ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದೇಶದಲ್ಲಿ ನಾಡಿನ ಸಾಧಕರನ್ನು ಸನ್ಮಾನಿಸುವ ವಿಶ್ವವಾಣಿಯ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಕಾರ್ಯ ಕ್ರಮದ ವೇಳೆ ನಾನಾ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸುವುದರ ಜತೆ ಭಾರತ ಹಾಗೂ ಆಯಾ ದೇಶದ ಕಲೆ, ಸಂಸ್ಕೃತಿಯನ್ನು ಪಸರಿಸುವ ಪ್ರಯತ್ನದಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ 11 ದೇಶಗಳಲ್ಲಿ ನಡೆದ ಯಶಸ್ವಿ ಕಾರ್ಯಕ್ರಮದ ಬಳಿಕ ಇದೀಗ ಕರುನಾಡಿನ 13 ಸಾಧಕರಿಗೆ ದಕ್ಷಿಣ ಆಫ್ರಿಕಾದ ಸನ್ ಸಿಟಿಯಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಾಧಕರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸೌತ್ ಆಫ್ರಿಕನ್ ಟೂರಿಸಂ ರೀಜನಲ್ ಜನರಲ್ ಮ್ಯಾನೇಜರ್ ಕೊಬಾನಿ ಗಾಡ್ಸ್ ವಿಲ್ ಮ್ಯಾಂಕೋಟ್ವ್ಯಾ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಪರ್ವ ಗ್ರೂಪ್ ಸಂಸ್ಥಾಪಕ ಎಚ್.ಪಿ.ನಿಲೇಶ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹೇಗಿರಲಿದೆ ಪ್ರಶಸ್ತಿ ಆಯ್ಕೆ?
ವಿಶ್ವವಾಣಿ ಗ್ಲೋಬಲ್ ಫಾರಂ ನೀಡುವ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು,ರಾಜ್ಯದ ಸಾಧಕರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಮೂರು ಜನರ ಆಯ್ಕೆದಾರರ ಸಮಿತಿಯಿರುತ್ತದೆ. ಆ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಸಾಧಕರನ್ನು ಗುರುತಿಸಲಾಗುತ್ತದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ 12ನೇ ಆವೃತ್ತಿಗೆ 60 ಜನರ ಪಟ್ಟಿಯನ್ನು ಆಯ್ಕೆದಾರರ ಸಮಿತಿ ನೀಡಿತ್ತು. ಆದರೆ 40ಕ್ಕಿಂತ ಹೆಚ್ಚು ಜನರ ತಂಡವಾದರೆ ಪ್ರತ್ಯೇಕವಾಗಿ ತೆರಳಬೇಕಾಗುತ್ತದೆ. ಆದ್ದರಿಂದ ಭಾವನಾತ್ಮಕವಾಗಿ ಒಂದು ತಂಡವಾಗಿ ಇರಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ನಿಯೋಗದ ಮಿತಿಯನ್ನು 40ಕ್ಕೆ ತಗ್ಗಿಸಲಾಗಿದೆ. ಕಳೆದ 11 ಕಾರ್ಯಕ್ರಮದಲ್ಲಿ ಸುಮಾರು 220ಕ್ಕೂ ಹೆಚ್ಚು ಸಾಧಕರನ್ನು ವಿಶ್ವವಾಣಿ ಗುರುತಿಸಿದೆ. ಸಾಮಾನ್ಯವಾಗಿ ಬೆಂಗಳೂರು ಅಥವಾ ಮುಂಬೈನಲ್ಲಿ ಕಾರ್ಯಕ್ರಮವನ್ನು ನಡೆಸುವ ಪ್ರತೀತಿ ನಡೆದುಕೊಂಡು ಬಂದಿತ್ತು. ಆದರೆ ರಾಜ್ಯದ ಸಾಧಕರನ್ನು ವಿದೇಶಿ ನೆಲದಲ್ಲಿ ಗುರುತಿಸಿ, ಸನ್ಮಾನಿಸಬೇಕು ಎನ್ನುವ ಉದ್ದೇಶದಿಂದ ವಿದೇಶದಲ್ಲಿ ನೆಲದಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎನ್ನುವುದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಅಭಿಪ್ರಾಯ.