ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bengaluru Film Festival 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ

ಜನವರಿ 29ರಿಂದ ಫೆಬ್ರವರಿ 06ರವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಬೆಂಗಳೂರು ಚಲನಚಿತ್ರೋತ್ಸವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
1/7

ಬೆಂಗಳೂರಿನ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಗುರುವಾರ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ʼ17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವʼವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

2/7

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಸಿನಿಮಾಗಳು ಮನರಂಜನೆಗೆ ಸೀಮಿತವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು. ಅರ್ಥಪೂರ್ಣ ಸಿನಿಮಾಗಳ ಪ್ರದರ್ಶನದೊಂದಿಗೆ, ಅವುಗಳ‌ ಆಶಯಗಳು ಹೆಚ್ಚೆಚ್ಚು ಜನರನ್ನು ತಲುಪುವ ಮೂಲಕ ಈ ವರ್ಷದ ಬೆಂಗಳೂರು ಚಲನಚಿತ್ರೋತ್ಸವ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

3/7

ಸಮಾಜದಲ್ಲಿ ಅಸಮಾನತೆ ಇದೆ. ಅಸಮಾನತೆಗೆ ತುತ್ತಾಗಿರುವ ಮಹಿಳೆಯರು, ಹಿಂದುಳಿದವರು, ರೈತ, ದಲಿತ ಸಮುದಾಯಗಳಿವೆ. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಶ್ರಮಿಸಿದಾಗ ಸಿನಿಮಾ ಮಾಧ್ಯಮದ ಆಶಯ ಮತ್ತು ಉದ್ದೇಶ ಈಡೇರಿದಂತಾಗುತ್ತದೆ. ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಈ ಸಾಮಾಜಿಕ‌ ಜವಾಬ್ದಾರಿಯನ್ನು ಕಾಣಲು ಸಾಧ್ಯವಿತ್ತು ಎಂದು ಸಿಎಂ ಸ್ಮರಿಸಿದರು.

4/7

ವಿಶ್ವದ ಇತರೆ ಸಮಾಜಗಳು ಹಾಗೂ ಇತರೆ ದೇಶಗಳ ಜನ ಜೀವನ ಮತ್ತು ಸಂಸ್ಕೃತಿ, ಸಮಾನತೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಸಮಾಜದಲ್ಲಿ ಬದಲಾವಣೆ ತರಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನೆರವಾಗಲಿ ಎಂದ ಸಿಎಂ, ನಾವು ಪ್ರಥಮವಾಗಿ, ಅಂತಿಮವಾಗಿ ಮನುಷ್ಯರು. ನಾವು ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣುವ ಮೂಲಕ ಸಮ ಸಮಾಜ ಕಟ್ಟುವ ಕೆಲಸ ಮಾಡಬೇಕು. ಇದಕ್ಕೆ ಚಲನಚಿತ್ರ ಮಾಧ್ಯಮ‌ ನೆರವಾಗಬೇಕು ಎಂದರು.

5/7

ಇತರೆ ದೇಶಗಳಲ್ಲಿ‌ನ‌ ಮಾನವೀಯ ಸಂಬಂಧಗಳು, ಇತರೆ ದೇಶಗಳಲ್ಲಿ ಆಚರಣೆಯಲ್ಲಿರುವ ಸಮಸಮಾಜದ ಆಚರಣೆಗಳು ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಸಮಾಜಮುಖಿ ಸಿನಿಮಾ ಮಾಡುವವರಿಗೆ- ಚಿತ್ರೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಸಿದ್ಧವಿದೆ. ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

6/7

ಪ್ರಕಾಶ್ ರಾಜ್ ಸಿನಿಮಾಗೆ ಸೀಮಿತವಾಗಿಲ್ಲ

ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಸಿನಿಮಾಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಶೋಷಿತ, ರೈತ, ದಲಿತ, ಹಿಂದುಳಿದವರು ಮತ್ತು ಸಂವಿಧಾನದ ಆಶಯಗಳ‌ ಪರವಾಗಿ ಹೋರಾಡುತ್ತಿದ್ದಾರೆ. ಇವರ ಈ ಸಾಮಾಜಿಕ ಬದ್ದತೆ ಅಭಿನಂದನೀಯ ಎಂದು ಸಿಎಂ ಹೇಳಿದರು.

7/7

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಬಹುಭಾಷಾ ನಟ ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್, ಖ್ಯಾತ ನಟಿ ರುಕ್ಮಿಣಿ ವಸಂತ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ವಿಧಾನ‌ ಪರಿಷತ್ ಸದಸ್ಯೆ ನಟಿ ಉಮಾಶ್ರೀ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಸದಸ್ಯರಾದ ಚಿದಾನಂದ ಪಟೇಲ್ ಸೇರಿ ಹಲವರು ಉಪಸ್ಥಿತರಿದ್ದರು.