Chitrasanthe 2026: ಬೆಂಗಳೂರಿನಲ್ಲಿ 23ನೇ ಚಿತ್ರಸಂತೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ; ಫೋಟೊಗಳು ಇಲ್ಲಿವೆ
ನಾಡಿನ ವಿವಿಧ ಕಲಾವಿದರ ಕೈಗಳಲ್ಲಿ ಅರಳಿರುವ ವರ್ಣಚಿತ್ರಗಳು, ಕಲಾಕೃತಿಗಳು ಅತ್ಯಂತ ಸೊಗಸಾಗಿವೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರಿನಂತಹ ವಾಣಿಜ್ಯ ನಗರದಲ್ಲಿ ಪ್ರತೀ ವರ್ಷ ಇಂತದ್ದೊಂದು ಸುಂದರ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯುವತಿಯೊಬ್ಬಳು ತಾನು ಬಿಡಿಸಿದ ಸಿಎಂ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉಡುಗೊರೆಯಾಗಿ ನೀಡಿದಳು. -
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ 23ನೇ ಚಿತ್ರಸಂತೆಯನ್ನು ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಉದ್ಘಾಟಿಸಿ, ಚಿತ್ರ ಕಲಾವಿದರ ಕಲಾತ್ಮಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಚಿವ ಎಂ.ಸಿ.ಸುಧಾಕರ್ ಹಾಗೂ ಬಿ.ಎಲ್.ಶಂಕರ್ ಸೇರಿ ಚಿತ್ರಕಲಾ ಪರಿಷತ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ವೇಳೆ ಕಲಾವಿದರು ಪ್ರೀತಿಯಿಂದ ನೀಡಿದ ಕಲಾತ್ಮಕ ಉಡುಗೊರೆಗಳನ್ನು ಸಿಎಂ ಸ್ವೀಕರಿಸಿದರು. ನಾಡಿನ ವಿವಿಧ ಕಲಾವಿದರ ಕೈಗಳಲ್ಲಿ ಅರಳಿರುವ ವರ್ಣಚಿತ್ರಗಳು, ಕಲಾಕೃತಿಗಳು ಅತ್ಯಂತ ಸೊಗಸಾಗಿವೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರಿನಂತಹ ವಾಣಿಜ್ಯ ನಗರದಲ್ಲಿ ಪ್ರತೀ ವರ್ಷ ಇಂತದ್ದೊಂದು ಸುಂದರ ಕಾರ್ಯಕ್ರಮವನ್ನು ಆಯೋಜಿಸುತ್ತ, ಕರಕುಶಲಕರ್ಮಿಗಳು, ವರ್ಣಚಿತ್ರಕಾರರ ವೈವಿದ್ಯಮಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್ ಶಂಕರ್ ಅವರು ಪ್ರತಿ ಜಿಲ್ಲೆಯಲ್ಲಿ ಸಾಧಕರ ಮ್ಯೂಸಿಯಂ ಮತ್ತು ಕನಿಷ್ಠ ಎರಡು ಕಲಾಗ್ಯಾಲರಿ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಉದ್ಯಮಿಗಳು ತಮ್ಮ ಜಾಗದಲ್ಲಿ ಕನಿಷ್ಠ ಶೇಕಡಾ 10 ಮರಗಳನ್ನು ಬೆಳೆಸಬೇಕು ಎಂದೂ ಒತ್ತಾಯಿಸಿದರು.
ಈ ಬಾರಿಯೂ ಲಕ್ಷಾಂತರ ಮಂದಿ ಕಲಾಲೋಕವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ದೇಶದ 22 ವಿವಿಧ ರಾಜ್ಯಗಳಿಂದ 1500ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಆಗಮಿಸಿದ್ದಾರೆ. ಈ ಕಲಾ ಉತ್ಸವವು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯುತ್ತದೆ.
ಚಿತ್ರಸಂತೆಯಲ್ಲಿ ಪ್ರದರ್ಶನಕ್ಕಿಟ್ಟಿರುವ ಕಲಾಕೃತಿಗಳು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ. ಇತಿಹಾಸ, ಸಂಸ್ಕೃತಿ, ಮತ್ತು ಗ್ರಾಮೀಣ ಸೊಗಡಿನಂತಹ ವಿಷಯಗಳನ್ನು ಕಲಾವಿದರು ತಮ್ಮ ಕುಂಚದ ಮೂಲಕ ಅದ್ಭುತವಾಗಿ ಚಿತ್ರಿಸಿದ್ದಾರೆ.
ಚಿತ್ರಸಂತೆ ಕಲಾವಿದರಿಗೆ ನೇರವಾಗಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟ ಮಾಡುವ ಅವಕಾಶವನ್ನು ಒದಗಿಸುತ್ತದೆ. ಹಿರಿಯ ಕಲಾವಿದರು, ಯುವ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳಿಗೆ ಇದು ಮಹತ್ವದ ವೇದಿಕೆಯಾಗಿದೆ.
ಚಿತ್ರಸಂತೆಯನ್ನು ಕುಮಾರಕೃಪಾ ರಸ್ತೆ, ಶಿವಾನಂದ ವೃತ್ತದಿಂದ ವಿಂಡ್ಸರ್ ಮ್ಯಾನರ್ ಹೊಟೇಲ್ವರೆಗೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತದೆ. ಈ ಬಾರಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರತಿ ವರ್ಷ ಐವರು ಖ್ಯಾತ ಸಾಧಕ ಕಲಾವಿದರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಿತ್ತು. ಆದರೆ, ಈ ವರ್ಷದಿಂದ ಆ ಹಣದಿಂದ ಚಿತ್ರಕಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ತಿಳಿಸಿದ್ದಾರೆ.
ಚಿತ್ರಸಂತೆಗೆ ಆಗಮಿಸುವವರಿಗೆ ಅನುಕೂಲವಾಗುವಂತೆ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣ, ಮಂತ್ರಿ ಮಾಲ್ ಮೆಟ್ರೊ ನಿಲ್ದಾಣ, ವಿಧಾನಸೌದ ಮೆಟ್ರೊ ನಿಲ್ದಾಣಗಳಿಂದ ಶಿವಾನಂದ ವೃತ್ತದವರೆಗೆ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ 10 ನಿಮಿಷಕ್ಕೊಂದರಂತೆ ಬಿಎಂಟಿಸಿ ಬಸ್ಗಳು ಲಭ್ಯ ಇರಲಿವೆ.
ಚಿತ್ರಸಂತೆಗೆ ಪ್ರವೇಶ ಉಚಿತ ಇರಲಿದ್ದು, ನಾನಾ ಬಗೆಯ ಕಲಾ ಪ್ರಕಾರಗಳು ಸಂತೆಯಲ್ಲಿರಲಿವೆ. 100 ರೂ.ನಿಂದ ಕೆಲವು ಲಕ್ಷಗಳವರೆಗೆ ದರವಿರಲಿದೆ. ಒಂದು ದಿನದ ಚಿತ್ರಸಂತೆ, 4-5 ಲಕ್ಷ ಮಂದಿ ಆಗಮಿಸಲಿದ್ದು, ಸುಮಾರು 3 ಕೋಟಿ ರೂ. ವಹಿವಾಟು ನಿರೀಕ್ಷೆ ಇದೆ.