Indira Gandhi Birth Anniversary: ಭಾರತದ ಉಕ್ಕಿನ ಮಹಿಳೆಯ ಹುಟ್ಟು ಹಬ್ಬ ಇಂದು; ಭಾರತದ ಏಕೈಕ ಮಹಿಳಾ ಪ್ರಧಾನಿ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ಮಾಹಿತಿ
Indira Gandhi: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ದಿನ ಇಂದು. ತಮ್ಮ ನಾಯಕತ್ವದಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬ್ಯಾಂಕುಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿಯಂತಹ ಸುಧಾರಣೆಗಳನ್ನು ಜಾರಿಗೆ ತಂದ ಅವರು ಭಾರತದ ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದಿದ್ದರು. ಅವರ ಬಗ್ಗೆ ಇನ್ನಷ್ಟು ಆಸಕ್ತಿದಾಯಕ ಮಾಹಿತಿ ಇಲ್ಲಿದೆ
ಬೆಂಗಳೂರು: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಹುಟ್ಟುಹಬ್ಬವನ್ನು ಇಂದು (November 19) ಆಚರಿಸಲಾಗುತ್ತಿದೆ. ತಮ್ಮ ತಂದೆ ಜವಾಹರಲಾಲ್ ನೆಹರು (Jawaharlal Nehru) ನಂತರ ಭಾರತದ ಎರಡನೇ ಅತಿ ಹೆಚ್ಚು ಅವಧಿಯ ಪ್ರಧಾನ ಮಂತ್ರಿಯಾಗಿದ್ದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇಂದಿರಾ ಗಾಂಧಿಯವರು ಪಾತ್ರರಾಗಿದ್ದಾರೆ. 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ಮನೆಯ ಇಬ್ಬರು ಭದ್ರತಾ ಸಿಬ್ಬಂದಿ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇಂದು ಭಾರತದ ಉಕ್ಕಿನ ಮಹಿಳೆ ಎಂದೇ ಹೆಸರಾಗಿದ್ದ ಇಂದಿರಾ ಗಾಂಧಿ ಅವರ 108ನೇ ಜನ್ಮದಿನವಾಗಿದ್ದು, ಅವರ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
1917ರ ನವಂಬರ್ 19 ರಂದು ಜವಾಹರ್ ಲಾಲ್ ನೆಹರು ಮತ್ತು ಕಮಲಾ ದಂಪತಿಗಳಿಗೆ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು.
ಇಂದಿರಾ ಗಾಂಧಿಯವರು ದೆಹಲಿಯ ಮಾಡರ್ನ್ ಸ್ಕೂಲ್, ಸೇಂಟ್ ಸಿಸಿಲಿಯಾಸ್ ಮತ್ತು ಅಲಹಾಬಾದ್‌ನ ಸೇಂಟ್ ಮೇರಿಸ್ ಕಾನ್ವೆಂಟ್‌ನಲ್ಲಿ ಅಧ್ಯಯನ ಮಾಡಿದರು. ಅವರು ಜಿನೀವಾ ಇಂಟರ್‌ನ್ಯಾಶನಲ್ ಸ್ಕೂಲ್, ಬ್ಯೂಕ್ಸ್‌ನಲ್ಲಿರುವ ಎಕೋಲ್ ನೌವೆಲ್ಲೆ ಮತ್ತು ಪುಣೆ ಮತ್ತು ಬಾಂಬೆಯ ಪೀಪಲ್ಸ್ ಓನ್ ಸ್ಕೂಲ್‌ನಲ್ಲಿಯೂ ಅಧ್ಯಯನ ಮಾಡಿದ್ದರು.
ಉನ್ನತ ಶಿಕ್ಷಣಕ್ಕಾಗಿ ಇಂದಿರಾ ಗಾಂಧಿಯವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿಕೊಂಡರು. ಆದರೆ, ಅವರ ಕೋರ್ಸ್ ಮುಗಿಸಲು ಸಾಧ್ಯವಾಗಲಿಲ್ಲ.1942 ರಲ್ಲಿ ಫಿರೋಜ್ ಗಾಂಧಿಯನ್ನು ವಿವಾಹವಾದರು. ಅವರಿಗೆ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಎಂಬ ಇಬ್ಬರು ಗಂಡು ಮಕ್ಕಳಿದ್ದರು.
ರಾಜಕೀಯ ಕುಟುಂಬದಿಂದ ಬಂದ ಇಂದಿರಾಜಿಯವರೂ ಉತ್ತಮ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದರು. ಕೇವಲ 11 ನೇ ವಯಸ್ಸಿನಲ್ಲಿ, ಬ್ರಿಟಿಷ್ ಆಳ್ವಿಕೆಯ ವಿರುದ್ಧ ಮಕ್ಕಳ ಮಂಕಿ ಆರ್ಮಿಯನ್ನು ರಚಿಸಿದರು. 1938 ರಲ್ಲಿ, ಅವರು ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಜವಾಹರಲಾಲ್ ನೆಹರು ಪ್ರಧಾನಿಯಾದ ನಂತರ ಇಂದಿರಾ ಗಾಂಧಿ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು.
ತಂದೆಯ ಮರಣದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾಗಾಂಧಿ ಅವರ ವರ್ಚಸ್ಸು ಹೆಚ್ಚಾಯಿತು. ಇಂದಿರಾಜಿ ದೇಶದ ನಾಯಕಿಯಾಗಿ ಹೊರಹೊಮ್ಮಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂಪುಟದಲ್ಲಿ ಅವರನ್ನು ಮಾಹಿತಿ ಮತ್ತು ಪ್ರಸಾರ ಸಚಿವರನ್ನಾಗಿ ಮಾಡಲಾಯಿತು.
1966ರಲ್ಲಿ ಶಾಸ್ತ್ರಿಯವರ ನಿಧನದ ನಂತರ ಇಂದಿರಾ ಗಾಂಧಿ ಅವರಿಗೆ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಿತು. ‘ಗುಂಗಿ ಗುಡಿಯ’ ಎಂದೇ ಕರೆಸಿಕೊಳ್ಳುತ್ತಿದ್ದ ಇಂದಿರಾಗಾಂಧಿ ಅವರು ಪ್ರಧಾನಿಯಾದ ನಂತರ ಇಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಜಗತ್ತಿನೆಲ್ಲೆಡೆ ಸದ್ದು ಮಾಡಿತು.
ಇಂದಿರಾ ಗಾಂಧಿ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ. ಅವರು ಜನವರಿ 1966ರಿಂದ ಮಾರ್ಚ್ 1977ರವರೆಗೆ ಮತ್ತು ಜನವರಿ 1980ರಿಂದ ಅಕ್ಟೋಬರ್ 1984ರಲ್ಲಿ ಅವರ ಹತ್ಯೆಯಾಗುವವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಆಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದರು. ಹೆಚ್ಚಿನ ಇಳುವರಿಯ ಬೀಜಗಳು, ನೀರಾವರಿ ಯೋಜನೆ, ಆರ್ಥಿಕತೆಗೆ ಉತ್ತೇಜನ, ಆಹಾರ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ಮತ್ತು ಪರಮಾಣು ಕಾರ್ಯಕ್ರಮಗಳ ನೇತೃತ್ವ ವಹಿಸಿದರು. 1974ರಲ್ಲಿ ಭೂಗತ ಪರಮಾಣು ಸ್ಪೋಟ ನಡೆಸಿ ವಿಶ್ವಕ್ಕೆ ಭಾರತದ ಶಕ್ತಿಯನ್ನು ಮೊದಲ ಬಾರಿಗೆ ಪರಿಚಯಿಸಿದರು.
ಇಂದಿರಾ ಗಾಂಧಿ ಭಾರತದ ಅತ್ಯಂತ ಪ್ರಭಾವಶಾಲಿ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು. ಇಂದಿರಾ ಗಾಂಧಿ ತಮ್ಮ ನೇರ ನಡೆ ಮತ್ತು ಸದೃಢ ವ್ಯಕ್ತಿತ್ವಕ್ಕೆ ಬಹಳ ಹೆಸರುವಾಸಿಯಾಗಿದ್ದರು. ಬಾಂಗ್ಲಾದೇಶದ ರಚನೆಗೆ ಕಾರಣವಾದ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸುವ ಪಾಕಿಸ್ತಾನದೊಂದಿಗೆ ಇಂದಿರಾ ಗಾಂಧಿ ಯುದ್ಧಕ್ಕೆ ಕರೆ ನೀಡಿದ್ದರು.