Photos: ಕರ್ನಾಟಕ ನಕ್ಷೆಯ ಡಾಲರ್‌ನಲ್ಲಿ ಮಿಂಚಿದ ʻಡಾಲಿʼ ಮಗನ ಹೆಸರು; ನಟ ಧನಂಜಯ್ ಪುತ್ರನಿಗೆ ಇಮ್ಮಡಿ ಪುಲಕೇಶಿ ನಂಟು!
ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಮುದ್ದಾದ ಮಗನ ಹೆಸರನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕರ್ನಾಟಕದ ನಕ್ಷೆಯಿರುವ ಚಿನ್ನದ ಡಾಲರ್‌ನ ಮಧ್ಯಭಾಗದಲ್ಲಿ ಮಗನ ಹೆಸರು ಕೆತ್ತಿಸಿ ಪ್ರದರ್ಶಿಸುವ ಮೂಲಕ, ಪುಟ್ಟ ಕಂದನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಕನ್ನಡ ನೆಲ, ಜಲ ಹಾಗೂ ಭಾಷೆಯ ಮೇಲೆ ಅಪಾರ ಪ್ರೇಮ ಹೊಂದಿರುವ ಧನಂಜಯ್ ಅವರು ಮಗನಿಗಿಟ್ಟಿರುವ ಈ ಹೆಸರಿನ ಹಿಂದೆ ಸುಂದರವಾದ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಾಗಿರುವ ‘ಎರೆಯ’ ಎಂಬುದು ಪುರಾತನ ಕನ್ನಡದ ಅರ್ಥಪೂರ್ಣ ಪದವಾಗಿದ್ದು, ಇದಕ್ಕೆ ‘ಒಡೆಯ’, ‘ಸ್ವಾಮಿ’ ಹಾಗೂ ‘ಅಧಿಪತಿ’ ಎಂಬ ಗಂಭೀರ ಅರ್ಥಗಳಿವೆ. ಇಲ್ಲಿವೆ ನೋಡಿ ‘ಡಾಲಿ’ ಮಗನ ಮುದ್ದಾದ ಫೋಟೋಗಳು.
ನಟ ಧನಂಜಯ್ ದಂಪತಿ ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಮುದ್ದಾದ ಗಂಡು ಮಗುವನ್ನು ಪರಿಚಯಿಸಿ, ‘ಎರೆಯ’ ಎಂದು ಹೆಸರಿಟ್ಟಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.
‘ಎರೆಯ’ ಎಂಬುದು ಪುರಾತನ ಕನ್ನಡದ ಗೌರವಪೂರ್ಣ ಪದವಾಗಿದ್ದು, ಇದರ ಅರ್ಥ ‘ಒಡೆಯ’, ‘ಸ್ವಾಮಿ’ ಅಥವಾ ‘ಅಧಿಪತಿ’ ಎಂಬುದಾಗಿದೆ.
ಕರ್ನಾಟಕದ ಹೆಮ್ಮೆಯ ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ಕೂಡ ಇತಿಹಾಸದಲ್ಲಿ ‘ಎರೆಯ’ ಎಂದೇ ದಾಖಲಾಗಿದೆ.
ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಮತ್ತು ಅರಸರನ್ನು ಗೌರವದಿಂದ ಸಂಬೋಧಿಸಲು ಈ ಹೆಸರನ್ನು ಬಳಸಲಾಗುತ್ತಿತ್ತು.
ರಾಜವಂಶದ ಪಾರಂಪರಿಕ ಶಕ್ತಿ ಹಾಗೂ ಗಾಂಭೀರ್ಯವನ್ನು ಹೊಂದಿರುವ ಕಾರಣದಿಂದ ಧನಂಜಯ್ ದಂಪತಿ ಈ ಹೆಸರನ್ನು ಆಯ್ಕೆ ಮಾಡಿದ್ದು, ಮಗನನ್ನು "ತಮ್ಮ ಹೃದಯದ ರಾಜ, ಪುಟ್ಟ ಅಧಿಪತಿ" ಎಂದು ಬಣ್ಣಿಸಿದ್ದಾರೆ.
ಮಗುವನ್ನು ಯಾವಾಗ ತೋರಿಸುತ್ತೀರಿ ಮತ್ತು ಹೆಸರೇನು ಎಂದು ನಿರಂತರವಾಗಿ ಕೇಳುತ್ತಿದ್ದ ಅಭಿಮಾನಿಗಳಿಗೆ ಹಬ್ಬದ ದಿನವೇ ಭಾವನಾತ್ಮಕ ಸಂದೇಶದ ಮೂಲಕ ಉತ್ತರ ನೀಡಿದ್ದಾರೆ.
ಈ ವಿಶಿಷ್ಟ ಹಾಗೂ ಅರ್ಥಪೂರ್ಣ ಐತಿಹಾಸಿಕ ಹೆಸರಿಗೆ ಸ್ಯಾಂಡಲ್‌ವುಡ್ ಗಣ್ಯರು, ಆಪ್ತರು ಮತ್ತು ಅಪಾರ ಅಭಿಮಾನಿಗಳಿಂದ ಪ್ರಶಂಸೆ ಹಾಗೂ ಆಶೀರ್ವಾದಗಳು ಹರಿದುಬರುತ್ತಿವೆ.