Photos: ಎಸ್‌ಆರ್‌ಎಚ್ ಓನರ್ ಕಾವ್ಯಾ ಮಾರನ್ ಜೊತೆಗೆ ಸಪ್ತಪದಿ ತುಳಿದ ಅನಿರುದ್ಧ್ ರವಿಚಂದರ್; ಸನ್ ನೆಟ್‌ವರ್ಕ್ ಫ್ಯಾಮಿಲಿಗೆ ಅಳಿಯನಾದ ʻರಾಕ್ ಸ್ಟಾರ್ʼ
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ‘ಸನ್‌ರೈಸರ್ಸ್ ಹೈದರಾಬಾದ್’ ತಂಡದ ಸಿಇಓ ಮತ್ತು ಸನ್ ನೆಟ್‌ವರ್ಕ್ ನಿರ್ದೇಶಕಿ ಕಾವ್ಯಾ ಮಾರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗ್ರೀಸ್ ದೇಶದ ಸುಂದರ ತಾಣವೊಂದರಲ್ಲಿ ನಡೆದ ಅದ್ಧೂರಿ ‘ಡೆಸ್ಟಿನೇಷನ್ ವೆಡ್ಡಿಂಗ್’ನಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ತಮ್ಮ ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ಅನಿರುದ್ಧ್ ರವಿಚಂದರ್ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಜೀವನದ ಏಕೈಕ ನೆಚ್ಚಿನ ಕ್ಷಣ, ಜೀವನಪರ್ಯಂತಕ್ಕಾಗಿ 11.11” ಎಂಬ ಸಾಲುಗಳೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಮದುವೆಯ ಸುಂದರ ಫೋಟೋಗಳು ಇಲ್ಲಿವೆ.
ಗ್ರೀಸ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ನಡೆದ ಅನಿರುದ್ಧ್ - ಕಾವ್ಯಾ ಮಾರನ್ ವಿವಾಹ.
ಈ ಹೈಪ್ರೊಫೈಲ್ ವಿವಾಹಕ್ಕೆ ಭಾರತದಿಂದ ಹಲವು ಪ್ರಮುಖ ಗಣ್ಯರು ಗ್ರೀಸ್‌ಗೆ ತೆರಳಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಕುಟುಂಬ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕುಟುಂಬ ಸಮೇತರಾಗಿ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ.
ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗಿದೆ ಎಂಬ ಮಾಹಿತಿ ಇದೆ.
ಧನುಷ್ ನಟನೆಯ '3' ಚಿತ್ರದ 'ಕೊಲವೆರಿ ಡಿ' ಹಾಡಿನ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಅನಿರುದ್ಧ್, 'ಜೈಲರ್ 2' ಸೇರಿದಂತೆ ದಕ್ಷಿಣ ಭಾರತದ ಹಾಗೂ ಬಾಲಿವುಡ್‌ನ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಸದ್ಯ ಭಾರತದ ಅತಿ ದುಬಾರಿ ಸಂಗೀತ ನಿರ್ದೇಶಕ ಎಂಬ ಖ್ಯಾತಿಗೆ ಅನಿರುದ್ಧ್ ರವಿಚಂದರ್ ಪಾತ್ರರಾಗಿದ್ದಾರೆ.
ಯುಕೆ ಮೂಲದ ಪ್ರತಿಷ್ಠಿತ ವಾರ್ವಿಕ್ ಬಿಸಿನೆಸ್ ಸ್ಕೂಲ್‌ನಿಂದ ಎಂಬಿಎ ಪದವಿ ಪಡೆದಿರುವ ಕಾವ್ಯಾ ಮಾರನ್, ಪ್ರಸ್ತುತ 'ಸನ್ ನೆಟ್‌ವರ್ಕ್' ಹಾಗೂ ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇವರಿಬ್ಬರ ಪ್ರೀತಿಯ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ಅಧಿಕೃತವಾಗಿ ವಿವಾಹದ ಮೂಲಕ ತೆರೆ ಬಿದ್ದಿದೆ.