ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಜಗತ್ತಿಗೆ ಅಗತ್ಯವಿರುವ ಪರಿಹಾರ ನಿಮ್ಮಲ್ಲಿವೆ": ದೆಹಲಿ ಪ್ರತಿಭಟನೆ ನಡುವೆ ಜೆನ್ ಝೀಗಳನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ

Narendra Modi: ತಮಿಳುನಾಡು ಪ್ರವಾಸದ ವೇಳೆ ಚೆನ್ನೈಯಲ್ಲಿ ಮಾತನಾಡಿದ ಪ್ರದಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಕೊಡುಗೆಯನ್ನು ಶ್ಲಾಘಿಸಿದರು. "ಅಭಿವೃದ್ಧಿಶೀಲ ಭಾರತಕ್ಕೆ ಅಗತ್ಯವಿರುವ ಹೊಸ ಆಲೋಚನೆಗಳು ಮತ್ತು ಪರಿಹಾರಗಳು ಭಾರತದ ಭವಿಷ್ಯವನ್ನು ಮಾತ್ರವಲ್ಲದೆ, ಜಗತ್ತಿನ ಭವಿಷ್ಯವನ್ನೂ ರೂಪಿಸಲಿದೆ" ಎಂದು ಹೇಳಿದರು.

ಚೆನ್ನೈಯ ಜಲಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಚೆನ್ನೈ, ಅ. 11: ಜಗತ್ತಿನ ಸಮಸ್ಯೆಗೆ ಪರಿಹಾರ ಜೆನ್‌ ಝೀಗಳಲ್ಲಿದೆ (ಯುವ ಸಮುದಾಯ). ಭವಿಷ್ಯವನ್ನು ವಿಶಾಲ ದೃಷ್ಟಿಕೋನದಿಂದ ನೋಡಲು ಇದು ಸೂಕ್ತ ಸಮಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಹೇಳಿದರು. ತಮಿಳುನಾಡು ಪ್ರವಾಸದ ವೇಳೆ ಚೆನ್ನೈಯಲ್ಲಿ ಅವರು ಮಾತನಾಡಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ದಿಲ್ಲಿ ಸೇರಿ ದೇಶಾದ್ಯಂತ ಸಿಜೆಪಿ ನೇತೃತ್ವದಲ್ಲಿ ಯುವ ಜನತೆ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಮಧ್ಯೆ ಮೋದಿ ಅವರ ಈ ಹೇಳಿಕೆ ಹೊರಬಿದ್ದಿದೆ. ಆ ಮೂಲಕ ಮೋದಿ ಯುವ ಜನತೆಯ ಗಮನ ಸೆಳೆದಿದ್ದಾರೆ.

ನಂದಂಬಾಕಂನ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ನಡೆದ ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಅಭಿವೃದ್ಧಿಶೀಲ ಭಾರತಕ್ಕೆ ಅಗತ್ಯವಿರುವ ಹೊಸ ಆಲೋಚನೆಗಳು ಮತ್ತು ಪರಿಹಾರಗಳು ಭಾರತದ ಭವಿಷ್ಯವನ್ನು ಮಾತ್ರವಲ್ಲದೆ, ಜಗತ್ತಿನ ಭವಿಷ್ಯವನ್ನೂ ರೂಪಿಸಲಿದೆ" ಎಂದು ಹೇಳಿದರು.

ಯುವ ಜನತೆ ಬಗ್ಗೆ ಪ್ರಧಾನಿ ಮೋದಿ ಮಾತು:



"ಇಂದು ಜಗತ್ತು ಹುಡುಕುತ್ತಿರುವ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಪ್ರತಿಯೊಬ್ಬ ಯುವಕನೂ ತನ್ನ ಭವಿಷ್ಯವನ್ನು ವಿಶಾಲವಾದ ದೃಷ್ಟಿಕೋನದಲ್ಲಿ ನೋಡಬೇಕೆಂದು ನಾನು ಬಯಸುತ್ತೇನೆ. ಯಾಕೆಂದರೆ ಇದು ನಿಮ್ಮ ಸಮಯʼʼ ಎಂದು ಅವರು ಅಭಿಪ್ರಾಯಪಟ್ಟರು.

ತಮಿಳುನಾಡು ಸಿಎಂ ವಿಜಯ್ ಜೊತೆ ಪ್ರಧಾನಿ ಮೋದಿ ಮೆಟ್ರೋ ಸವಾರಿ

ತಮಿಳು ಮಹಾಕವಿ ಭಾರತಿಯಾರ್ ಅವರ ಮಾತುಗಳನ್ನು ಉಲ್ಲೇಖಿಸಿದ ಮೋದಿ, "ಇಲ್ಲಿರುವ ನೀವೆಲ್ಲರೂ ನಿರ್ಭಯರಾಗಿ ಎಂದು ನಾನು ಕರೆ ನೀಡುತ್ತೇನೆ. ನಿಮ್ಮ ಆಲೋಚನೆಗಳನ್ನು ಸಾಕಾರಗೊಳಿಸಲು ಶ್ರಮಿಸಿ. ದೊಡ್ಡ ಕನಸು ಕಾಣಿ, ವಿಭಿನ್ನವಾಗಿ ಯೋಚಿಸಿ ಮತ್ತು ನಿರ್ಭಯರಾಗಿರಿʼʼ ಎಂದರು.

"ಭಾರತದಲ್ಲಿ ಅಪಾರ ಅವಕಾಶಗಳಿವೆ. ಇದು ನಿಮ್ಮ ಸಮಯ ಮತ್ತು ಇದು ನಿಮ್ಮ ಅವಕಾಶ. ನಾವೆಲ್ಲರೂ ಸೇರಿ ಇದನ್ನು ಸಾಧಿಸೋಣ" ಎಂದು ಅವರು ಯುವ ಜನತೆಗೆ ಕರೆ ನೀಡಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನ್‌ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ವಿರುದ್ಧ ದೆಹಲಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ನಡೆಸುತ್ತಿದ್ದ ಪ್ರತಿಭಟನೆ ನಡುವೆ ಮೋದಿ ಜೆನ್‌ ಝೀಗಳ ಸಂಪರ್ಕ ಸಾಧಿಸಲು ಪ್ರಯತ್ನಿಸಿದರು.

ಜೆನ್‌ ಝೀಗಳ ಮತ್ತೊಂದು ಪ್ರತಿಭಟನೆ

ಅಕ್ಟೋಬರ್‌ 10ರಂದು ಜೆನ್ ಝೀ ಜನತೆಯೊಂದಿಗೆ ಗುರುತಿಸಿಕೊಂಡಿರುವ ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಮುನ್ನವೇ ಅದರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಆ ಮೂಲಕ ಪ್ರತಿಭಟನೆಗೆ ಕೇಂದ್ರ ತಣ್ಣೀರೆರಚಿತು. ಮುಂಬೈಯಿಂದ ದೆಹಲಿಗೆ ಬಂದಿಳಿದ ಕೆಲವೇ ಕ್ಷಣಗಳಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಇತರ ಇಬ್ಬರು ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆಯಲಾಯಿತು. ಇದಲ್ಲದೆ, ಸುಮಾರು 3,000 ಮಂದಿಯನ್ನು ಪೊಲೀಸರು ಬಂಧಿಸಿದರು. ಮೆಟ್ರೋ ಬಂದ್ ಮಾಡಲಾಯಿತು ಮತ್ತು ಸ್ಥಳೀಯ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಯಿತು.

ರಾಹುಲ್ ಗಾಂಧಿಯ ‘ಛಾತ್ರೋಂ ಕಿ ಗೂಂಜ್’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು; ಜೆನ್‌ ಝೀ ಸಮುದಾಯದ ಬಗ್ಗೆ ಹೇಳಿದ್ದೇನು?

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಜುಲೈಯಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಅದಾದ ಬಳಿಕ ಮೋದಿ ರೀಲ್ಸ್‌, ಸಂವಾದ ಮೂಲಕ ಜೆನ್‌ ಝೀಗಳೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author