IPL 2025: ಇನ್ನುಳಿದ ಪಂದ್ಯಗಳ ನಿಮಿತ್ತ ಭಾರತಕ್ಕೆ ಆಗಮಿಸಿದ ವಿದೇಶಿ ಆಟಗಾರರ ವಿವರ!
ಒಂದು ವಾರದ ವಿರಾಮದ ನಂತರ ಮೇ 17 ರಂದು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಪುನರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ತವರಿಗೆ ತೆರಳಿರುವ ವಿದೇಶಿ ಆಟಗಾರರು ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದಾಗ್ಯೂ, ಟೂರ್ನಿಯ ಇನ್ನುಳಿದ ಭಾಗದ ಪಂದ್ಯಗಳನ್ನು ಆಡಲು ಕೆಲ ವಿದೇಶಿ ಆಟಗಾರರ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಅಂದ ಹಾಗೆ ಯಾರೆಲ್ಲಾ ವಿದೇಶಿ ಆಟಗಾರರ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಆಡಲಿದ್ದಾರೆಂದು ಇಲ್ಲಿ ವಿವರಿಸಲಾಗಿದೆ.



ಗುಜರಾತ್ ಟೈಟನ್ಸ್
ಜೋಸ್ ಬಟ್ಲರ್ ಮತ್ತು ಜೆರಾಲ್ಡ್ ಕೋಯೆಡ್ಜಿ ಅವರು ಬುಧವಾರ ಗುಜರಾತ್ ಟೈಟನ್ಸ್ ತಂಡಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಮೇ 29 ರಂದು ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ನಿಮಿತ್ತ ಬಟ್ಲರ್, ಇಂಗ್ಲೆಂಡ್ ತಂಡದಲ್ಲಿ ಸೇರಿಸಲಾಗಿದೆ. ಜೆರಾಲ್ಡ್ ಕೊಯೆಡ್ಜಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ನಿಮಿತ್ತ ಪ್ಲೇಆಫ್ಸ್ ತೊರೆಯುವ ಸಾಧ್ಯತೆ ಇದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ರೊಮ್ಯಾರಿಯೊ ಶೆಫರ್ಡ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಜಾಕೋಬ್ ಬೆಥೆಲ್ ಹಾಗೂ ಲುಂಗಿ ಎನ್ಗಿಡಿ ಕೂಡ ಮರಳಿದ್ದರು. ಇವರ ಪೈಕಿ ಬೆಥೆಲ್, ಲುಂಗಿನ ಎನ್ಗಿಡಿ, ಶೆಫರ್ಡ್ ಪ್ಲೇಆಫ್ಸ್ಗೆ ಲಭ್ಯರಾಗುವುದು ಅನುಮಾನ.

ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಪ್ಲೇಆಫ್ ರೇಸ್ನಲ್ಲಿದೆ. ಆದರೆ, ತಮ್ಮ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಲಭ್ಯತೆಯ ಬಗ್ಗೆ ಅನುಮಾನವಿದೆ. ಸ್ಟಾರ್ಕ್ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಆರಂಭಿಕ ಆಟಗಾರ ಜೇಕ್ ಮೆಗರ್ಕ್ ಅವರು ಕೂಡ ಮರಳುವುದಿಲ್ಲ. ಇನ್ನುಳಿದ ವಿದೇಶಿ ಆಟಗಾರರು ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ವಿದೇಶಿ ಆಟಗಾರರು ಮತ್ತೆ ತಂಡವನ್ನು ಸೇರಲಿದ್ದಾರೆ. ಆದರೆ, ಲೀಗ್ ಹಂತದ ನಂತರ ವಿಲ್ ಜ್ಯಾಕ್ಸ್ ಮತ್ತು ಕಾರ್ಬಿನ್ ಬಾಷ್ ಲಭ್ಯತೆಯ ಬಗ್ಗೆ ಅವರಿಗೆ ಅನುಮಾನಗಳಿವೆ. ಉಳಿದ ಪಂದ್ಯಗಳಿಗೆ ಅವರ ಆಫ್ಘನ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಲಭ್ಯರಿದ್ದಾರೆ.

ಪಂಜಾಬ್ ಕಿಂಗ್ಸ್
ಆಸ್ಟ್ರೇಲಿಯಾದ ಜಾಶ್ ಇಂಗ್ಲಿಸ್ ಮತ್ತು ಮಾರ್ಕಸ್ ಸ್ಟೊಯ್ನಿಸ್ ಮತ್ತೆ ತಂಡವನ್ನು ಸೇರಿಕೊಳ್ಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನುಳಿದ ವಿದೇಶಿ ಆಟಗಾರರು ತಂಡವನ್ನು ಸೇರಲು ಸಿದ್ಧರಿದ್ದಾರೆ. ಪ್ಲೇ-ಆಫ್ಸ್ಗೆ ಮಾರ್ಕೊ ಯೆನ್ಸೆನ್ ಭಾಗವಹಿಸುವುದು ಕೂಡ ಕಷ್ಟಕರವಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್
ಆಂಡ್ರೆ ರಸೆಲ್, ಸುನೀಲ್ ನರೇನ್ ಮತ್ತು ರೊವ್ಮನ್ ಪೊವೆಲ್ ದುಬೈನಲ್ಲಿ ಬೀಡು ಬಿಟ್ಟಿದ್ದಾರೆ. ಅವರು ಕ್ವಿಂಟನ್ ಡಿ ಕಾಕ್, ಎನ್ರಿಕ್ ನೊರ್ಕಿಯಾ ಮತ್ತು ರಹಮಾನಲ್ಲಾ ಗುರ್ಬಾಝ್ ಅವರೊಂದಿಗೆ ತಂಡವನ್ನು ಸೇರಲಿದ್ದಾರೆ. ಇದರ ನಡುವೆ ಮೊಯೀನ್ ಅಲಿ ಮತ್ತು ಸ್ಪೆನ್ಸರ್ ಜಾನ್ಸನ್ ಅವರ ಲಭ್ಯತೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್
ನೂರ್ ಅಹ್ಮದ್, ಡೆವಾಲ್ಡ್ ಬ್ರೆವಿಸ್, ಮತಿಶ ಪತಿರಣ, ಡೆವೋನ್ ಕಾನ್ವೇ ಎಲ್ಲರೂ ತಂಡವನ್ನು ಸೇರುವ ನಿರೀಕ್ಷೆಯಿದೆ. ರಚಿನ್ ರವೀಂದ್ರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅವರಿಗೆ ಕೇವಲ ಎರಡು ಪಂದ್ಯಗಳು ಮಾತ್ರ ಉಳಿದಿವೆ. ಜೇಮೀ ಓವರ್ಟನ್ ಇಂಗ್ಲೆಂಡ್ನ ಏಕದಿನ ತಂಡದ ಭಾಗವಾಗಿದ್ದಾರೆ. ಆದ್ದರಿಂದ, ಅವರು ಹಿಂತಿರುಗಲು ಸಾಧ್ಯವಿಲ್ಲ. ಆದರೆ, ಆಲ್ರೌಂಡರ್ ಸ್ಯಾಮ್ ಕರನ್ ತಂಡವನ್ನು ಸೇರುವ ನಿರೀಕ್ಷೆಯಿದೆ.

ಸನ್ರೈಸರ್ಸ್ ಹೈದರಾಬಾದ್
ಸನ್ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಆದರೆ, ಅವರ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ತಂಡವನ್ನು ಸೇರಲು ಒಪ್ಪಿಕೊಂಡಿದ್ದಾರೆ. ಹೆನ್ರಿಚ್ ಕ್ಲಾಸೆನ್ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶ್ರೀಲಂಕಾದ ಕಮಿಂದು ಮೆಂಡಿಸ್ ಮತ್ತು ಎಶಾನ್ ಮಾಲಿಂಗ ಕೂಡ ತಂಡವನ್ನು ಸೇರಲಿದ್ದಾರೆ.