Dhruva Sarja: ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ: ಆ್ಯಕ್ಷನ್ ಪ್ರಿನ್ಸ್ ಸಿನಿ ಜರ್ನಿ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ
ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ʼಅದ್ಧೂರಿʼ, ʼಬಹದ್ಧೂರ್ʼ ಹೀಗೆ ಹಲವು ಹಿಟ್ ಸಿನಿಮಾದ ಮೂಲಕ ಸಿನಿಪ್ರಿಯರ ಮನಗೆದ್ದ ಆ್ಯಕ್ಷನ್ ಪ್ರಿನ್ಸ್ ಹೆಚ್ಚು ಫ್ಯಾನ್ ಫಾಲೊವಿಂಗ್ ಹೊಂದಿರುವ ನಟ ಕೂಡ ಹೌದು. ಸದ್ಯ ನಟನ ಹುಟ್ಟುಹಬ್ಬಕ್ಕೆ, ಸಿನಿಮಾ ನಟ- ನಟಿಯರು ಹಾಗೂ ಫ್ಯಾನ್ಸ್ ಕಾಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ.
ಅಕ್ಟೋಬರ್ 6 ಅಂದಾಗ ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್ಗೆ ಖುಷಿಯೋ ಖುಷಿ. ಕಳೆದ 3 ವರ್ಷಗಳಿಂದ ಧ್ರುವ ಸರ್ಜಾ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಈ ಭಾರಿ ಅಭಿಮಾನಿಗಳ ಜತೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಧ್ರುವ ಸರ್ಜಾ ಕೂಡ ಒಬ್ಬರು. 'ಆ್ಯಕ್ಷನ್ ಪ್ರಿನ್ಸ್' ಎಂದೇ ಖ್ಯಾತಿ ಪಡೆದಿರುವ ಇವರು, ತಮ್ಮ ಮಾಸ್ ಇಮೇಜ್ ಮತ್ತು ಆ್ಯಕ್ಷನ್ ಸಿನಿಮಾಗಳ ಮೂಲಕ ಪ್ರೇಕ್ಷ ಕರ ಮನ ಗೆದ್ದಿದ್ದಾರೆ. 1988ರ ಅಕ್ಟೋಬರ್ 6 ಬೆಂಗಳೂರಿನಲ್ಲಿ ಜನಿಸಿದ ಧ್ರುವ 'ಅದ್ಧೂರಿ' ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದರು.
ಚಿಕ್ಕಪ್ಪ ಅರ್ಜುನ್ ಸರ್ಜಾ ಮೇರೆಗೆ ನಟನಾ ತರಬೇತಿ ಪಡೆದ ಧ್ರುವ 2012ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು. ಬಳಿಕ 2013ರಲ್ಲಿ 'ಬಹುದ್ಧೂರ್' ಚಿತ್ರದಲ್ಲಿ ರಾಧಿಕಾ ಪಂಡಿತ್ ಜತೆಯಲ್ಲಿ ನಟಿಸಿದ್ದರು. 2017ರಲ್ಲಿ ತೆರೆಗೆ ಬಂದ 'ಭರ್ಜರಿ' ಚಿತ್ರ ಕೂಡ ಹಿಟ್ ಲಿಸ್ಟ್ ಸೇರಿದ್ದು ಮೊದಲ ಮೂರು ಸಿನಿಮಾದಲ್ಲೇ ಸಕ್ಸಸ್ ಗಿಟ್ಟಿಸಿಕೊಂಡಿದ್ದಾರೆ.
'ಅದ್ದೂರಿ' ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಚೊಚ್ಚಲ ನಟ ವಿಭಾಗದಲ್ಲಿ ಸೈಮಾ, ಸುವರ್ಣ, ಉದಯ ಫಿಲ್ಮ್ ಅವಾರ್ಡ್‌ಗಳು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 2021ರಲ್ಲಿ ಬಿಡುಗಡೆಯಾದ 'ಪೊಗರು' ಚಿತ್ರ ಸಹ ಹಿಟ್ ಆಗಿದ್ದು, ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಕಳೆದ ವರ್ಷ ತೆರೆಕಂಡ 'ಮಾರ್ಟಿನ್' ಮಕಾಡೆ ಮಲಗಿತ್ತು.
ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಅವರನ್ನು ಮದುವೆಯಾಗಿದ್ದಾರೆ. ಧ್ರುವ ಮತ್ತು ಪ್ರೇರಣಾ ಅಕ್ಕಪಕ್ಕದ ಮನೆಯವರಾಗಿದ್ದು, ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅವರು 2019ರ ನವೆಂಬರ್ 24ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು. ಧ್ರುವ ಮತ್ತು ಪ್ರೇರಣಾ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ.
ಧ್ರುವ ಸರ್ಜಾ ಸದ್ಯಕ್ಕೆ ಬಹುಕೋಟಿ ರೂ. ವೆಚ್ಚದ 'ಕೆಡಿ: ದಿ ಡೆವಿಲ್' ಚಿತ್ರಗಳಲ್ಲಿ ನಟಿಸುತ್ತಿದ್ದು, ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲೆ ಬಿಡುಗಡೆಯಾಗಲಿದೆ.
ನಟ ಧ್ರುವ ಸರ್ಜಾ ತಮ್ಮ 37ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ʼʼಇಷ್ಟು ವರ್ಷ ನೀವು ದುಡಿದ ಹಣದಲ್ಲಿ ಹೂವಿನ ಹಾರ, ಬ್ಯಾನರ್ಗಳನ್ನು ಹಾಕಿಸಿದ್ರಿ. ಆದರೆ ಈ ಬಾರಿ ನಿಮ್ಮ ಹಣದಿಂದ ಹೂವಿನ ಹಾರ, ಕೇಕ್, ಹಾರ ತರುವ ಬದಲು ಮಕ್ಕಳಿಗೆ ಉಪಯೋಗ ಆಗುವ ಪುಸ್ತಕ, ಪೆನ್ನು, ಜಾಮಿಟ್ರಿ, ಇತ್ಯಾದಿ ತನ್ನಿ. ಅದು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಉಪಯೋಗವಾಗುತ್ತದೆʼʼ ಎಂದು ಮನವಿ ಮಾಡಿದ್ದು ಫ್ಯಾನ್ಸ್ ಕೂಡ ಇದಕ್ಕೆ ಸಿದ್ಧರಾಗಿದ್ದಾರೆ.