ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ಆ 3 ಗಂಟೆಯ ರಹಸ್ಯ; ದೆಹಲಿ ಸ್ಫೋಟಕ್ಕೂ ಮುನ್ನ ಕಾರು ನಿಲ್ಲಿಸಿ ಬಾಂಬರ್‌ ಮಾಡಿದ್ದೇನು?

ದೆಹಲಿ ಕಾರು ಸ್ಫೋಟದ ರೂವಾರಿ ಜಮ್ಮು ಮತ್ತು ಕಾಶ್ಮೀರ ಮೂಲದ ಡಾ. ಉಮರ್‌ ಮೊಹಮ್ಮದ್‌ ಎನ್ನುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಕೆಂಪು ಕೋಟೆ ಸಮೀಪದ ಪಾರ್ಕಿಂಗ್‌ ಏರಿಯಾಕ್ಕೆ ಅಪರಾಹ್ನ 3.19ಕ್ಕೆ ಬಂದ ಕಾರು ಬಳಿಕ ತೆರಳಿದ್ದು ಸಂಜೆ 6.28ಕ್ಕೆ. ನಿಧಾನವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸ್ಫೋಟಗೊಂಡಿತು. ಹಾಗಾದರೆ ಸುಮಾರು 3 ಗಂಟೆಗಿಂತ ಹೆಚ್ಚು ಕಾಲ ಕಾರನ್ನು ಉಮರ್‌ ಮೊಹಮ್ಮದ್‌ ಪಾರ್ಕಿಂಗ್‌ ಏರಿಯಾದಲ್ಲಿ ನಿಲ್ಲಿಸಿದ್ದು ಏಕೆ? ಅಷ್ಟೊತ್ತು ಪ್ಲ್ಯಾನ್‌ ಮಾಡುತ್ತಿದ್ದನೆ? ಇಲ್ಲಿದೆ ನಿಮ್ಮೆಲ್ಲ ಪ್ರಶ್ನೆಗೆ ಉತ್ತರ.

ದೆಹಲಿ ಬಾಂಬ್‌ ಸ್ಫೋಟ ನಡೆದ ಸ್ಥಳ ಪರಿಶೀಲನೆ. ಒಳಚಿತ್ರದಲ್ಲಿ ಡಾ. ಉಮರ್‌ ಮೊಹಮ್ಮದ್‌.

ದೆಹಲಿ, ನ. 12: ನವೆಂಬರ್‌ 10ರ ಸಂಜೆ ದೆಹಲಿಯ ಕೆಂಪು ಕೋಟೆ ಸಮೀಪದ ರಸ್ತೆ ಎಂದಿನಂತೆ ಗದ್ದಲದಿಂದ ಕೂಡಿತ್ತು. ವಾಹನಗಳ, ಜನರ ಸಂಚಾರ ಹೆಚ್ಚಾಗಿತ್ತು. ಆದರೆ ಮೆಟ್ರೋ ಸ್ಟೇಷನ್‌ನ ಗೇಟ್‌ ನಂ. 1ರ ಸಮೀಪ ಸಂಜೆ 6.55ಕ್ಕೆ ಭಾರಿ ಸದ್ದಿನೊಂದಿಗೆ ಬಿಳಿ ಹ್ಯುಂಡೈ ಐ20 ಕಾರು ಸ್ಫೋಟಿಸುವುದರೊಂದಿಗೆ ಜನ ಜೀವನ ತತ್ತರಿಸಿ ಹೋಯಿತು (Delhi Blast). ತಮ್ಮ ಪಾಡಿಗೆ ತಾವಿದ್ದ 9 ಅಮಾಯಕರ ದೇಹ ಛಿದ್ರ ಛಿದ್ರವಾಗಿ ಹೋಯಿತು. ಅನೇಕರು ಗಾಯಗೊಂಡು ನರಳಾಡಿದರು. ಉಗ್ರರ ಈ ಪೈಶಾಚಿಕ ಕೃತ್ಯದ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ. ಇದೀಗ ಈ ಕೃತ್ಯದ ಕುರಿತಾದ ಒಂದೊಂದೇ ವಿವರಗಳು ಹೊರಬರುತ್ತಿವೆ. ಈ ಭೀಕರ ಸ್ಫೋಟದ ಹಿಂದೆ ವೈಟ್‌ ಕಾಲರ್‌ ಟೆರರಿಸಂನ ಕೈವಾಡ ಸ್ಪಷ್ಟವಾಗಿದೆ. ವೈದ್ಯಕೀಯ ವೃತ್ತಿಯಲ್ಲಿರುವ ಉಗ್ರರೇ ಈ ಕೃತ್ಯ ಎಸಗಿರುವುದು ಬಟಾ ಬಯಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಮೂಲದ ಡಾ. ಉಮರ್‌ ಮೊಹಮ್ಮದ್‌ (Umar Muhammad) ಈ ಭೀಕರ ಸ್ಫೋಟದ ಹಿಂದಿರುವ ಆತ್ಮಹತ್ಯಾ ಬಾಂಬರ್‌ ಎನ್ನುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಕೆಂಪು ಕೋಟೆ ಸಮೀಪದ ಪಾರ್ಕಿಂಗ್‌ ಏರಿಯಾಕ್ಕೆ ಅಪರಾಹ್ನ 3.19ಕ್ಕೆ ಬಂದ ಕಾರು ಬಳಿಕ ತೆರಳಿದ್ದು ಸಂಜೆ 6.28ಕ್ಕೆ. ನಿಧಾನವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಟ್ರಾಫಿಕ್‌ ಸಿಗ್ನಲ್‌ನಲ್ಲಿ ರೆಡ್‌ ಲೈಟ್‌ ಕಾಣಿಸುತ್ತಿದ್ದಂತೆ ನಿಂತು ಬಿಟ್ಟಿತು. ಕ್ಷಣಾರ್ಧದಲ್ಲೇ ಸ್ಫೋಟಗೊಂಡಿತು. ಹಾಗಾದರೆ ಸುಮಾರು 3 ಗಂಟೆಗಿಂತ ಹೆಚ್ಚು ಕಾಲ ಕಾರನ್ನು ಉಮರ್‌ ಮೊಹಮ್ಮದ್‌ ಪಾರ್ಕಿಂಗ್‌ ಏರಿಯಾದಲ್ಲಿ ನಿಲ್ಲಿಸಿದ್ದು ಏಕೆ? ಅಷ್ಟೊತ್ತು ಪ್ಲ್ಯಾನ್‌ ಮಾಡುತ್ತಿದ್ದನೆ? ಆ 3 ಗಂಟೆಗಳ ರಹಸ್ಯವೇನು? ಇಲ್ಲಿದೆ ಉತ್ತರ.

ದೆಹಲಿ ಬಾಂಬ್‌ ಸ್ಫೋಟದ ದೃಶ್ಯ:



ಈ ಸುದ್ದಿಯನ್ನೂ ಓದಿ: Delhi Blast: ದೆಹಲಿ ಸ್ಫೋಟದ ಸಂಚು; ವೈದ್ಯರಿಗೆ ತರಬೇತಿ ಕೊಡುತ್ತಿದ್ದ ಮಾಸ್ಟರ್‌ ಮೈಂಡ್‌ ಬಂಧನ

ಆ 3 ಗಂಟೆ ಏನು ನಡೆಯಿತು?

ಅಪರಾಹ್ನ 3.19ಕ್ಕೆ ಉಮರ್‌ ಓಡಿಸಿಕೊಂಡು ಬಂದ ಕಾರು ಪಾರ್ಕಿಂಗ್‌ ಏರಿಯಾಕ್ಕೆ ಎಂಟ್ರಿ ಕೊಟ್ಟಿತು. ಅದಾದ ಬಳಿಕ ಸಂಜೆ 6.28ಕ್ಕೆ ಹೊರಡುವ ತನಕ ಉಮರ್‌ ಕಾರಿನಿಂದ ಒಮ್ಮೆಯೂ ಇಳಿದಿರಲೇ ಇಲ್ಲ. ಸುಮಾರು 3 ಗಂಟೆಗಳ ಕಾಲ ಆತ ಕಾರೊಳಗೇ ಇದ್ದ. ಸ್ಫೋಟಿಸಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದನಾ? ಅಥವಾ ಈ ವೇಳೆ ಗೊಂದಲದಲ್ಲಿದ್ದನ? ಎನ್ನುವ ಪ್ರಶ್ನೆ ಮೂಡಿದೆ.

ತನಿಖೆಯ ವೇಳೆ ಈ ಬಗ್ಗೆ ಹೊಸ ವಿಚಾರ ಬೆಳಕಿಗೆ ಬಂದಿದೆ. ಕೆಂಪು ಕೋಟೆ ಬಳಿ ಜನಸಂದಣಿ ಹೆಚ್ಚಾಗಿರುವ ಸಮಯ ನೋಡಿಕೊಂಡು ಕಾರಿನ ಹಿಂದಿನ ಸೀಟಿನಲ್ಲಿ ಇರಿಸಲಾಗಿದ್ದ ಬಾಂಬ್ ಅನ್ನು ಸ್ಫೋಟಿಸುವುದು ಉಮರ್‌ನ ಮೂಲ ಯೋಜನೆಯಾಗಿತ್ತು ಎಂದು ತನಿಖಾಧಿಕಾರಿಗಳ ಮೂಲಗಳು ತಿಳಿಸಿವೆ.

ಫರೀದಾಬಾದ್‌ನಲ್ಲಿ ಸಿಕ್ಕಿಬಿದ್ದ ಸಹಚರರು; ಗಾಬರಿಯಾದ ಉಮರ್‌

ಇದೇ ವೇಳೆ ಆತನ ಸಹಚರರನ್ನು ಹರಿಯಾಣದ ಫರಿದಾಬಾದ್‌ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದರು. ಅವರಿಂದ ಸುಮಾರು 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರಿಂದ ತಾನು ಸಿಕ್ಕಿ ಬೀಳುವೆನೆಂಬ ಭಯ, ಹತಾಶೆ ಉಮರ್‌ಗೆ ಕಾಡಿದ್ದಿರಬೇಕು. ಹೀಗಾಗಿ ಕಾರಿನಿಂದ ಕೆಳಗಿಳಿಯದೆ ಈ ಬಗ್ಗೆ ತಲೆ ಕೆಡಿಸಿಕೊಂಡಿದ್ದ. ಸೋಮವಾರ ಕೆಂಪು ಕೋಟೆಯನ್ನು ಮುಚ್ಚಲಾಗುತ್ತದೆ. ಅಂದು ಹೆಚ್ಚಿನ ಜನಸಂದಣಿ ಇರುವುದಿಲ್ಲ. ಇದೆಲ್ಲ ಆತನನ್ನು ಮತ್ತಷ್ಟು ಗೊಂದಲಕ್ಕೆ ದೂಡಿರಬೇಕು ಎನ್ನುವ ಸಂದೇಹ ಮೂಡಿದೆ.

3 ಗಂಟೆಗಳ ಕಾಲ ಇದನ್ನೇ ಅಲೋಚಿಸುತ್ತಿದ್ದ ಆತ ಬಳಿಕ ಒಂದು ಬದಿಯಲ್ಲಿ ಕೆಂಪು ಕೋಟೆ ಮತ್ತು ಇನ್ನೊಂದು ಬದಿಯಲ್ಲಿ ಚಾಂದನಿ ಚೌಕ್ ಉದ್ದಕ್ಕೂ ಸಾಗುವ ನೇತಾಜಿ ಸುಭಾಷ್ ಮಾರ್ಗಕ್ಕೆ ಕಾರನ್ನು ಚಲಾಯಿಸಿಕೊಂಡು ಬಂದ. ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ಸ್ಫೋಟಗೊಂಡಿತು.

ಉಮರ್‌ ಚಾಲಾಯಿಸುತ್ತಿದ್ದ ಕಾರು ನವೆಂಬರ್‌ 10ರ ಬೆಳಗ್ಗೆ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಿಂದ ಹೊರಟಿರುವುದು ತನಿಖೆ ವೇಳೆ ಗೊತ್ತಾಗಿದೆ. ಸುಮಾರು 600 ಪೊಲೀಸರು ಬಿಳಿ ಹುಂಡೈ ಐ20 ಕಾರಿನ ಚಲನವಲನವನ್ನು ಪತ್ತೆಹಚ್ಚಲು 1,000ಕ್ಕೂ ಹೆಚ್ಚು ಸಿಸಿ ಟಿವಿ ದೃಶ್ಯಾವಳಿಗಳನ್ನುಪರಿಶೀಲಿಸಿದ್ದಾರೆ. ಕಾರು ಬೆಳಗ್ಗೆ 8.13ಕ್ಕೆ ಬದರ್ಪುರದ ಹರಿಯಾಣ-ದೆಹಲಿ ಗಡಿಯಲ್ಲಿರುವ ಟೋಲ್ ಪ್ಲಾಜಾವನ್ನು ದಾಟುತ್ತಿರುವುದನ್ನು ಕಂಡುಬಂದಿದೆ. ನಂತರ ಅದು ಮಯೂರ್ ವಿಹಾರ್ ಮತ್ತು ಕನ್ನಾಟ್ ಪ್ಲೇಸ್ ಮೂಲಕ ಕೆಂಪು ಕೋಟೆ ಬಳಿಯ ಪಾರ್ಕಿಂಗ್ ಸ್ಥಳವನ್ನು ತಲುಪಿತು. ಈ ವೇಳೆ ಉಮರ್‌ ಹಳೆ ದೆಹಲಿಯ ಅಸಫ್ ಅಲಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕಾರನ್ನು ನಿಲ್ಲಿಸಿದ್ದ. ಸಿಸಿಟಿವಿ ದೃಶ್ಯಗಳಲ್ಲಿ ಆತ ಒಬ್ಬಂಟಿಯಾಗಿ ಕಾರಿನಲ್ಲಿ ಕುಳಿತಿರುವ ದೃಶ್ಯ ಸೆರೆಯಾಗಿದೆ. ಸ್ವಲ್ಪ ವಿರಾಮದ ನಂತರ ಡ್ರೈವ್ ಮಾಡಿಕೊಂಡು ಪಾರ್ಕಿಂಗ್ ಏರಿಯಾಕ್ಕೆ ತಲುಪಿದ.

ದೆಹಲಿ ಪ್ರವೇಶಿಸಿದಾಗಿನಿಂದ ಉಮರ್ ಚಲಿಸಿದ ಮಾರ್ಗದ ಬಗ್ಗೆ ಹಲವು ಪ್ರಶ್ನೆಗಳಿವೆ. ಬದರ್ಪುರ್ ಟೋಲ್ ಬೂತ್‌ನಿಂದ ಆತ ಮೊದಲು ಮಯೂರ್ ವಿಹಾರ್‌ಗೆ ತೆರಳಿದ್ದ. ಅಲ್ಲಿ ದೆಹಲಿಯ ಪ್ರಮುಖ ಹೆಗ್ಗುರುತಾದ ಅಕ್ಷರಧಾಮ ದೇವಾಲಯವಿದೆ. ಅಲ್ಲಿಂದ, ನೇರವಾಗಿ ಹಳೆ ದೆಹಲಿಗೆ ಹೋಗುವ ಬದಲು ಪರ್ಯಾಯ ಮಾರ್ಗವನ್ನು ಬಳಸಿ ದೆಹಲಿಯ ಹೃದಯಭಾಗವಾದ ಕನ್ನಾಟ್ ಪ್ಲೇಸ್‌ಗೆ ಆಗಮಿಸಿದ್ದ.

ಉಮರ್ ದೆಹಲಿಯನ್ನು ಪ್ರವೇಶಿಸಿದ ಸುಮಾರು 11 ಗಂಟೆಗಳ ನಂತರ ಸ್ಫೋಟ ಸಂಭವಿಸಿದೆ. ಈ ವೇಳೆ, ಪಾರ್ಕಿಂಗ್ ಸ್ಥಳದಲ್ಲಿ 3 ಗಂಟೆಗಳ ಕಾಲ ಮುಂದಿನ ಸೂಚನೆಗಾಗಿ ಕಾಯುತ್ತಿದ್ದನೇ? ಅಥವಾ ಗುರಿಯನ್ನು ನಿರ್ಧರಿಸುವಲ್ಲಿ ಗೊಂದಲಕ್ಕೀಡಾಗಿದ್ದನೇ? ಎನ್ನುವ ಪ್ರಶ್ನೆಯೂ ಮೂಡಿದೆ. ತನಿಖಾಧಿಕಾರಿಗಳು ಇದು ಆತ್ಮಾಹುತಿ ಕಾರ್ಯಾಚರಣೆಯಲ್ಲ, ಆಕಸ್ಮಿಕ ಸ್ಫೋಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಯದಲ್ಲಿ, ಗೊಂದಲದ ಮಧ್ಯೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Delhi Blast: ದೆಹಲಿ ಸ್ಫೋಟ ಆತ್ಮಾಹುತಿ ದಾಳಿಯಲ್ಲ, ಆಕಸ್ಮಿಕ ಬ್ಲಾಸ್ಟ್‌; ಪ್ರಥಮಿಕ ತನಿಖೆಯಲ್ಲಿ ಸಂಗತಿ ಬಯಲು

10 ದಿನಗಳಿಂದ ಮೊಬೈಲ್‌ ಸ್ವಿಚ್‌ ಆಫ್‌

ಸ್ಫೋಟಕ್ಕೆ 10 ದಿನಗಳ ಮೊದಲು ಅಂದಂರೆ ಅಕ್ಟೋಬರ್ 31ರಂದು ಉಮರ್‌ನ ಫೋನ್ ಸ್ವಿಚ್ ಆಫ್ ಆಗಿತ್ತು ಮತ್ತು ಅದದ ಕೊನೆಯ ಟವರ್‌ ಲೊಕೇಷನ್‌ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿತ್ತು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಪೊಲೀಸರು ಆತನ ಚಲನವಲನವನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಪರಿಶೀಲಿಸಿದಾಗ ಒಮ್ಮೆಯೂ ಫೋನ್ ಬಳಸುತ್ತಿರುವುದು ಕಂಡುಬಂದಿಲ್ಲ. ಈ ಯೋಜನೆಗೆ ನಿಜವಾಗಿಯೂ ಫೋನ್ ಬಳಸುತ್ತಿರಲಿಲ್ಲವೆ? ಅಥವಾ ಫೋನ್ ಅನ್ನು ಕೊಂಡೊಯ್ಯುತಿರಲಿಲ್ಲವೆ? ಎನ್ನುವ ಪ್ರಶ್ನೆಯೂ ಮೂಡಿದೆ. ಹಾಗಾದರೆ ಫೋನ್ ಇಲ್ಲದೆ ಹ್ಯಾಂಡ್ಲರ್‌ಗಳೊಂದಿಗೆ ಆತ ಹೇಗೆ ಸಂಪರ್ಕ ಸಾಧಿಸುತ್ತಿದ್ದ? ಇದು ಕೂಡ ಸಂದೇಹಕ್ಕೆ ಎಡೆ ಮಅಡಿಕೊಟ್ಟಿದೆ. ಮೂಲಗಳ ಪ್ರಕಾರ ಆತ ಬೇರೆ ಸಂಖ್ಯೆಯ ಫೋನ್ ಬಳಸಿರಬೇಕು. ಸ್ಫೋಟದಲ್ಲಿ ಅದು ನಾಶವಾಗಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಎಲ್ಲ ಆಯಾಮದಿಂದಲೂ ತನಿಖೆ ನಡೆಯುತ್ತಿದೆ.