ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ದೇಶದ ದೃಷ್ಟಿಕೋನವನ್ನೇ ಬದಲಾಯಿಸಿದ 10 ಭಾರತೀಯ ಮಹಿಳೆಯರು

ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ. ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಮಹಿಳೆಯರ ಸಾಧನೆಯನ್ನು ಸಂಭ್ರಮಿಸಲಾಗುತ್ತದೆ, ಗೌರವಿಸಲಾಗುತ್ತದೆ. ಎವರೆಸ್ಟ್ ಶಿಖರಗಳಿಂದ ಹಿಡಿದು ಬಾಹ್ಯಾಕಾಶದವರೆಗೆ ಸಾಧನೆ ಮಾಡಿರುವ ಅನೇಕ ಭಾರತೀಯ ಮಹಿಳೆಯರಿದ್ದಾರೆ. ಇವರು ಸಾಕಷ್ಟು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಇಂಥವರಲ್ಲಿ ದೇಶದ ಮಹಿಳೆಯರ ಕುರಿತಾದ ದೃಷ್ಟಿಕೋನವನ್ನು ಬದಲಾಯಿಸಿದ 10 ಭಾರತೀಯ ಮಹಿಳಾ ಐಕಾನ್‌ಗಳು ಇವರು.

ಸಂಗ್ರಹ ಚಿತ್ರ
1/12

ವಿಶ್ವದಾದ್ಯಂತ ಇಂದು ಮಾರ್ಚ್ 8 ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ವಿಜ್ಞಾನ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗುತ್ತದೆ. ಲಿಂಗ ತಾರತಮ್ಯವನ್ನು ಕೊನೆಗೊಳಿಸಲು ಸಾಧನೆಗೆ ಮಹಿಳೆಯರನ್ನು ಪ್ರೇರೇಪಿಸಲು ಈ ದಿನ ಒಂದು ಅವಕಾಶವಾಗಿ ಗುರುತಿಸಲ್ಪಟ್ಟಿದೆ.

2/12

ಈ ವರ್ಷ ಹಕ್ಕುಗಳು, ನ್ಯಾಯ, ಕ್ರಿಯೆ.. ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಎಂಬ ಧ್ಯೇಯ ವಾಕ್ಯದಡಿ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಎವರೆಸ್ಟ್ ಶಿಖರಗಳಿಂದ ಹಿಡಿದು ಬಾಹ್ಯಾಕಾಶದವರೆಗೆ ಇವತ್ತು ಸಾಧನೆ ಮಾಡಿರುವ ಅನೇಕ ಭಾರತೀಯ ಮಹಿಳೆಯರಿದ್ದಾರೆ. ಇವರು ಸಾಕಷ್ಟು ಮಂದಿಗೆ ಸ್ಫೂರ್ತಿಯೂ ಆಗಿದ್ದಾರೆ. ಇಂಥವರಲ್ಲಿ ದೇಶದ ಮಹಿಳೆಯರ ಕುರಿತಾದ ದೃಷ್ಟಿಕೋನವನ್ನು ಬದಲಾಯಿಸಿದ 10 ಭಾರತೀಯ ಮಹಿಳಾ ಐಕಾನ್‌ಗಳು ಇವರಾಗಿದ್ದಾರೆ.

3/12

ಬಚೇಂದ್ರಿ ಪಾಲ್: ಎವರೆಸ್ಟ್ ಶಿಖರವನ್ನೇರಿದ ಮೊದಲ ಭಾರತೀಯ ಮಹಿಳೆ ಬಚೇಂದ್ರಿ ಪಾಲ್. ಇವರು ವಿಶ್ವದ ತುದಿಯನ್ನು ತಲುಪಲು ಪ್ರಾಣವನ್ನೇ ಪಣಕ್ಕಿಟ್ಟಿದ್ದರು. ಸಾವಿನ ಸಮೀಪದವರೆಗೆ ಹೋಗಿ ಬಂದ ಇವರು ಶಿಖರದ ತುತ್ತ ತುದಿಯನ್ನು 1984ರ ಮೇ 23ರಂದು ಮುಟ್ಟಿದರು. 2019 ರಲ್ಲಿ ಇವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಯಿತು.

4/12

ಕಲ್ಪನಾ ಚಾವ್ಲಾ: ಹರಿಯಾಣದ ಕರ್ನಾಲ್‌ನಲ್ಲಿ ಜನಿಸಿದ ಕಲ್ಪನಾ ಚಾವ್ಲಾ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮಹಿಳೆ. ಇವರನ್ನು 1994ರಲ್ಲಿ ನಾಸಾ ಆಯ್ಕೆ ಮಾಡಿಕೊಂಡಿತ್ತು. 1996ರ ನವೆಂಬರ್ ನಲ್ಲಿ ಎಸ್ ಟಿಎಸ್ -87 ನಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರೈಮ್ ರೋಬೋಟಿಕ್ ಆರ್ಮ್ ಆಪರೇಟರ್ ಆಗಿ ನಿಯೋಜಿಸಲಾದ ಇವರು 2003ರ ಫೆಬ್ರವರಿ 1ರಂದು ನಡೆದ ದುರಂತದಲ್ಲಿ ಸಾವನ್ನಪ್ಪಿದ್ದರು.

5/12

ಟೆಸ್ಸಿ ಥಾಮಸ್: ಭಾರತದ ಕ್ಷಿಪಣಿ ಮಹಿಳೆ ಎಂದು ಕರೆಯಲ್ಪಡುವ ಟೆಸ್ಸಿ ಥಾಮಸ್, ದೇಶದ ಕ್ಷಿಪಣಿ ಯೋಜನೆಯನ್ನು ಮುನ್ನಡೆಸಿದ ಮೊದಲ ಮಹಿಳಾ ವಿಜ್ಞಾನಿ. ಅಗ್ನಿ-IVರ ಯೋಜನಾ ನಿರ್ದೇಶಕರಾಗಿದ್ದರು. ಇದನ್ನು 2011ರಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಬಳಿಕ ಅಗ್ನಿ V ಯೋಜನೆಯ ನೇತೃತ್ವ ವಹಿಸಲಾಯಿತು. 5,000 ಕಿ.ಮೀ. ವ್ಯಾಪ್ತಿ, ದೀರ್ಘ ಶ್ರೇಣಿ, ಪರಮಾಣು ಸಾಮರ್ಥ್ಯದ ಕ್ಷಿಪಣಿಯನ್ನು 2012 ರಲ್ಲಿ ಥಾಮಸ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

6/12

ಕಿರಣ್ ಬೇಡಿ: ನಿವೃತ್ತ ಭಾರತೀಯ ಪೊಲೀಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಕಿರಣ್ ಬೇಡಿ 1972 ರಲ್ಲಿ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಅಧಿಕಾರಿ ಶ್ರೇಣಿಗೆ ಸೇರಿದ ಮೊದಲ ಭಾರತೀಯ ಮಹಿಳೆ ಎನ್ನುವ ಇತಿಹಾಸವನ್ನು ಸೃಷ್ಟಿಸಿದ್ದಾರೆ. ತಿಹಾರ್ ಜೈಲಿನಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಜೈಲು ಸುಧಾರಣೆಗಳಿಗಾಗಿ ಅವರು ಮಾಡಿರುವ ಕಾರ್ಯಗಳಿಗೆ 1994ರಲ್ಲಿ ಅವರಿಗೆ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೀಡಲಾಯಿತು. ಮೇ 2016 ರಿಂದ ಫೆಬ್ರವರಿ 2021 ರವರೆಗೆ ಪುದುಚೇರಿಯ 24 ನೇ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಇವರು ಕಾರ್ಯ ನಿರ್ವಹಿಸಿದ್ದಾರೆ.

7/12

ಕಿರಣ್ ಮಜುಂದಾರ್ ಶಾ: 1978 ರಲ್ಲಿ ಬೆಂಗಳೂರಿನ ಗ್ಯಾರೇಜ್‌ನಲ್ಲಿ 10,000 ರೂ. ಗಳ ಸೀಮಿತ ಬಂಡವಾಳದೊಂದಿಗೆ ಬಯೋಕಾನ್ ಅನ್ನು ಸ್ಥಾಪಿಸಿದ ಕಿರಣ್ ಮಜುಂದಾರ್ ಶಾ ಅವರು ಲಿಂಗ ತಾರತಮ್ಯ ಮತ್ತು ಹಣಕಾಸಿನ ಸವಾಲುಗಳನ್ನು ನಿವಾರಿಸಿ 120ಕ್ಕೂ ಹೆಚ್ಚು ದೇಶಗಳಿಗೆ ಕೈಗೆಟುಕುವ ಇನ್ಸುಲಿನ್ ಮತ್ತು ಕ್ಯಾನ್ಸರ್ ಔಷಧಗಳನ್ನು ತಲುಪಿಸಲು ಭಾರತದ ಮೊದಲ ಬಯೋಟೆಕ್ ಸ್ಟಾರ್ಟ್ಅಪ್ ಅನ್ನು ರಚಿಸಿದರು.

8/12

ಆನಂದಿ ಗೋಪಾಲ್ ಜೋಶಿ: 1865ರ ಮಾರ್ಚ್ 31ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ಜನಿಸಿದ ಆನಂದಿ ಗೋಪಾಲ್ ಜೋಶಿ, ಭಾರತದ ಮೊದಲ ಮಹಿಳಾ ವೈದ್ಯೆ ಎಂದು ಪರಿಗಣಿಸಲಾಗಿದೆ. ಅವರು ಪಾಶ್ಚಿಮಾತ್ಯ ವೈದ್ಯಕೀಯದಲ್ಲಿ ಪದವಿ ಪಡೆದರು. 1886ರಲ್ಲಿ ಪೆನ್ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದು ಭಾರತಕ್ಕೆ ಮರಳಿದ ಅವರನ್ನು ಕೊಲ್ಲಾಪುರದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾಯಿತು.

9/12

ಕ್ಯಾಪ್ಟನ್ ಶಾಲಿಜಾ ಧಾಮಿ: 2023ರಲ್ಲಿ ದೇಶದ ಮುಂಚೂಣಿಯ ಯುದ್ಧ ಘಟಕದ ಕಮಾಂಡಿಂಗ್ ಅಧಿಕಾರ ವಹಿಸಿಕೊಂಡ ಮೊದಲ ಮಹಿಳಾ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಪಶ್ಚಿಮ ವಲಯದಲ್ಲಿ ಕ್ಷಿಪಣಿ ಸ್ಕ್ವಾಡ್ರನ್ ಅನ್ನು ಮುನ್ನಡೆಸಲು ಆಯ್ಕೆ ಮಾಡಲಾಯಿತು. 2019ರಲ್ಲಿ ಅವರು ವಾಯುಪಡೆಯಲ್ಲಿ ಹಾರುವ ಘಟಕದೊಳಗೆ ಫ್ಲೈಟ್ ಕಮಾಂಡರ್ ಹುದ್ದೆಗೆ ಬಡ್ತಿ ಪಡೆದ ಮೊದಲ ಮಹಿಳಾ ಅಧಿಕಾರಿಯಾಗುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದರು.

10/12

ಮೇರಿ ಕೋಮ್: ಆರು ಬಾರಿ ವಿಶ್ವ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಮೇರಿ ಕೋಮ್ ಬಡತನ ಮತ್ತು ತಾಯ್ತನದ ಸವಾಲುಗಳನ್ನು ನಿವಾರಿಸಿ ಒಲಿಂಪಿಕ್ ಪದಕ ವಿಜೇತರಾದರು. ಮಣಿಪುರದಿಂದ ವಿಶ್ವ ವೇದಿಕೆಗೆ ಅವರ ಪ್ರಯಾಣವು ಬಾಕ್ಸಿಂಗ್ ಕೈಗವಸುಗಳನ್ನು ತೆಗೆದುಕೊಳ್ಳಲು ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಇಡೀ ಪೀಳಿಗೆಯನ್ನು ಪ್ರೇರೇಪಿಸಿದೆ.

11/12

ಸುಶ್ಮಿತಾ ಸೇನ್: 1994ರಲ್ಲಿ ಮಿಸ್ ಯೂನಿವರ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾದ ಬಾಲಿವುಡ್ ನಟಿ ಸುಶ್ಮಿತಾ ಸೇನ್, ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ 1994 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತದ ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಸುಶ್ಮಿತಾ ಸೇನ್ ಕೇವಲ 18 ನೇ ವಯಸ್ಸಿನಲ್ಲಿ ಈ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದರು.

12/12

ಸೈನಾ ನೆಹ್ವಾಲ್: ಲಂಡನ್ 2012ರ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ 2015 ರಲ್ಲಿ ಸಿಂಗಲ್ಸ್ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ವಿಶ್ವದ ನಂ. 1 ಆಟಗಾರ್ತಿಯಾದರು. 2015 ರಲ್ಲಿ, ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಡೆದ ಫೈನಲ್‌ನಲ್ಲಿ ಕೆರೊಲಿನಾ ಮರೀನಾ ವಿರುದ್ಧ ಸೋತ ಅನಂತರ ಭಾರತೀಯ ಬ್ಯಾಡ್ಮಿಂಟನ್ ತಾರೆ ಬೆಳ್ಳಿ ಪದಕವನ್ನು ಗೆದ್ದರು.

ವಿದ್ಯಾ ಇರ್ವತ್ತೂರು

View all posts by this author