Jnanpith Award: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಅಗ್ರಗಣ್ಯ ಸಾಹಿತಿಗಳಿವರು
ಜ್ಞಾನಪೀಠ ಪ್ರಶಸ್ತಿಯು ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ. ಬಹುತೇಕ ಮಂದಿ ಇದನ್ನು ಸರ್ಕಾರದಿಂದ ನೀಡಲಾಗುವ ಅತ್ಯುನ್ನತ ಗೌರವ ಎಂದು ಭಾವಿಸಿದ್ದಾರೆ. ಆದರೆ ಇದನ್ನು ಸಾಹು ಜೈನ್ ಪರಿವಾರದವರು ನೀಡುತ್ತಾರೆ., ಈ ಪ್ರಶಸ್ತಿಯನ್ನು 1961ರ ಮೇ 22ರಂದು ಸ್ಥಾಪಿಸಲಾಯಿತು. ಭಾರತೀಯ ಜ್ಞಾನಪೀಠ ಟ್ರಸ್ಟ್ ಎಂಬ ಸಂಸ್ಥೆ ಈ ಪ್ರಶಸ್ತಿಯನ್ನು ಘೋಷಿಸುತ್ತದೆ. ಈವರೆಗೆ ಹಿಂದಿಯ ಸಾಹಿತಿಗಳು 11 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡವು ಎರಡನೇ ಸ್ಥಾನದಲ್ಲಿದೆ.
ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ ಅವರಿಗೆ 2010ರಲ್ಲಿ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರರಾಗಿದ್ದಾರೆ.
ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಾಡ್ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾ ನಟ, ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರಾಗಿದ್ದರು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ಕೃತಿ ರಚಿಸಿದ್ದಾರೆ.
ಯು.ಆರ್. ಅನಂತಮೂರ್ತಿ
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಇವರು 1994ರಲ್ಲಿ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿರುವ 6ನೇ ಬರಹಗಾರರಾಗಿದ್ದಾರೆ.
ವಿ.ಕೃ. ಗೋಕಾಕ
ಕನ್ನಡಕ್ಕೆ 5ನೇ ಜ್ಞಾನಪೀಠ ಪ್ರಶಸ್ತಿಯನ್ನು 1990ರಲ್ಲಿ ತಂದುಕೊಟ್ಟ ಕೀರ್ತಿ ವಿನಾಯಕ ಕೃಷ್ಣ ಗೋಕಾಕ ಅವರಿಗೆ ಸಲ್ಲುತ್ತದೆ. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದ ಇವರು, ವಿನಾಯಕ ಎಂಬ ಕಾವ್ಯನಾಮದಿಂದ ಖ್ಯಾತರಾಗಿದ್ದರು. ಕನ್ನಡದ ಒಬ್ಬ ಮಹಾನ್ ಕವಿ, ಕಾದಂಬರಿಕಾರ, ವಿಮರ್ಶಕ ಮತ್ತು ಶಿಕ್ಷಣ ತಜ್ಞರಾಗಿದ್ದರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಇವರು 1983ರಲ್ಲಿ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಇವರು, ʼಕನ್ನಡ ಸಣ್ಣಕಥೆಗಳ ಪಿತಾಮಹʼ ಮತ್ತು ʼಕನ್ನಡದ ಆಸ್ತಿʼ ಎಂದೇ ಪ್ರಸಿದ್ಧರಾಗಿದ್ದಾರೆ.
ಶಿವರಾಮ ಕಾರಂತ
ʼಕಡಲ ತೀರದ ಭಾರ್ಗವʼ ಎಂದೇ ಖ್ಯಾತಿ ಪಡೆದ ಕೋಟ ಶಿವರಾಮ ಕಾರಂತರು ಕನ್ನಡಕ್ಕೆ 3ನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು. 1977ರಲ್ಲಿ 'ಮೂಕಜ್ಜಿಯ ಕನಸುಗಳು' ಎಂಬ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಬಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಮುಟ್ಟದ ವಿಷಯಗಳಿಲ್ಲ. ಕವನ, ನಾಟಕ, ಕಾದಂಬರಿ, ಕಥೆ, ಪ್ರವಾಸ ಸಾಹಿತ್ಯ, ಯಕ್ಷಗಾನ, ಜಾನಪದ, ಚಲನಚಿತ್ರ ಇತ್ಯಾದಿ ಹಲವು ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ.
ದ.ರಾ. ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರಿಗೆ 1973ರಲ್ಲಿ ʼನಾಕುತಂತಿʼ ಎಂಬ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ದ.ರಾ. ಬೇಂದ್ರೆ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರನ್ನು ಕನ್ನಡದ ವರಕವಿ ಎಂದು ಪರಿಗಣಿಸಲಾಗಿದೆ. ಬೇಂದ್ರೆ ಅಂಬಿಕಾತನಯದತ್ತ ಎಂಬ ಕಾವ್ಯನಾಮದಿದಂದ ಪ್ರಸಿದ್ಧರಾಗಿದ್ದಾರೆ.
ಕುವೆಂಪು
ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಕವಿ ಕುವೆಂಪು. ಕುವೆಂಪು ಕಾವ್ಯನಾಮದಿಂದ ಹೆಸರಾದ ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. 1967ರಲ್ಲಿ ಇವರ ʼಶ್ರೀ ರಾಮಾಯಣ ದರ್ಶನಂʼ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಕುವೆಂಪು 20ನೇ ಶತಮಾನ ಕಂಡ ಅದ್ಭುತ ಕವಿಗಳಲ್ಲಿ ಒಬ್ಬರು. ಎರಡನೆಯ ರಾಷ್ಟ್ರಕವಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು ಕುವೆಂಪು.