Photos: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಸ ಸಿನಿಮಾಕ್ಕೆ ಚೆನ್ನೈನಲ್ಲಿ ಮುಹೂರ್ತ; ʻಜೈ ಭೀಮ್ʼ ಡೈರೆಕ್ಟರ್ ಜೊತೆ ಕೈಜೋಡಿಸಿದ ನಟ ಸೂರ್ಯ
ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಿರುವ ಪ್ರತಿಷ್ಠಿತ 'ಹೊಂಬಾಳೆ ಫಿಲ್ಮ್ಸ್' ಸಂಸ್ಥೆ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಪ್ಯಾನ್-ಇಂಡಿಯಾ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದ್ದ ಈ ಹೊಸ ಚಿತ್ರಕ್ಕೆ ಇಂದು (ಜೂನ್ 29) ಅದ್ಧೂರಿ ಚಾಲನೆ ಸಿಕ್ಕಿದೆ. ವಿಜಯ್ ಕಿರಗಂದೂರು ನಿರ್ಮಿಸಲಿರುವ ಈ ಮೆಗಾ ಪ್ರಾಜೆಕ್ಟ್‌ಗಾಗಿ ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಹಾಗೂ 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ. ಜೆ. ಜ್ಞಾನವೇಲ್ ಕೈಜೋಡಿಸಿದ್ದಾರೆ. ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಕಯಾದು ಲೋಹರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನ ಪಾರ್ಕ್ ಹ್ಯಾಟ್ ಹೋಟೆಲ್‌ನಲ್ಲಿ ನಡೆದ ಭವ್ಯ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತವಾಗಿ ಈ ಸಿನಿಮಾ ಆರಂಭವಾಗಿದೆ. ಚಿತ್ರತಂಡದ ಪ್ರಮುಖರು ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಗಣ್ಯರು ಪಾಲ್ಗೊಂಡಿದ್ದ ಈ ಸಮಾರಂಭವುದ ಫೋಟೋಗಳು ಇಲ್ಲಿವೆ. ಸದ್ಯದಲ್ಲೇ ಈ ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾಗಣದ ಅಧಿಕೃತ ಮಾಹಿತಿ ಹೊರಬೀಳಲಿದೆ.
ಕಳೆದ ಎರಡು ದಶಕಗಳಿಂದ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಸೂರ್ಯ, ತಮ್ಮ ಖಾತೆಯಲ್ಲಿ ಎರಡು ರಾಷ್ಟ್ರ ಪ್ರಶಸ್ತಿ ಹಾಗೂ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ನಟನೆಯ ಜೊತೆಗೆ ಸಮಾಜಮುಖಿ ಸಿನಿಮಾಗಳನ್ನು ನಿರ್ಮಿಸುವ ಮೂಲಕವೂ ಅವರು ಗುರುತಿಸಿಕೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ‘ಜೈ ಭೀಮ್’ ಚಿತ್ರದ ಮೂಲಕ ಅಪಾರ ಪ್ರಶಂಸೆ ಗಳಿಸಿದ ಜ್ಞಾನವೇಲ್, ಸಾಮಾಜಿಕ ಕಳಕಳಿ, ಭಾವನಾತ್ಮಕ ಕಥಾಹಂದರಕ್ಕೆ ಹೆಸರಾದ ಭಾರತೀಯ ಚಿತ್ರರಂಗದ ವಿಶಿಷ್ಟ ನಿರ್ದೇಶಕ.
‘ಕೆ.ಜಿ.ಎಫ್’, ‘ಕಾಂತಾರ’ ಮತ್ತು ‘ಸಲಾರ್’ ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯದ್ದು. ಪ್ರಾದೇಶಿಕ ಗಡಿಗಳನ್ನು ಮೀರಿ ವಿಭಿನ್ನ ಕಥೆ ಹಾಗೂ ತಂತ್ರಜ್ಞರನ್ನು ಈ ಸಂಸ್ಥೆ ಸದಾ ಬೆಂಬಲಿಸುತ್ತಾ ಬಂದಿದೆ.
"ಒಂದೇ ರೀತಿಯ ಯೋಚನೆ ಮತ್ತು ಚಿತ್ರರಂಗದ ಮೇಲಿನ ಅಪಾರ ಪ್ರೀತಿ ಉಳ್ಳವರು ಒಂದಾದಾಗ ಅತ್ಯುತ್ತಮ ಸಿನಿಮಾ ಮೂಡಿಬರಲು ಸಾಧ್ಯ. ಸೂರ್ಯ ಮತ್ತು ಜ್ಞಾನವೇಲ್ ಅವರೊಂದಿಗೆ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ತಲುಪುವಂತಹ ಪ್ರಾಮಾಣಿಕ ಹಾಗೂ ಅರ್ಥಪೂರ್ಣ ಕಥೆಯನ್ನು ಹೇಳಲು ಹೊರಟಿರುವುದು ನಮ್ಮ ಮಹತ್ವದ ಹೆಜ್ಜೆಯಾಗಿದೆ" ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಅವರ ಸಂಗೀತ ನಿರ್ದೇಶನವಿದ್ದು, ಎಸ್. ಆರ್. ಕದಿರ್ ಅವರ ಛಾಯಾಗ್ರಹಣವಿದೆ. ಕಲಾ ನಿರ್ದೇಶನವನ್ನು ಕೆ. ಕದಿರ್ ನಿರ್ವಹಿಸುತ್ತಿದ್ದರೆ, ಫಿಲೋಮಿನ್ ರಾಜ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.