Boycott Turkey, Azerbaijan: ಪಾಕ್ಗೆ ನೆರವಾದ ಟರ್ಕಿ, ಅಜೆರ್ಬೈಜಾನ್ ಬಿಟ್ಹಾಕಿ; ಕಡಿಮೆ ಖರ್ಚಿನಲ್ಲಿ ಪ್ರವಾಸ ಹೋಗಬಹುದಾದ ದೇಶಗಳಿವು
ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಘರ್ಷಣೆ ವೇಳೆ ಟರ್ಕಿ (Turkey) ಮತ್ತು ಅಜೆರ್ಬೈಜಾನ್ (Azerbaijan) ಪಾಕ್ಗೆ ನೆರವಿನ ಹಸ್ತ ಚಾಚಿದ್ದವು. ಇದರಿಂದ ಭಾರತದಲ್ಲಿ ಇವೆರಡು ದೇಶಗಳ ವಿರುದ್ಧ ಬಾಯ್ಕಾಟ್ ಅಭಿಯಾನ (Boycott Turkey, Azerbaijan) ಆರಂಭವಾಗಿದೆ. ಇವೆರಡು ಭಾರತೀಯ ಪ್ರವಾಸಿಗರ ನೆಚ್ಚಿನ ತಾಣಗಳು. ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಾರೆ. ತಮ್ಮ ಶ್ರೀಮಂತ ಪರಂಪರೆ, ಅದ್ಭುತ ನಿಸರ್ಗದತ್ತ ತಾಣಗಳು ಮತ್ತು ರುಚಿಕರವಾದ ಪಾಕಪದ್ಧತಿಗೆ ಹೆಸರುವಾಸಿಯಾದ ಟರ್ಕಿ ಮತ್ತು ಅಜೆರ್ಬೈಜಾನ್ ಸದಾ ಪ್ರವಾಸಿಗರಿಂದ ಗಿಜಿಗುಡುತ್ತದೆ. ಆದರೆ ನೀವೀಗ ಈ ದೇಶಗಳ ಪ್ರವಾಸ ರದ್ದು ಪಡಿಸಲು ಯೋಚಿಸುತ್ತಿದ್ದರೆ ಚಿಂತೆ ಬೇಡಿ. ಅಷ್ಟೇ ಅದ್ಭುತ ಪ್ರವಾಸಿ ತಾಣಗಳಿರುವ ಪರ್ಯಾಯ ಆಯ್ಕೆಗಳಿವೆ. ಆ ಕುರಿತಾದ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.


ಸಿಂಗಾಪುರ
ವಿದೇಶ ಪ್ರವಾಸ ಕೈಗೊಳ್ಳಬೇಕು ಎಂದುಕೊಳ್ಳುವ ಭಾರತೀಯರ ನೆಚ್ಚಿನ ತಾಣವಾಗಿ ಸಿಂಗಾಪುರ ಇಂದಿಗೂ ಉಳಿದುಕೊಂಡಿದೆ. ಇಲ್ಲಿನ ಜಾಗತಿಕ ಮಟ್ಟದ ಮೂಲ ಸೌಕರ್ಯ, ವ್ಯವಸ್ಥಿತ ಸಾರ್ವಜನಿಕ ಸಾರಿಗೆ ಗಮನ ಸೆಳೆಯುತ್ತದೆ. ಸಿಂಗಾಪುರವು ಇತರ ಕೆಲವು ತಾಣಗಳಿಗಿಂತ ಸ್ವಲ್ಪ ದುಬಾರಿಯಾಗಿದ್ದರೂ, ವಸತಿ ಮತ್ತು ಊಟದ ಬಗ್ಗೆ ಎಚ್ಚರಿಕೆಯಿಂದ ಪ್ಲ್ಯಾನ್ ಮಾಡಿದರೆ ಬಜೆಟ್ ಫ್ರೆಂಡ್ಲಿಯನ್ನಾಗಿಸಬಹುದು.

ನೇಪಾಳ
ಪ್ರಕೃತಿ ಸೌಂದರ್ಯದಿಂದ ಸಮೃದ್ಧವಾಗಿರುವ ದೇಶಗಳಲ್ಲಿ ನಮ್ಮ ನೆರೆಯ ನೇಪಾಳವೂ ಒಂದು. ಹಿಮಾಲಯ ಪ್ರರ್ವತದ ತಪ್ಪಲಿನಲ್ಲಿರುವ ನೇಪಾಳ ರೋಮಾಂಚನಕಾರಿ ಚಾರಣಕ್ಕೆ ಬಹು ಜನಪ್ರಿಯ. ಪ್ರಯಾಣಿಕರು ಪೋಖರಾ ಮೇಲೆ ಪ್ಯಾರಾಗ್ಲೈಡಿಂಗ್ ಮಾಡಬಹುದು ಅಥವಾ ಕಠ್ಮಂಡುವಿನ ಐತಿಹಾಸಿಕ ದರ್ಬಾರ್ ಚೌಕದಲ್ಲಿ ಸುತ್ತಾಡಬಹುದು. ಮುಂಚಿತವಾಗಿ ಬುಕ್ ಮಾಡಿದರೆ ದಿಲ್ಲಿಯಿಂದ ಕಠ್ಮಂಡುವಿಗೆ ವಿಮಾನದಲ್ಲಿನೇರವಾಗಿ ತೆರಳಬಹುದು. ಅತ್ಯುತ್ತಮ ಸ್ಟೇ ಹೋಮ್, ರುಚಿಕರವಾದ ಸ್ಟ್ರೀಟ್ ಫುಡ್ ಜತೆಗೆ ನೇಪಾಳದ ಬೆರಗುಗೊಳಿಸುವ ನಿಸರ್ಗ ರಮಣೀಯ ತಾಣಗಳಿಗೆ ಕಡಿಮೆ ಖರ್ಚಿನಲ್ಲಿ 4–5 ದಿನಗಳ ಪ್ರವಾಸ ಕೈಗೊಳ್ಳಬಹುದು.

ಕಾಂಬೋಡಿಯ
ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ, ಪರಂಪರೆಯನ್ನು ಇನ್ನೂ ಕಾಪಾಡಿಕೊಂಡು ಬಂದಿರುವ ಕಾಂಬೋಡಿಯ ನೈಸರ್ಗಿಕವಾಗಿಯೂ ಸಮೃದ್ಧಿಯಿಂದ ಕೂಡಿದ ದೇಶ. ಸೀಮ್ ರೀಪ್ ಮತ್ತು ಫ್ನೋಮ್ ಪೆನ್ನಂತಹ ನಗರಗಳಲ್ಲಿ ಕಡಿಮೆ ಖರ್ಚಿನಲ್ಲಿ ತಂಗಬಹುದು. ಜತೆಗೆ ಸ್ಥಳೀಯ ಆಹಾರವನ್ನೂ ಸವಿಯಬಹುದು.

ಗ್ರೀಸ್
ಗ್ರೀಸ್ ಪ್ರಾಚೀನ ಇತಿಹಾಸ, ಬೆರಗುಗೊಳಿಸುವ ದ್ವೀಪ ಮತ್ತು ರೋಮಾಂಚಕ ಸಂಸ್ಕೃತಿಯ ಮಾಂತ್ರಿಕ ಸಮ್ಮಿಶ್ರಣದಿಂದ ಪ್ರವಾಸಿಗರಿಗೆ ಮರೆಯಲಾರದ ಅನುಭವ ನೀಡುತ್ತದೆ. ಮೆಡಿಟರೇನಿಯನ್ ಪಾಕ ಪದ್ಧತಿ, ಸ್ಫಟಿಕ-ಸ್ಪಷ್ಟ ಜಲಾಶಯ, ನದಿ, ಸರೋವರ ಮತ್ತು ಆಕರ್ಷಕ ಹಳ್ಳಿಗಳು ಪ್ರವಾಸವನ್ನು ಸ್ಮರಣೀಯಗೊಳಿಸುತ್ತದೆ. ಬಜೆಟ್ ಸ್ನೇಹಿ ಲಾಡ್ಜ್ಗಳು ಇಲ್ಲಿ ದೊರೆಯುತ್ತವೆ. ಒಂದು ವಾರದ ಪ್ರವಾಸವನ್ನು ಸುಮಾರು 70,000 ರೂ. – 90,000 ರೂ.ಯಲ್ಲಿ ಕೈಗೊಳ್ಳಬಹುದು.

ಪೋರ್ಚುಗಲ್
ವರ್ಣರಂಜಿತ ವಾಸ್ತುಶಿಲ್ಪ, ಐತಿಹಾಸಿಕ ಕೋಟೆಗಳು ಮತ್ತು ಕರಾವಳಿಗೆ ಹೆಸರುವಾಸಿಯಾದ ಪೋರ್ಚುಗಲ್ ಭಾರತೀಯ ಪ್ರಯಾಣಿಕರ ನೆಚ್ಚಿನ ತಾಣ ಎನಿಸಿಕೊಂಡಿದೆ. ಲಿಸ್ಬನ್ ಮತ್ತು ಪೋರ್ಟೊದಂತಹ ನಗರಗಳು ಸಂಸ್ಕೃತಿ, ವಿವಿಧ್ಯಮಯ ಆಹಾರ ಮತ್ತು ಪ್ರಕೃತಿ ಸೌಂದರ್ಯದ ಪರಿಪೂರ್ಣ ಸಮ್ಮಿಶ್ರಣ. 80,000 ರೂ. – 1,00,000 ರೂ. ಒಳಗೆ 5–6 ದಿನಗಳ ಪ್ರವಾಸ ಮುಗಿಸಬಹುದು.

ವಿಯೆಟ್ನಾಂ
ವಿಯೆಟ್ನಾಂ ಹಚ್ಚ ಹಸಿರಿನ ಗುಡ್ಡ-ಬೆಟ್ಟಗಳು, ವೈಭವದ ನಗರಗಳು ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿರುವ ರೋಮಾಂಚಕ ತಾಣ. ಹಾ ಲಾಂಗ್ ಕೊಲ್ಲಿಯ ಸುಣ್ಣದ ಕಲ್ಲುಗಳಿಂದ ಹಿಡಿದು ಪ್ರಾಚೀನ ಪಟ್ಟಣ ಹೋಯಿ ಆನ್ವರೆಗೆ ವಿಯೆಟ್ನಾಂ ಪ್ರಯಾಣಿಕರಿಗೆ ವೈವಿಧ್ಯಮಯ ಅನುಭವಗಳನ್ನು ಒದಗಿಸುತ್ತದೆ. ಪ್ರಮುಖ ತಾಣಗಳ ಭೇಟಿಯನ್ನು ಒಳಗೊಂಡಂತೆ ವಾರದ ಪ್ರವಾಸವನ್ನು 50,000 ರೂ. – 70,000 ರೂ.ಯಲ್ಲಿ ಮುಗಿಸಬಹುದು.

ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾವು ನೈಸರ್ಗಿಕ ಶ್ರೀಮಂತ ತಾಣ. ಅಲ್ಲದೆ ಹೇರಳವಾದ ವನ್ಯಜೀವಿಗಳು ಮತ್ತು ವಿಶಿಷ್ಟ ಸಾಂಸ್ಕೃತಿಕ ಅನುಭವಗಳನ್ನು ಹೊಂದಿರುವ ಅದ್ಭುತ ದೇಶ. ಬಜೆಟ್ ಫ್ರೆಂಡ್ಲಿ ಲಾಡ್ಜ್ಗಳು ಮತ್ತು ಸ್ಥಳೀಯ ಆಹಾರಗಳ ಆಯ್ಕೆಯೊಂದಿಗೆ 6–7 ದಿನಗಳ ಪ್ರವಾಸವನ್ನು ಸುಮಾರು 90,000 ರೂ. – 1,10,000 ರೂ.ಯಲ್ಲಿ ಕೈಗೊಳ್ಳಬಹುದು.