತ್ತು. ಇದೀಗ ಸಂತ್ರಸ್ತರ ಪುನರ್ವಸತಿಗೆ ಕೇರಳ ಸರ್ಕಾರ (Kerala government) ಮುಂದಾಗಿದೆ. ನಾಪತ್ತೆಯಾದವರನ್ನು ಮೃತರೆಂದು ಘೋಷಿಸಿ, ಅವರ ಕುಟುಂಬಕ್ಕೆ ಪರಿಹಾರ ಒದಗಿಸಲು ಮುಂದಾಗಿದೆ.
ಮಂಗಳವಾರ (ಜ. 14) ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಕಾಣೆಯಾದವರ ಪಟ್ಟಿಯನ್ನು ಪರಿಶೀಲಿಸಲು ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಸಮಿತಿಯು ಗ್ರಾಮ ಪಂಚಾಯತ್ ಕಾರ್ಯದರ್ಶಿ, ಗ್ರಾಮ ಅಧಿಕಾರಿ ಮತ್ತು ಆಯಾ ಪೊಲೀಸ್ ಠಾಣೆಗಳ ಸ್ಟೇಷನ್ ಹೌಸ್ ಅಧಿಕಾರಿಯನ್ನು ಒಳಗೊಂಡಿರುತ್ತದೆ. ಮೊದಲಿಗೆ ಈ ಸಮಿತಿಯು ಕಾಣೆಯಾದವರ ಪಟ್ಟಿಯನ್ನು ಸಿದ್ಧಪಡಿಸುತ್ತದೆ ಮತ್ತು ಅದನ್ನು ಪರಿಶೀಲನೆಗಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (District Disaster Management Authority-DDMA) ಸಲ್ಲಿಸುತ್ತದೆ.
ಡಿಡಿಎಂಎ ಪಟ್ಟಿಯನ್ನು ಪರಿಶೀಲಿಸಿ ತನ್ನ ಸಲಹೆಗಳೊಂದಿಗೆ ರಾಜ್ಯ ಮಟ್ಟದ ಸಮಿತಿಗೆ ಕಳುಹಿಸುತ್ತದೆ. ಬಳಿಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಮತ್ತು ಕಂದಾಯ ಹಾಗೂ ಸ್ಥಳೀಯಾಡಳಿತದ ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ರಾಜ್ಯ ಮಟ್ಟದ ಸಮಿತಿಯು ಪಟ್ಟಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಂತರ ಸರ್ಕಾರವು ನಾಪತ್ತೆಯಾದವರನ್ನು ಮೃತರೆಂದು ಎಂದು ಘೋಷಿಸಿ ಅವರ ಹತ್ತಿರದ ಸಂಬಂಧಿಕರಿಗೆ ಪರಿಹಾರ ನೀಡುವ ಆದೇಶವನ್ನು ಹೊರಡಿಸುತ್ತದೆ.
ಅಧಿಕೃತ ದಾಖಲೆಗಳ ಪ್ರಕಾರ, ಕಳೆದ ವರ್ಷ ಜು. 30ರಂದು ಸಂಭವಿಸಿದ ಭೂಕುಸಿತದಲ್ಲಿ 263 ಮಂದಿ ಮೃತಪಟ್ಟು 35 ಮಂದಿ ನಾಪತ್ತೆಯಾಗಿದ್ದರು. ಆಯಾ ಪೊಲೀಸ್ ಠಾಣೆಗಳಲ್ಲಿ ನಾಪತ್ತೆಯಾದವರಿಗೆ ಸಂಬಂಧಿಸಿದಂತೆ ದಾಖಲಾದ ಎಫ್ಐಆರ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಂತೆ ಸ್ಥಳೀಯ ಮಟ್ಟದ ಸಮಿತಿಗೆ ನಿರ್ದೇಶಿಸಲಾಗಿದೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ತಹಶೀಲ್ದಾರ್ ಅಥವಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ವಿವರವಾದ ವಿಚಾರಣೆ ನಡೆಸಲಿದೆ ಮತ್ತು ಅದರ ವಿವರಗಳನ್ನು ಅಧಿಕೃತ ವೆಬ್‌ಸೈಟ್ ಹಾಗೂ ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಅವಧಿಯನ್ನು ನೀಡಲಾಗುತ್ತದೆ. ನಂತರ ಕಾಣೆಯಾದವರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಮತ್ತು ಅವರ ಹತ್ತಿರದ ಸಂಬಂಧಿಕರಿಗೆ ಮರಣ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.