Bengaluru Rains: ಬೆಂಗಳೂರಿನಲ್ಲಿ ಮಳೆ ಅಬ್ಬರ; ಕೆರೆಗಳಂತಾದ ರಸ್ತೆಗಳು, ಜನಜೀವನ ಅಸ್ತವ್ಯಸ್ತ!
Heavy Rain in Bengaluru: ಬಿರುಗಾಳಿ ಸಹಿತ ಭಾರಿ ಮಳೆಯಿಂದ ಬೆಂಗಳೂರಿನ ಹಲವೆಡೆ ಮರಗಳು ನೆಲಕ್ಕುರುಳಿದ್ದು, ರಸ್ತೆಗಳು ಜಲಾವೃತವಾಗಿವೆ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಲ್ಲಿ ಬುಧವಾರವೂ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಿಸಿದೆ.
ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ಸ್ಟೇಷನ್ ಬಳಿ ಮಳೆಯಿಂದ ರಸ್ತೆ ಜಲಾವೃತವಾಗಿರುವುದು (ಚಿತ್ರಗಳು: ಸುಧಾಕರ್ ದೇವರಾಜು-ವಿಶ್ವವಾಣಿ) -
ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಮಳೆರಾಯ (Bengaluru Rains) ಅಬ್ಬರಿಸಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿ ಕೆರೆಗಳಂತೆ ಬದಲಾಗಿವೆ. ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು.
ಸಂಜೆ ಜಿಟಿಜಿಟಿಯಾಗಿ ಆರಂಭವಾದ ಮಳೆ ನೋಡನೋಡುತ್ತಿದ್ದಂತೆ ಜೋರು ಗಾಳಿ ಸಹಿತ ಅಬ್ಬರದ ಮಳೆಯಾಯಿತು. ಟೌನ್ ಹಾಲ್, ಮೆಜೆಸ್ಟಿಕ್, ಮಾರ್ಕೆಟ್, ವಿಧಾನಸೌಧ, ಆರ್ಆರ್ ನಗರ, ಜ್ಞಾನಭಾರತಿ ಸುತ್ತಮುತ್ತ ಭಾರಿ ಮಳೆಯಾಗಿ ವಾಹನ ಸವಾರರು ಪರದಾಡಿದ್ದಾರೆ.
ರಾಜರಾಜೇಶ್ವರಿ ನಗರದ ಮೈಸೂರು ರಸ್ತೆ, ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಇನ್ನು ಗಾಳಿ ಸಹಿತ ಮಳೆಗೆ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಹಳಿ ಮೇಲೆ ಮರದ ಕೊಂಬೆಯೊಂದು ಬಿದ್ದಿದ್ದರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಐಟಿಪಿಎಲ್ ಮತ್ತು ಸತ್ಯಸಾಯಿ ಪ್ರಶಾಂತ್ ನಿಲಯಂ ನಡುವೆ ಹಳಿಯ ಮೇಲೆ ಮರದ ಕೊಂಬೆ ಬಿದ್ದ ಹಿನ್ನೆಲೆ ವೈಟ್ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ನಡುವೆ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಕೆಲಕಾಲ ಪ್ರಯಾಣಿಕರು ಪರದಾಡಿದರು.
ಇನ್ನು ಪೂರ್ಣಿಮಾ ಥಿಯೆಟರ್ ಬಳಿ ರಸ್ತೆ ಕಾಣದೇ ಡಿವೈಡರ್ ಮೇಲೆ ಚಾಲಕ ಕಾರು ಹತ್ತಿಸಿದ್ದ. ಡಿವೈಡರ್ನಿಂದ ಕಾರು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಶಿವಾನಂದ ಸರ್ಕಲ್ ಬಳಿಯ ಬೆಂಗಳೂರು ಕೆಫೆಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
ನಾಳೆಯೂ (ಮೇ 27) ಮಳೆ ಅಬ್ಬರ (Karnataka Weather) ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ (Orange alert) ನೀಡಲಾಗಿದೆ.
ನಾಳೆ (ಮೇ 27) ಕಲಬುರಗಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೀದರ್, ರಾಯಚೂರು, ಕೊಪ್ಪಳ, ಗದಗ, ಹಾವೇರಿ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮೇ 28ರಂದು ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿಲಾಗಿದೆ. ಇನ್ನು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆ ಹೊರತುಪಡಿಸಿ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದ್ದು, ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ.