ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಾರಕಕ್ಕೇರಿದ ಆಸ್ತಿ ವಿವಾದ | ಬೆಂಗಳೂರಿನ ಕುಟುಂಬದ ಮನೆಗೆ ಭೇಟಿ ನೀಡದಂತೆ ವೈ.ಎಸ್. ಶರ್ಮಿಳಾಗೆ ತಡೆ, ಭಾರೀ ಹೈಡ್ರಾಮಾ!

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಣ್ಣ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ತಂಗಿ ವೈ.ಎಸ್. ಶರ್ಮಿಳಾ ನಡುವಿನ ಕಲಹ ತಾರಕಕ್ಕೇರಿದ್ದು, ಬೆಂಗಳೂರಿನ ಕುಟುಂಬದ ಮನೆಗೆ ಭೇಟಿ ನೀಡಲು ತೆರಳಿದ್ದ ಶರ್ಮಿಳಾ ಅವರನ್ನು ಭದ್ರತಾ ಸಿಬ್ಬಂದಿ ತಡೆದಿರುವ ಘಟನೆ ನಡೆದಿದೆ. ಪ್ರವೇಶ ದ್ವಾರದಲ್ಲೇ ಉಂಟಾದ ಈ ಅಡ್ಡಿಯಿಂದ ಸ್ಥಳದಲ್ಲಿ ಕೆಲಕಾಲ ಭಾರೀ ಹೈಡ್ರಾಮಾ ಸೃಷ್ಟಿಯಾಗಿದೆ.

ಬೆಂಗಳೂರಿನ ಕುಟುಂಬದ ಮನೆಗೆ ಭೇಟಿ ನೀಡದಂತೆ ಶರ್ಮಿಳಾಗೆ ತಡೆ ನೀಡಿದ ಪೊಲೀಸರು

ಬೆಂಗಳೂರು, ನ.23: ಆಂಧ್ರಪ್ರದೇಶದ ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಅವರ ಸಹೋದರಿ ವೈ.ಎಸ್. ಶರ್ಮಿಳಾ ನಡುವಿನ ಆಸ್ತಿ ವಿವಾದ ಮತ್ತೊಮ್ಮೆ ತಾರಕಕ್ಕೇರಿದ್ದು, ಬೆಂಗಳೂರಿನಲ್ಲಿ ಹೈಡ್ರಾಮಾ ಸೃಷ್ಟಿಯಾಗಿದೆ. ನಗರದಲ್ಲಿರುವ ಯಲಹಂಕ ಬಂಗಲೆಗೆ ಭೇಟಿ ನೀಡಲು ತೆರಳಿದ್ದ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಯಲಹಂಕ ಬಂಗಲೆಯತ್ತ ತೆರಳುತ್ತಿದ್ದ ಶರ್ಮಿಳಾರನ್ನು ನಗರದ ಏರ್‌ ಫೋರ್ಸ್‌ ಕ್ರಾಸ್‌ ಬಳಿ ಪೊಲೀಸರು ತಡೆದಿದ್ದು, ಆಸ್ತಿ ಆವರಣಕ್ಕೆ ತೆರಳದಂತೆ ನ್ಯಾಯಾಲಯವು ನೀಡಿದ ತಡೆಯಾಜ್ಞೆ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಶರ್ಮಿಳಾ ಅವರು ನನ್ನ ನಿವಾಸಕ್ಕೆ ನಾನು ಹೋಗುವುದರಲ್ಲಿ ತಪ್ಪೇನು? ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಆದರೆ ಪೊಲೀಸರು ಅಲ್ಲಿಗೆ ತೆರಳಲು ಸಂಪೂರ್ಣವಾಗಿ ನಿರ್ಬಂಧಿಸಿದ್ದರಿಂದ ಶರ್ಮಿಳಾ ಕುಟುಂಬ ಖಾಸಗಿ ಹೋಟೆಲ್‌ಗೆ ತೆರಳಿತು ಎಂದು ಅವರ ಆಪ್ತೆಯೊಬ್ಬರು ತಿಳಿಸಿದ್ದಾರೆ.

ಶರ್ಮಿಳಾ ಅವರನ್ನು ಪೊಲೀಸರು ತಡೆದಿರುವುದು ವಿಡಿಯೋ ನೋಡಿ



ಕಳೆದ ಕೆಲವು ದಿನಗಳಿಂದ ಜಗನ್ ಮೋಹನ್ ರೆಡ್ಡಿ ಮತ್ತು ಶರ್ಮಿಳಾ ನಡುವೆ ಕುಟುಂಬದ ಆಸ್ತಿ ಹಂಚಿಕೆ ವಿಚಾರವಾಗಿ ತೀವ್ರ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಆಸ್ತಿ ವಿವಾದ ಈಗಾಗಲೇ ನ್ಯಾಯಾಲಯ ಹಾಗೂ ಕಾನೂನು ಹೋರಾಟದ ಹಂತಕ್ಕೂ ತಲುಪಿದ್ದು, ಇಬ್ಬರೂ ಪರಸ್ಪರ ಬಹಿರಂಗವಾಗಿಯೇ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿಯೇ ಬೆಂಗಳೂರಿನ ನಿವಾಸಕ್ಕೆ ಶರ್ಮಿಳಾ ಅವರ ಪ್ರವೇಶಕ್ಕೆ ತಡೆಯೊಡ್ಡಲಾಗಿದೆ ಎಂದು ಹೇಳಲಾಗುತ್ತಿದೆ.

Vijay Trisha: ಜಗನ್ ಮೋಹನ್ ರೆಡ್ಡಿ ಕುಟುಂಬದ ಮದುವೆಯಲ್ಲಿ ಒಟ್ಟಾಗಿ ಬಂದ ವಿಜಯ್-ತ್ರಿಷಾ!

ಯಲಹಂಕದ ಬಂಗಲೆಗೆ ಶರ್ಮಿಳಾ ತಡೆ ಏಕೆ?

ಯಲಹಂಕದಲ್ಲಿರುವ ಕುಟುಂಬದ ಅರಮನೆಗೆ ಪ್ರವೇಶಿಸದಂತೆ ಕೋರ್ಟ್‌ ಮಧ್ಯಂತರ ಆದೇಶ ಉಲ್ಲೇಖಿಸಿ ಪೊಲೀಸರು ಶರ್ಮಿಳಾ ಅವರ ಬೆಂಗಾವಲು ಪಡೆಯನ್ನು ಬೆಂಗಳೂರಿನ ಏರ್‌ ಫೋರ್ಸ್‌ ಕ್ರಾಸ್‌ ಬಳಿ ತಡೆದರು. ಈ ಘಟನೆಯು ಶರ್ಮಿಳಾ ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸದ್ಯ ಘಟನೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಏನಿದು ಆಸ್ತಿ ವಿವಾದ?

ದೇವನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರ ಕೋರ್ಟ್‌ ನವೆಂಬರ್ 21ರಂದು ಶರ್ಮಿಳಾ, ಅವರ ಕುಟುಂಬ ಸದಸ್ಯರು, ಏಜೆಂಟರು, ಪ್ರತಿನಿಧಿಗಳು ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ಯಾರೊಬ್ಬರೂ ʻಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್‌ʼನ ಆಸ್ತಿಯ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಿಲಿಕಾನ್ ಬಿಲ್ಡರ್ಸ್ ಸಲ್ಲಿಸಿದ ಮೊಕದ್ದಮೆಯಲ್ಲಿ ಈ ತಡೆಯಾಜ್ಞೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.