Photos: ʻನಾನು ಶಿವನ ಅಚ್ಚುಮೆಚ್ಚಿನ ಮಗು...ʼ; ಒಬ್ಬಂಟಿಯಾಗಿ ಕೇದಾರನಾಥ ಯಾತ್ರೆ ಮಾಡಿದ ನಟಿ ಕೃತ್ತಿಕಾ ರವೀಂದ್ರ
ನಟಿ ಕೃತ್ತಿಕಾ ರವೀಂದ್ರ ಅವರಿಗೆ ಪ್ರವಾಸ ಮಾಡುವುದು ಎಂದರೆ, ಅಚ್ಚುಮೆಚ್ಚು. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಅವರು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ. ಈ ಹಿಂದೆ ದೇಶದ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಕೃತ್ತಿಕಾ ಅವರು ಈ ಬಾರಿ ಕೇದಾರನಾಥ ಯಾತ್ರೆ ಮಾಡಿದ್ದಾರೆ. "ಕೇದಾರನಾಥಕ್ಕೆ ಒಬ್ಬಳೇ ಟ್ರೆಕ್ (Solo Trek) ಹೋಗಬೇಕೆಂಬ ಆಸೆ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆದರೆ ಅಷ್ಟೊಂದು ಆತ್ಮವಿಶ್ವಾಸವಿರಲಿಲ್ಲ. ಒಂದು ತಿಂಗಳ ಹಿಂದೆ ಈ ಯಾತ್ರೆಯನ್ನು ಯೋಜಿಸಿದಾಗ ನಾನು ನಿಜಕ್ಕೂ ಹಿಂಜರಿಯುತ್ತಿದ್ದೆ. ಆದರೆ ಆ ಪರಶಿವನ ಮೇಲೆ ನನಗೆ ಅಪಾರ ನಂಬಿಕೆಯಿತ್ತು. ಹೇಗಾದರೂ ಮಾಡಿ ಆತನೇ ನನಗೆ ಎಲ್ಲವನ್ನೂ ಸುಲಭವಾಗಿಸುತ್ತಾನೆ ಎಂದುಕೊಂಡಿದ್ದೆ. ಆತ ಮಾಡಿದ್ದೂ ಕೂಡ ಅದನ್ನೇ.." ಎಂದು ಹೇಳಿರುವ ಕೃತ್ತಿಕಾ ಈ ಯಾತ್ರೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
"ನಾನು ಬೆಳಿಗ್ಗೆ ಸುಮಾರು 5 ಗಂಟೆಗೆ ಟ್ರೆಕ್ ಆರಂಭಿಸಿದೆ ಮತ್ತು ಬೆಳಗ್ಗೆ 11.45ಕ್ಕೆ ದೇವಸ್ಥಾನ ತಲುಪಿದೆ. ನಿಧಾನವಾಗಿ, ಸಮಾಧಾನವಾಗಿ, ಪ್ರತಿ 45 ನಿಮಿಷದಿಂದ ಒಂದು ಗಂಟೆಗೊಮ್ಮೆ 5 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳುತ್ತಾ ಸಾಗಿದೆ" ಎಂದು ಕೃತ್ತಿಕಾ ಹೇಳಿದ್ದಾರೆ.
"ನಿರಂತರವಾಗಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸುತ್ತಾ ಸಾಗಿದ್ದು, ಈ ಯಾತ್ರೆಯನ್ನು ಅತ್ಯಂತ ಸುಲಭ ಮತ್ತು ಶಾಂತಿಯುತವಾಗಿಸಿತು" ಎಂದಿದ್ದಾರೆ ಕೃತ್ತಿಕಾ.
"ಯಾವ ಕ್ಷಣದಲ್ಲಿ ನಾನು ಜಯ ಶ್ರೀ ಕೇದಾರ ಎಂಬ ಬೋರ್ಡ್ ನೋಡಿದನೋ, ಆಗ ನಾನು ಎಲ್ಲವನ್ನೂ ಮರೆತುಬಿಟ್ಟೆ" ಎಂದು ಕೃತ್ತಿಕಾ ಹೇಳಿದ್ದಾರೆ.
"ಈ ಬಾರಿಯ ಕೇದಾರನಾಥ ಯಾತ್ರೆ ನನಗೆ ವೈಯಕ್ತಿಕವಾಗಿ ಬಹಳ ವಿಶೇಷವಾಗಿತ್ತು. ನಾನು ಅಲ್ಲಿ ಒಬ್ಬಂಟಿಯಾಗಿದ್ದೆ, ಆದರೆ ಒಂಟಿತನ ಕಾಡಲಿಲ್ಲ. ಏಕೆಂದರೆ ಈ ಇಡೀ ಪ್ರಯಾಣದ ಉದ್ದಕ್ಕೂ ಆತ (ದೇವರು) ನನ್ನ ಜೊತೆಗಿದ್ದ" ಎಂದಿದ್ದಾರೆ ಕೃತ್ತಿಕಾ ರವೀಂದ್ರ.
"ನನ್ನ ಜೀವನದಲ್ಲಿ ನಾನು ಈವರೆಗೂ ಹಿಮಪಾತವನ್ನು (Snowfall) ನೋಡಿರಲಿಲ್ಲ, ಆದರೆ ಆತ ತನ್ನ ಕ್ಷೇತ್ರದಲ್ಲಿ ಅದನ್ನು ನೋಡುವಂತೆ ಮಾಡಿದ. ಆತನೇ ನನ್ನನ್ನು ಇಷ್ಟೊಂದು ಪ್ರೀತಿಸುವಾಗ, ನನ್ನ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವಾಗ ನಾನು ಇನ್ನೇನು ಕೇಳಲು ಸಾಧ್ಯ" ಎಂದು ಕೃತ್ತಿಕಾ ಹೇಳಿಕೊಂಡಿದ್ದಾರೆ.
"ನಾನು ಖಂಡಿತವಾಗಿಯೂ ಹೇಳಬಲ್ಲೆ, ನಾನು ಆತನ ಅಚ್ಚುಮೆಚ್ಚಿನ ಮಗು.. ಧನ್ಯವಾದಗಳು ನನ್ನ ಶಿವ ಮತ್ತು ಶಕ್ತಿ.. ನಿಮ್ಮಿಬ್ಬರ ಸಹಾಯವಿಲ್ಲದೆ ಈ ಪಯಣ ಸಾಧ್ಯವಾಗುತ್ತಿರಲಿಲ್ಲ.. ಧನ್ಯೋಸ್ಮಿ" ಎಂದಿದ್ದಾರೆ ಕೃತ್ತಿಕಾ.
ಈಚೆಗೆ ಬೆಂಗಳೂರಿನಲ್ಲಿ ಹೊಸ ಮನೆಯ ಗೃಹಪ್ರವೇಶ ಮಾಡಿರುವ ನಟಿ ಕೃತ್ತಿಕಾ ರವೀಂದ್ರ ಅವರು ಆ ಮನೆಗೆ ಶಿವ ಶಕ್ತಿ ಎಂದು ಹೆಸರನ್ನು ಇಟ್ಟಿದ್ದಾರೆ.