ʻಜೈ ಶ್ರೀ ರಾಮ..ʼ ಎನ್ನುತ್ತಾ ಅಂಜನಾದ್ರಿ ಬೆಟ್ಟದಲ್ಲಿ ʻಜೈ ಹನುಮಾನ್ʼ ಸಿನಿಮಾ ಆರಂಭಿಸಿದ ರಿಷಬ್ ಶೆಟ್ಟಿ; ಇಲ್ಲಿವೆ ಮುಹೂರ್ತದ ಫೋಟೋಗಳು
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ʻಜೈ ಹನುಮಾನ್ʼ ಸಿನಿಮಾಕ್ಕೆ ಕೊಪ್ಪಳದ ಗಂಗಾವತಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ನೆರವೇರಿದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಟ ರಿಷಬ್ ಶೆಟ್ಟಿ, "ಜೈ ಶ್ರೀ ರಾಮ.. ಹನುಮಂತನ ದೈವಿಕ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್... ಈ ಪವಿತ್ರ ಪ್ರಯಾಣವನ್ನು ಪ್ರಾರಂಭಿಸುವುದು ನನ್ನ ಹೃದಯವನ್ನು ಅಪಾರ ಕೃತಜ್ಞತೆ ಮತ್ತು ಜವಾಬ್ದಾರಿಯಿಂದ ತುಂಬಿಸಿದೆ" ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮುಹೂರ್ತ ಸಮಾರಂಭದ ಫೋಟೋಗಳು ಇಲ್ಲಿವೆ ನೋಡಿ.
ಹನುಮ ಹುಟ್ಟಿದ ಸ್ಥಳ ಅಂಜನಾದ್ರಿಯಲ್ಲಿಯೇ ‘ಜೈ ಹನುಮಾನ್’ ಸಿನಿಮಾಗೆ ಮುಹೂರ್ತ ಮಾಡಿರುವುದು ವಿಶೇಷವಾಗಿದೆ.
‘ಜೈ ಹನುಮಾನ್’ ಚಿತ್ರದ ಮುಹೂರ್ತದ ಮೊದಲ ಶಾಟ್‌ಗೆ ಟೀ ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಕ್ಲ್ಯಾಪ್ ಮಾಡಿದರು. ಖ್ಯಾತ ವಿತರಕ ಅನಿಲ್ ಥಡಾನಿ ಕ್ಯಾಮೆರಾಗೆ ಚಾಲನೆ ನೀಡಿದರು.
‘ಜೈ ಹನುಮಾನ್’ ಮುಹೂರ್ತ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಜೊತೆ ಅವರ ಪತ್ನಿ ಪ್ರಗತಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ವರ್ಮಾ, ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್, ನಟ ತೇಜ ಸಜ್ಜಾ ಮುಂತಾದವರು ಭಾಗಿಯಾಗಿದ್ದರು.
ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ 'ಹನುಮಾನ್' ಚಿತ್ರದ ಸೀಕ್ವೆಲ್ ಆಗಿ ಜೈ ಹನುಮಾನ್ ಮೂಡಿಬರುತ್ತಿದ್ದು, ತೆಲುಗು ಚಿತ್ರರಂಗದ ಪ್ರಖ್ಯಾತ ಬ್ಯಾನರ್ ಮೈತ್ರಿ ಮೂವೀ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ ರವಿ ಶಂಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಜೈ ಹನುಮಾನ್' ಸಿನಿಮಾವು ನಿರ್ದೇಶಕ ಪ್ರಶಾಂತ್ ವರ್ಮಾ ಕ್ರಿಯೇಟ್ ಮಾಡಿರುವ 'ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್' ಅಡಿಯಲ್ಲಿ ತಯಾರಾಗಲಿದೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.
ರಿಷಬ್ ಶೆಟ್ಟಿ ಅವರ ಜೈ ಹನುಮಾನ್ ಸಿನಿಮಾಕ್ಕೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ.