ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chanakya Niti: ನಾಯಿಗಳಿಂದ ಕಲಿಯಿರಿ ಈ 4 ಜೀವನ ಪಾಠಗಳು; ಚಾಣಕ್ಯ ನೀತಿ ಹೇಳುವ ಮಹತ್ವದ ವಿಷಯ ಇದು

ಆಚಾರ್ಯ ಚಾಣಕ್ಯರ ಪ್ರಕಾರ, ನಾಯಿ ಎಂಬ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯರು ಹಲವು ಮಹತ್ವದ ಜೀವನ ಪಾಠಗಳನ್ನು ಕಲಿಯಬಹುದು. ನಿಷ್ಠೆ, ತೃಪ್ತಿ, ಜಾಗರೂಕತೆ ಮತ್ತು ಧೈರ್ಯ ಎಂಬ ಗುಣಗಳು ಜೀವನವನ್ನು ಯಶಸ್ವಿಯಾಗಿ ನಡೆಸಲು ಸಹಾಯ ಮಾಡುತ್ತವೆ.

ನಾಯಿಗಳಿಂದ ಕಲಿಯಬೇಕಾದ ಪಾಠಗಳು ಇವು

ಚಾಣಕ್ಯ -

Profile
Sushmitha Jain Mar 11, 2026 8:04 AM

ಬೆಂಗಳೂರು: ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಜೀವನವನ್ನು ಉತ್ತಮವಾಗಿ ನಡೆಸಲು ಅನೇಕ ಮಹತ್ವದ ಉಪದೇಶಗಳನ್ನು ನೀಡಿದ್ದಾರೆ. ಮನುಷ್ಯರು ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಕೃತಿ ಹಾಗೂ ಪ್ರಾಣಿಗಳಿಂದಲೂ ಹಲವಾರು ಪಾಠಗಳನ್ನು ಕಲಿಯಬಹುದು ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ನಾಯಿ ಎಂಬ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಪ್ರಮುಖ ಗುಣಗಳಿವೆ ಎಂದು ಚಾಣಕ್ಯರು ತಿಳಿಸುತ್ತಾರೆ.

ಅದರಲ್ಲೂ ಜಗತ್ತಿನ ಅತ್ಯಂತ ನಿಷ್ಠಾವಂತ ಪ್ರಾಣಿ ಎಂದರೆ ಅದು ನಾಯಿ. ಹಸಿದಾಗ ಒಂದು ಹೊತ್ತು ಊಟ ನೀಡಿದವರನ್ನೂ, ಪ್ರೀತಿ ತೋರಿದ ತನ್ನ ಮಾಲೀಕರನ್ನೂ ನಾಯಿಗಳು ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತವೆ. ಅಗತ್ಯವಾದರೆ ಮಾಲೀಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡಲು ಸಿದ್ಧವಾಗಿರುವುದರಿಂದ ನಾಯಿಯನ್ನು ನಿಷ್ಠೆಯ ಪ್ರತೀಕವೆಂದು ಕರೆಯುತ್ತಾರೆ.
ಇದೇ ಕಾರಣಕ್ಕೆ ಅನೇಕ ಮಹನೀಯರು ಹಾಗೂ ಚಿಂತಕರು ನಾಯಿಯ ಗುಣಗಳನ್ನು ಮನುಷ್ಯರು ಕಲಿಯಬೇಕೆಂದು ಹೇಳಿದ್ದಾರೆ.

ವಿಶೇಷವಾಗಿ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮನುಷ್ಯರು ಕೆಲವು ಪ್ರಮುಖ ಜೀವನ ಪಾಠಗಳನ್ನು ನಾಯಿಗಳಿಂದಲೇ ಕಲಿಯಬಹುದು ಎಂದು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ ನಿಷ್ಠೆ, ಜಾಗರೂಕತೆ, ಧೈರ್ಯ ಮತ್ತು ತೃಪ್ತಿ ಎಂಬ ಗುಣಗಳು ನಾಯಿಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಈ ಗುಣಗಳನ್ನು ಮನುಷ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನವನ್ನು ಉತ್ತಮವಾಗಿ ನಡೆಸಬಹುದು.


ಹಾಗಾದರೆ ಚಾಣಕ್ಯ ನೀತಿಯ ಪ್ರಕಾರ ನಾಯಿಗಳಿಂದ ಮನುಷ್ಯರು ಕಲಿಯಬೇಕಾದ ಆ ಜೀವನ ಪಾಠಗಳು ಯಾವುವು ಎಂಬುದನ್ನು ತಿಳಿಯೋಣ.

ಸಿಗುವುದರಲ್ಲಿ ತೃಪ್ತಿ

ನಾಯಿಗಳಿಗೆ ತಿನ್ನಲು ಏನು ಸಿಕ್ಕರೂ ಅದರಲ್ಲಿ ಸಂತೋಷ ಕಾಣುತ್ತವೆ. ಉತ್ತಮ ಆಹಾರ ಸಿಕ್ಕರೂ, ಸರಳವಾದ ಆಹಾರ ಸಿಕ್ಕರೂ ಸಮಾನವಾಗಿ ಸ್ವೀಕರಿಸುತ್ತವೆ. ಈ ಗುಣವು ಜೀವನದಲ್ಲಿ ದೊರಕುವದ್ದರಲ್ಲಿ ತೃಪ್ತಿಯಿಂದ ಇರಬೇಕು ಎಂಬ ಪಾಠವನ್ನು ನೀಡುತ್ತದೆ.

Chanakya Niti: ಜೀವನ ಸಂಗಾತಿ ಆಯ್ಕೆ ಮಾಡುವಾಗ ಈ ಗುಣಗಳು ಇರಲೇಬೇಕು ಎನ್ನುತ್ತಾನೆ ಚಾಣಕ್ಯ

ಜಾಗರೂಕತೆ

ನಾಯಿಗಳು ಗಾಢ ನಿದ್ರೆಯಲ್ಲಿದ್ದರೂ ಸಣ್ಣ ಶಬ್ದವನ್ನೇ ಕೇಳಿದರೂ ಕೂಡ ತಕ್ಷಣ ಎಚ್ಚರಗೊಳ್ಳುತ್ತವೆ. ಈ ಗುಣವು ಮನುಷ್ಯರು ತಮ್ಮ ಗುರಿ ಮತ್ತು ಜವಾಬ್ದಾರಿಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು ಎಂಬುದನ್ನು ಸೂಚಿಸುತ್ತದೆ.

ನಿಷ್ಠೆ ಮತ್ತು ಕೃತಜ್ಞತೆ

ನಾಯಿ ತನ್ನ ಮಾಲೀಕರಿಗೆ ಅಪಾರವಾದ ನಿಷ್ಠೆಯನ್ನು ತೋರಿಸುತ್ತದೆ. ಮಾಲೀಕರ ರಕ್ಷಣೆಗಾಗಿ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧವಾಗಿರುತ್ತದೆ. ಇದೇ ರೀತಿ ಮನುಷ್ಯರು ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸಮಾಜದತ್ತ ನಿಷ್ಠೆಯಿಂದಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ.

ಧೈರ್ಯ ಮತ್ತು ನಿರ್ಭಯತೆ

ನಾಯಿ ಧೈರ್ಯಶಾಲಿ ಪ್ರಾಣಿಯಾಗಿದ್ದು, ಅಪಾಯ ಎದುರಾದಾಗ ನಿರ್ಭಯವಾಗಿ ಎದುರಿಸುತ್ತದೆ. ಇದೇ ರೀತಿ ಮನುಷ್ಯರೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಅನ್ಯಾಯದ ವಿರುದ್ಧ ನಿಲ್ಲುವ ಧೈರ್ಯ ಹೊಂದಿರಬೇಕು ಎಂಬ ಸಂದೇಶವನ್ನು ಇದು ನೀಡುತ್ತದೆ.


ಆಚಾರ್ಯ ಚಾಣಕ್ಯರ ಈ ನೀತಿಗಳು ಮನುಷ್ಯರಿಗೆ ಜೀವನದಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗುತ್ತವೆ. ನಿಷ್ಠೆ, ತೃಪ್ತಿ, ಜಾಗರೂಕತೆ ಮತ್ತು ಧೈರ್ಯ ಎಂಬ ಗುಣಗಳನ್ನು ಅಳವಡಿಸಿಕೊಂಡರೆ ಜೀವನವನ್ನು ಉತ್ತಮವಾಗಿ ನಡೆಸಬಹುದು ಎಂದು ಅವರು ತಿಳಿಸಿದ್ದಾರೆ.