Lehenga Fashion 2026: ಸೆಲೆಬ್ರಿಟಿ ಲುಕ್‌ಗಾಗಿ ಧರಿಸಿ ಎಂಬ್ರಾಯ್ಡರಿ ಜಾಕೆಟ್ ಲೆಹೆಂಗಾ
ಹೆವಿ ಡಿಸೈನ್‌ನ ಇರುವಂತಹ ಎಂಬ್ರಾಯ್ಡರಿ ಜಾಕೆಟ್ ಲೆಹೆಂಗಾಗಳು ಈ ಸೀಸನ್‌ನಲ್ಲಿ ಗ್ರ್ಯಾಂಡ್ ಲುಕ್ ಬಯಸುವವರನ್ನು ಸವಾರಿ ಮಾಡುತ್ತಿವೆ. ಇದ್ಯಾವ ಬಗೆಯ ಲೆಹೆಂಗಾ? ಫ್ಯಾಷನಿಸ್ಟಾಗಳು ಸ್ಟೈಲಿಂಗ್‌ಗೆ ನೀಡುವ ಟಿಪ್ಸ್ ಏನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಎಂಬ್ರಾಯ್ಡರಿ ಜಾಕೆಟ್ ಲೆಹೆಂಗಾಗಳು ಈ ಸೀಸನ್‌ನಲ್ಲಿ ಪಾಪುಲರ್ ಆಗುತ್ತಿವೆ. ನಯಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ.
ಗ್ರ್ಯಾಂಡ್ ಲುಕ್ ನೀಡುವ ಎಂಬ್ರಾಯ್ಡರಿ ಜಾಕೆಟ್ ಲೆಹೆಂಗಾ
ಸೆಲೆಬ್ರಿಟಿ ಲುಕ್ ಇಲ್ಲವೇ ಗ್ರ್ಯಾಂಡ್ ಲುಕ್ ನೀಡುವಂತಹ ಹೆವಿ ಡಿಸೈನ್ ಇರುವಂತಹ ಬಗೆಬಗೆಯ ಡಿಸೈನ್‌ನ ಎಂಬ್ರಾಯ್ಡರಿ ಜಾಕೆಟ್ ಲೆಹೆಂಗಾಗಳು, ಜರ್ದೋಸಿ, ಕಲಾಂಕಾರಿ, ಕಟ್‌ದಾನಾ ಸೇರಿದಂತೆ ನಾನಾ ಬಗೆಯ ವಿನ್ಯಾಸದಲ್ಲಿ ಮೇಳೈಸುತ್ತಿವೆ.
ವೆರೈಟಿ ಜಾಕೆಟ್ ಲೆಹೆಂಗಾ
ಪ್ರತಿ ವರ್ಷದ ಕೊನೆಯಲ್ಲಿ ಆಗಮಿಸುವ ಈ ಜಾಕೆಟ್ ಲೆಹೆಂಗಾಗಳು ಈ ಬಾರಿ ಸಮಯಕ್ಕೂ ಮುನ್ನವೇ ಕಾಲಿಟ್ಟಿವೆ. ವೆಲ್ವೆಟ್, ಸೆಮಿ ಕ್ರೇಪ್, ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಜಾಕೆಟ್‌ಗಳಲ್ಲಿ ಕಾಣಿಸಿಕೊಂಡಿವೆ. ಈ ಹಿಂದೆ ಇವು ಪ್ರಿಂಟೆಡ್ ಹಾಗೂ ಮಾನೋಕ್ರೋಮ್ ವಿನ್ಯಾಸದಲ್ಲಿ ಬಂದಿದ್ದವು. ಆದರೆ, ಈ ಬಾರಿ ಸಾಲಿಡ್ ಕಲರ್‌ಗಳಲ್ಲಿ ಅದರಲ್ಲೂ ಹೆವ್ವಿ ಎಂಬ್ರಾಯ್ಡರಿ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ.
ಮನಮೋಹಕ ಎಂಬ್ರಾಯ್ಡರಿ ಜಾಕೆಟ್
ಫ್ಲೋರಲ್, ಮೊಟಿವ್ಸ್, ಬುಟ್ಟಾ, ಥ್ರೆಡ್ ಎಂಬ್ರಾಯ್ಡರಿ ಹೀಗೆ ಸಾಕಷ್ಟು ಗೋಲ್ಡನ್ ಥ್ರೆಡ್‌ನಲ್ಲಿ ಮಾಡಿರುವಂತಹ ವಿನ್ಯಾಸಗಳು ಈ ಜಾಕೆಟ್ ಶೈಲಿಯ ಲೆಹೆಂಗಾಗಳಲ್ಲಿ ಕಾಣಬಹುದು. ಸದ್ಯ ಇವು ಸೆಲೆಬ್ರೆಟಿ ಲುಕ್ ನೀಡುವುದರಿಂದ ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾ ರಿಕ್ಕಿ.
ನಾನಾ ಶೈಲಿಯಲ್ಲಿ ಲೆಹೆಂಗಾ ಧರಿಸಿ
ಎಲ್ಲರಿಗೂ ಗೊತ್ತಿರುವಂತೆ ಲೆಹೆಂಗಾಗಳು ತ್ರೀ ಪೀಸ್‌ನಲ್ಲಿ ದೊರೆಯುತ್ತವೆ. ಈ ಜಾಕೆಟ್ ಲೆಹೆಂಗಾಗಳನ್ನು ಎರಡ್ಮೂರು ರೀತಿಯಲ್ಲಿ ಧರಿಸಬಹುದು. ಜಾಕೆಟ್ ಇಲ್ಲದೇ, ಜಾಕೆಟ್ ಧರಿಸಿ ಹಾಗೂ ಜಾಕೆಟ್ ಮೇಲೆ ದುಪಟ್ಟಾ ಧರಿಸಿಯೂ ಸ್ಟೈಲಿಂಗ್ ಮಾಡಬಹುದು.