Rajinikanth: ಬರೋಬ್ಬರಿ 34 ವರ್ಷಗಳ ಬಳಿಕ ಒಂದಾಗಲಿದ್ದಾರೆ ರಜನಿಕಾಂತ್-ಮಣಿರತ್ನಂ
Mani Ratnam: ಇಡೀ ಭಾರತೀಯ ಚಿತ್ರದಲ್ಲೇ ಹೊಸದೊಂದು ದಾಖಲೆ ಬರೆಯಲು ಕಾಲಿವುಡ್ನ ಜನಪ್ರಿಯ ನಿರ್ದೇಶಕ-ಸೂಪರ್ ಸ್ಟಾರ್ ಜೋಡಿ ಸಜ್ಜಾಗಿದೆ. ಹೌದು, ತಮ್ಮ ಕ್ಲಾಸ್ ಚಿತ್ರದಿಂದಲೇ ಗಮನ ಸೆಳೆದ ಮಣಿರತ್ನಂ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಂಡು ಕಮರ್ಷಿಯಲ್ ಸಿನಿಮಾಗಳಿಗೆ ಹೊಸದೊಂದು ಭಾಷ್ಯ ಬರೆದ ರಜನಿಕಾಂತ್ (Rajinikanth) ಮತ್ತೆ ಒಂದಾಗುವ ಸೂಚನೆ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತಾದರೆ ಬರೋಬ್ಬರಿ 3 ದಶಕಗಳ ಬಳಿಕ ಈ ಜೋಡಿ ಒಂದಾಗಲಿದೆ.

ಮಣಿರತ್ನಂ ಮತ್ತು ರಜನಿಕಾಂತ್.


ಜೂ. 5ರಂದು ʼಥಗ್ ಲೈಫ್ʼ ತೆರೆಗೆ
ಸದ್ಯ ಮಣಿರತ್ನಂ ಮತ್ತು ಕಮಲ್ ಹಾಸನ್ ಕಾಂಬಿನೇಷನ್ನ ʼಥಗ್ ಲೈಫ್ʼ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೂ. 5ರಂದು ಇದು ವಿಶ್ವಾದ್ಯಂತ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕಮಲ್ ಹಾಸನ್ ಜತೆಗೆ ಸಿಲಂಬರಸನ್, ತ್ರಿಶಾ ಕೃಷ್ಣನ್, ಅಭಿರಾಮಿ, ಜೋಜು ಜಾರ್ಜ್, ನಾಸರ್, ಪಂಕಜ್ ತ್ರಿಪಾಠಿ, ಐಶ್ವರ್ಯಾ ಲಕ್ಷ್ಮೀ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

38 ವರ್ಷಗಳ ಬಳಿಕ ಒಂದಾದ ಹಿಟ್ ಜೋಡಿ
ವಿಶೇಷ ಎಂದರೆ ಕಮಲ್ ಹಾಸನ್ ಮತ್ತು ಮಣಿರತ್ನಂ ಬರೋಬ್ಬರಿ 38 ವರ್ಷಗಳ ಬಳಿಕ ʼಥಗ್ ಲೈಫ್ʼಗಾಗಿ ಒಂದಾಗಿದ್ದಾರೆ. ಕೊನೆಯ ಬಾರಿಗೆ ಇವರು 1987ರಲ್ಲಿ ರಿಲೀಸ್ ಆದ ʼನಾಯಗನ್ʼ ಚಿತ್ರಕ್ಕಾಗಿ ಜತೆಗೆ ಕೆಲಸ ಮಾಡಿದ್ದರು.

ಫ್ಯಾನ್ಸ್ ಥ್ರಿಲ್
ಈ ಚಿತ್ರದ ಬಿಡುಗಡೆ ಹೊಸ್ತಿಲಿನಲ್ಲಿ ಇನ್ನೊಂದು ಥ್ರಿಲ್ಲಿಂಗ್ ಸುದ್ದಿ ಹೊರ ಬಿದ್ದಿದೆ. ರಜನಿಕಾಂತ್ ಅವರ ಮುಂದಿನ ಚಿತ್ರಕ್ಕೆ ಮಣಿರತ್ನಂ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. 1991ರಲ್ಲಿ ಬಿಡುಗಡೆಯಾದ ಮಣಿರತ್ನಂ ನಿರ್ದೇಶನದ ʼದಳಪತಿʼ ಸಿನಿಮಾದಲ್ಲಿ ರಜನಿಕಾಂತ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಈ ದಿಗ್ಗಜರು ಜತೆಯಾಗಿ ಕಾಣಿಸಿಕೊಂಡಿರಲಿಲ್ಲ. ಅದಾಗ್ಯೂ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ.

ಮಣಿರತ್ನಂ ಹೇಳಿದ್ದೇನು?
ಈ ಬಗ್ಗೆ ಮಾತನಾಡಿದ ಮಣಿರತ್ನಂ, ʼʼಈ ಯೋಜನೆ ಕಾರ್ಯರೂಪಕ್ಕೆ ಬರುತ್ತಾ ಎನ್ನುವುದು ನನಗೆ ತಿಳಿದಿಲ್ಲ. ಅದಾಗ್ಯೂ ರಜನಿಕಾಂತ್ಗಾಗಿ ಕಥೆ ರೆಡಿ ಮಾಡಿಟ್ಟಿದ್ದೇನೆ. ಸದ್ಯ ಅವರು ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತ ಹೋಗುತ್ತಿದ್ದಾರೆʼʼ ಎಂದು ತಿಳಿಸಿದ್ದಾರೆ.

ಮಣಿರತ್ನಂ ಚಿತ್ರದಲ್ಲಿ ರುಕ್ಮಿಣಿ ವಸಂತ್ಗೆ ಚಾನ್ಸ್?
ʼಥಗ್ ಲೈಫ್ʼ ಚಿತ್ರದ ಬಳಿಕ ಮಣಿರತ್ನಂ ತೆಲುಗು ನಟ ನವೀನ್ ಪೊಲಿಶೆಟ್ಟಿ ಚಿತ್ರ ಕೈಗೆತ್ತಿಕೊಳ್ಳಲಿಸದ್ದಾರೆ ಎನ್ನಲಾಗಿದೆ. ತಮಿಳು ಜತೆಗೆ ತೆಲುಗಿನಲ್ಲೂ ಇದು ತಯಾರಾಗಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವದಂತಿಯೂ ಹಬ್ಬಿದೆ.